ಹಾಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ (ಫೆ.27) ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಮೂಲದ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪ್ರಾಸಿಕ್ಯೂಷನ್, ಕಾನೂನು ಮತ್ತು ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಿ, ಮಾರ್ಚ್ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 43 ಪ್ರಕರಣಗಳನ್ನು ಹಿಂಪಡೆಯಲು ಸಿಆರ್‌ಪಿಸಿಯ ಸೆಕ್ಷನ್ 321 ರ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ನಿರ್ದೇಶನ ನೀಡಿ ರಾಜ್ಯ ಸರ್ಕಾರವು ಅಕ್ಟೋಬರ್ 15, 2024 ರಂದು ಹೊರಡಿಸಿದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಅರ್ಜಿದಾರ ಪರ ವಕೀಲ ವೆಂಕಟೇಶ್ ದಳವಾಯಿ ಅವರು ವಾದ ಮಂಡಿಸಿ “ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಲಾಗದು. ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ಸರ್ಕಾರಿ ಅಭಿಯೋಜಕರಿಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಸರ್ಕಾರಿ ಅಭಿಯೋಜಕರ ಕಚೇರಿಯು ಅಂಚೆ ಕಚೇರಿಯ ರೀತಿ ನಡೆದುಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಹೇಳಿದೆ. ಪ್ರಕರಣ ಹಿಂಡೆಯುವಂತೆ ಅಭಿಯೋಜಕರಿಗೆ ಸರ್ಕಾರ ಒತ್ತಡ ಹಾಕಲಾಗದು. ಪ್ರಕರಣಗಳನ್ನು ಹಿಂಪಡೆಯಲು ಅರ್ಹವಾಗಿಲ್ಲ ಎಂದು ಕಾನೂನು ಮತ್ತು ಅಭಿಯೋಜನಾ ಇಲಾಖೆಯು ಟಿಪ್ಪಣಿಯಲ್ಲಿ ಹೇಳಿವೆ. ಅದಾಗ್ಯೂ, ಸರ್ಕಾರ ಆದೇಶ ಮಾಡಿದೆ” ಎಂದಿದ್ದಾರೆ.
“ಹಲವು ಆರೋಪಿಗಳ ಮೇಲೆ ದೊಂಬಿ, ಕೊಲೆ ಪ್ರಯತ್ನ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅತಿಕ್ರಮ ಪ್ರವೇಶದಂಥ ಗಂಭೀರ ಆರೋಪಗಳಿವೆ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗೆ ಆಕ್ಷೇಪಿಸಿ ಹುಬ್ಬಳ್ಳಿಯಲ್ಲಿ ಒಂದು ಕೋಮಿನವರು ಹಳೇ ಹುಬ್ಬಳ್ಳಿ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಸಂಬಂಧ ದಾಖಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ. ಹಾಗಾಗಿ, ಪ್ರಕರಣ ಹಿಂಪಡೆಯುವ ಸರ್ಕಾರದ ಆದೇಶವನ್ನು ಅಮಾನತುಗೊಳಿಸಬೇಕು” ಎಂದು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ “ವಿಚಾರಣಾಧೀನ ನ್ಯಾಯಾಲಯುವ ಇನ್ನಷ್ಟೇ ಸರ್ಕಾರಿ ಅಭಿಯೋಜಕರ ಅರ್ಜಿಯನ್ನು ಪರಿಶೀಲಿಸಬೇಕಿದೆ. ಇದಕ್ಕೂ ಮೊದಲೇ ನಾವು ನಿರ್ಧರಿಸಲಾಗದು. ಈ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ತೋರಿಸಿದರೆ ಪ್ರಕರಣ ಹಿಂಪಡೆಯಲು ಯಾವುದೇ ನ್ಯಾಯಾಲಯ ಅನುಮತಿಸುವುದಿಲ್ಲ. ಒಂದೊಮ್ಮೆ ಸಕ್ಷಮ ನ್ಯಾಯಾಲಯ ಅದಕ್ಕೆ ಅನುಮತಿಸಿದರೆ ಅಪಾಯ ತಂದುಕೊಳ್ಳಲಿದೆ” ಎಂದು ಮೌಖಿಕವಾಗಿ ಹೇಳಿದೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ; ರಾಜ್ಯದ 52 ಹೋಟೆಲ್‌ಗಳ ವಿರುದ್ಧ ಕ್ರಮ – ದಿನೇಶ್ ಗುಂಡೂರಾವ್


