ವ್ಯಕ್ತಿಯೊಬ್ಬರಿಗೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗಿಳಿಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.
ಎಕ್ಸ್ ಖಾತೆಯಲ್ಲಿ ವೈರಲ್ ವಿಡಿಯೋ ಜೊತೆಗೆ ಪ್ರಕಟಣೆಯನ್ನು ಹಂಚಿಕೊಂಡಿರುವ ಕೆಎಸ್‌ಆರ್‌ಟಿಸಿ “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸದರಿ ವಿಡಿಯೋ ತುಣುಕು ಎರಡೂವರೆ ವರುಷಗಳ ಹಿಂದಿನದಾಗಿದ್ದು, ಈ ಘಟನೆಯು 2022ರ ಸೆ.7ರಂದು ವಾಹನ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ 159/160ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಎಂಬವರು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮದ್ಯಪಾನ ಮಾಡಿದ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿದ್ದರು.”
“ಅವರಿಗೆ ಹೊಡೆದು, ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಸಂಸ್ಥೆಯು ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅಮಾನತ್ತು ಶಿಕ್ಷೆಯನ್ನು ಸಹ ವಿಧಿಸಲಾಗಿರುತ್ತದೆ. ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಇತರೆ ಸಿಬ್ಬಂದಿಗೆ ಪ್ರಯಾಣಿಕರೊಡನೆ ಸೌಹಾರ್ದದಿಂದ ವರ್ತಿಸುವಂತೆ ಎಚ್ಚರಿಕೆ ನೀಡಲಾಗಿತ್ತು” ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ವೀಡಿಯೋ ತುಣುಕಿನ ಬಗ್ಗೆ ಸ್ಪಷ್ಟೀಕರಣ: pic.twitter.com/pUWSp544tz
— KSRTC (@KSRTC_Journeys) February 23, 2025
ಮದ್ಯಪಾನ ಮಾಡಿದ ವ್ಯಕ್ತಿ ಬಸ್ ಹತ್ತಲು ಮುಂದಾದಾಗ ವಿರೋಧ ವ್ಯಕ್ತಪಡಿಸಿದ ನಿರ್ವಾಹಕ, ಮೊದಲು ಅವರ ಕೈಯಲ್ಲಿದ್ದ ಛತ್ರಿಯನ್ನು ಕಿತ್ತೆಸೆದಿದ್ದರು. ಬಳಿಕ, ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದರು ಎಂದು ವರದಿಯಾಗಿತ್ತು. ನಿರ್ವಾಹಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


