ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಕೂಡಲೇ ತನ್ನ ಸಿದ್ದಾಂತ ಜಾರಿಗೆ ಮುಂದಾಗಿದ್ದು, ಅದರ ಭಾಗವಾಗಿ ಮೂರು ಪ್ರದೇಶಗಳ ಮುಸ್ಲಿಂ ಹೆಸರುಗಳ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ.
ಗುರುವಾರ (ಫೆ.27) ಮೂವರು ಬಿಜೆಪಿ ಶಾಸಕರು ನಜಾಫ್‌ಗಢ ಮತ್ತು ಮುಸ್ತಾಬಾದ್ ವಿಧಾನಸಭಾ ಕ್ಷೇತ್ರಗಳ ಹೆಸರುಗಳನ್ನು ಹಾಗೂ ರಾಜಧಾನಿಯ ಮೊಹಮ್ಮದ್‌ಪುರ ಗ್ರಾಮದ ಹೆಸರನ್ನು ಬದಲಾಯಿಸಲು ಪ್ರಸ್ತಾಪಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಧಾನಸಭೆಯಲ್ಲಿ ಮಾತನಾಡಿದ ನಜಾಫ್‌ಗಢ ಶಾಸಕಿ ನೀಲಂ ಪಹಲ್ವಾನ್, ತಮ್ಮ ಕ್ಷೇತ್ರದ ಹೆಸರನ್ನು ನಹರ್‌ಗಢ ಎಂದು ಬದಲಾಯಿಸಬೇಕೆಂದು ಪ್ರಸ್ತಾಪಿಸಿದ್ದಾರೆ.
“ಮೊಘಲ್ ಚಕ್ರವರ್ತಿ ಎರಡನೇ ಶಾ ಆಲಂ ನಜಾಫ್‌ಗಢದ ಮೇಲೆ ಹಿಡಿತ ಸಾಧಿಸಿದಾಗ ಜನರು ಅವರನ್ನು ವಿರೋಧಿಸಿದ್ದರು. ನಜಾಫ್ ಖಾನ್ ಅವರನ್ನು ಈ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಅಂದಿನಿಂದ ಈ ಪ್ರದೇಶವನ್ನು ನಜಾಫ್‌ಗಢ ಎಂದು ಕರೆಯಲಾಗುತ್ತಿದೆ” ಎಂದು ಹೇಳಿದ್ದಾರೆ.
“1857ರಲ್ಲಿ ದೊರೆ ನಹರ್ ಸಿಂಗ್ ಈ ಪ್ರದೇಶವನ್ನು ದೆಹಲಿ ಪ್ರಾಂತ್ಯದ ನಿಯಂತ್ರಣಕ್ಕೆ ತಂದಿದ್ದರು. ಹಾಗಾಗಿ, ಈ ಪ್ರದೇಶಕ್ಕೆ ನಹರ್ ಸಿಂಗ್ ಅವರ ಹೆಸರಿಟ್ಟರೆ ಮಾತ್ರ ಅವರನ್ನು ನಿಜವಾಗಿಯೂ ಗೌರವಿಸಿದಂತಾಗುತ್ತದೆ” ಎಂದು ಪಹಲ್ವಾನ್ ತಿಳಿಸಿದ್ದಾರೆ.
“ನಜಾಫ್‌ಗಢದ ನಿವಾಸಿಗಳು ನಜಾಫ್ ಖಾನ್‌ನಿಂದ ದಬ್ಬಾಳಿಕೆಗೆ ಒಳಗಾಗಿದ್ದರಿಂದ ಕ್ಷೇತ್ರದ ಹೆಸರನ್ನು ಬದಲಾಯಿಸಲು ಬಯಸಿದ್ದಾರೆ” ಎಂದು” ಶಾಸಕಿ ನೀಲಂ ಹೇಳಿದ್ದಾರೆ.
ಶಾಸಕಿ ನೀಲಂ ಅವರ ಪ್ರಸ್ತಾವನೆಯ ನಂತರ, ಆರ್‌ಕೆ ಪುರಂನ ಬಿಜೆಪಿ ಶಾಸಕ ಅನಿಲ್ ಶರ್ಮಾ ಅವರು ತಮ್ಮ ಕ್ಷೇತ್ರದ ಮೊಹಮ್ಮದ್‌ಪುರ ಗ್ರಾಮದ ಹೆಸರನ್ನು ಮಾಧವಪುರಂ ಎಂದು ಬದಲಾಯಿಸಲು ಪ್ರಸ್ತಾಪಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
“ಬಹಳ ಹಿಂದೆಯೇ ಎಂಸಿಡಿ (ದೆಹಲಿ ಪಾಲಿಕೆ) ಮೊಹಮ್ಮದ್‌ಪುರ ಗ್ರಾಮದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಆದರೆ, ಅದನ್ನು ಈ ಹಿಂದಿನ ಆಮ್ ಆದ್ಮಿ ಪಕ್ಷದ ಸರ್ಕಾರ ಪರಿಗಣಿಸಿರಲಿಲ್ಲ. ಈಗ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೆಸರು ಬದಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ಗುರುವಾರ ದೆಹಲಿ ವಿಧಾನಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಆರು ಬಾರಿಯ ಶಾಸಕ ಮೋಹನ್ ಸಿಂಗ್ ಬಿಶ್ತ್, ತಮ್ಮ ಕ್ಷೇತ್ರವಾದ ಮುಸ್ತಾಫಾಬಾದ್ ಅನ್ನು ಶಿವ ವಿಹಾರ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
“ಇದು ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯಾಗಿದೆ. ನಾವು ಭರವಸೆ ಈಡೇರಿಸಲು ಬದ್ಧರಾಗಿದ್ದೇವೆ” ಎಂದು ಮೋಹನ್ ಸಿಂಗ್ ಬಿಶ್ತ್ ಹೇಳಿದ್ದಾರೆ. “ಮುಸ್ತಾಫಾಬಾದ್ ಎಂಬ ವಿಧಾನಸಭಾ ಕ್ಷೇತ್ರದೊಳಗಿನ ಪ್ರದೇಶವು ಬದಲಾಗದೆ ಉಳಿಯಲಿದೆ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ 26 ವರ್ಷಗಳ ನಂತರ ಬಿಜೆಪಿ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ ಪಕ್ಷ 48 ಸ್ಥಾನಗಳನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನು ಗೆದ್ದಿದೆ.
ಬಿಹಾರ | ಶಿವರಾತ್ರಿ ಮೆರವಣಿಗೆ ವೇಳೆ ಉದ್ರೇಕಕಾರಿ ಟ್ಯಾಬ್ಲೋ ಪ್ರದರ್ಶಿಸಿದ ಬಜರಂಗದಳದ ದುಷ್ಕರ್ಮಿಗಳು


