ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ, ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರಿಗೆ 12 ವರ್ಷ ಹಳೆಯ ಪ್ರಕರಣವೊಂದರಲ್ಲಿ ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ 1.20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ದಂಡದ ಮೊತ್ತವನ್ನು ವಾರ್ಷಿಕ ಶೇಖಡ 24ರಷ್ಟು ಬಡ್ಡಿ ಸಮೇತ ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಫೆಬ್ರವರಿ 24 ಅಥವಾ 25ರಂದು ದೂರದರ್ಶನ ಮತ್ತು ಎಲ್ಲಾ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಮುಖೇನ ಅರ್ಜಿದಾರ ಎನ್.ಕೆ ಮೋಹನ್ ರಾಮ್ ಅವರಿಗೆ ಜೋಶಿ ಬೇಷರತ್ ಕ್ಷಮೆ ಕೋರಬೇಕು ಎಂದು ನ್ಯಾಯಾಲಯ ಆದೇಶಿಸಿರುವುದಾಗಿ ವರದಿಗಳು ಹೇಳಿವೆ.
1984ರಲ್ಲಿ ದೂರದರ್ಶನದ ನಿರ್ದೇಶಕರಾಗಿದ್ದಾಗ ಮಹೇಶ್ ಜೋಶಿ ಅವರು ಮೋಹನ್ ರಾಮ್ ಸೇರಿ ಏಳು ಸಹೋದ್ಯೋಗಿಗಳ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣ ಸುಳ್ಳು ಎಂದು 2013ರಲ್ಲಿ ಹೈಕೋರ್ಟ್ ತೀರ್ಪು ನೀಡಿ, ಪ್ರಕರಣವನ್ನು ವಜಾ ಮಾಡಿತ್ತು.
ಹೈಕೋರ್ಟ್ ತೀರ್ಪಿನ ನಂತರ ಮೋಹನ್ ರಾಮ್ ಅವರು, ತಮಗಾಗಿದ್ದ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟ ಸೇರಿ 1.20 ಲಕ್ಷ ರೂಪಾಯಿ ಪರಿಹಾರ ಕೋರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ 14ನೇ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ನಳಿನಿ ಕುಮಾರ್ ಅವರು ಬುಧವಾರ (ಫೆ.19) ಆದೇಶ ನೀಡಿದ್ದಾರೆ.
ಸೂಚಿತ ಅವಧಿಯಲ್ಲಿ ಪರಿಹಾರದ ಹಣ ಪಾವತಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಮತ್ತು ಏಳು ದಿನ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿರುವುದಾಗಿ ವರದಿಯಾಗಿದೆ.
“ದೂರದರ್ಶನಕ್ಕೆ ಸೇರ್ಪಡೆಯಾದಾಗಿನಿಂದಲೂ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ಮಹೇಶ್ ಜೋಶಿ ಅವರ ನಡೆ ಸರ್ವತಾ ಒಪ್ಪುವಂಥದ್ದಲ್ಲ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿರುವುದಾಗಿ ಬಾರ್ & ಬೆಂಚ್ ವರದಿ ಹೇಳಿದೆ.
ಬೆಂಗಳೂರು | ದೂರು ನೀಡಲು ಠಾಣೆಗೆ ಹೋದ ಅಪ್ರಾಪ್ತ ಸಂತ್ರಸ್ತೆ ಮೇಲೆ ಅತ್ಯಾಚಾರ ; ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ


