ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ರೇಬೀಸ್‌ನಿಂದ ಎಂಟು ಸಾವುಗಳು ಸಂಭವಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ಸೋಮವಾರ ವರದಿ ಮಾಡಿದ್ದು, ಈ ಸಾವುಗಳಲ್ಲಿ ನಾಲ್ಕು ಸಾವು ಬೆಂಗಳೂರಿನಲ್ಲೆ ಸಂಭವಿಸಿವೆ ಎಂದು ಪತ್ರಿಕೆ ಆರೋಗ್ಯ ಇಲಾಖೆಯ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವರದಿಯಾದ ನಾಯಿ ಕಡಿತ ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ 47% ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ ಎಂದು ವರದಿ ಉಲ್ಲೇಖಿಸಿದೆ. ನಾಯಿ ಕಡಿತ ಪ್ರಕರಣ
ಬೆಂಗಳೂರಿನಲ್ಲಿ ಸಂಭವಿಸಿದ ನಾಲ್ಕು ಸಾವುಗಳಲ್ಲಿ, ಮೂವರು (ಹರಿಯಾಣ ಮೂಲದ 38 ವರ್ಷದ ವ್ಯಕ್ತಿ, ಚಿತ್ರದುರ್ಗದ 36 ವರ್ಷದ ವ್ಯಕ್ತಿ ಮತ್ತು ತುಮಕೂರಿನ 26 ವರ್ಷದ ವ್ಯಕ್ತಿ) ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದ ಬಳಿಯ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿದ್ದರು. ಇದು ಶಂಕಿತ ರೇಬೀಸ್ ಪ್ರಕರಣಗಳಿಗೆ ಗೊತ್ತುಪಡಿಸಿದ ಪ್ರತ್ಯೇಕ ಆಸ್ಪತ್ರೆಯಾಗಿದ್ದು, ಇತರ ಜಿಲ್ಲೆಗಳ ರೋಗಿಳನ್ನು ಇಲ್ಲಿಗೆ ಕಳುಹಿಸಲಾಗುತ್ತದೆ. ನಾಯಿ ಕಡಿತ ಪ್ರಕರಣ
ನಾಲ್ಕನೆಯ ಘಟನೆ ಜನವರಿ 5 ರಂದು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (IGICH) ಸಾವನ್ನಪ್ಪಿದ ನಾಲ್ಕು ವರ್ಷದ ಬಾಲಕನದ್ದಾಗಿದೆ ಎಂದು ವರದಿ ಹೇಳಿದೆ. ಅಲ್ಲದೆ, ಬೆಳಗಾವಿಯಲ್ಲಿ ಇಬ್ಬರು ಮತ್ತು ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರು ರೇಬೀಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 23, 2025 ರ ಹೊತ್ತಿಗೆ ಆರೋಗ್ಯ ಇಲಾಖೆಯು ಸುಮಾರು 66,489 ನಾಯಿ ಕಡಿತ ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ ವಿಜಯಪುರ (4,552), ಬೆಂಗಳೂರಿನ ಬಿಬಿಎಂಪಿ ಮಿತಿಯಲ್ಲಿ (4,072) ಮತ್ತು ಹಾಸನ (3,688) ಗಳಲ್ಲಿ ಅತಿ ಹೆಚ್ಚು ಘಟನೆ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಇದು 47% ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ.
ಕಳೆದ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 45,173 ನಾಯಿ ಕಡಿತ ಪ್ರಕರಣಗಳು ವರದಿಯಾಗಿತ್ತು. ಜನವರಿ ಮತ್ತು ಡಿಸೆಂಬರ್ 2024 ರ ನಡುವೆ, ಒಟ್ಟು 42 ಸಾವುಗಳು ಮತ್ತು 3,61,522 ನಾಯಿ ಕಡಿತ ಪ್ರಕರಣಗಳು ಕಳೆದ ವರ್ಷ ವರದಿಯಾಗಿದ್ದವು. 2023 ರಲ್ಲಿ, ಕರ್ನಾಟಕದಲ್ಲಿ ಕನಿಷ್ಠ 2.32 ಲಕ್ಷ ನಾಯಿ ಕಡಿತ ಮತ್ತು ನಾಲ್ಕು ಸಾವುಗಳು ವರದಿಯಾಗಿದ್ದವು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹೆಚ್ಚಿದ ಕಣ್ಗಾವಲು ಹಾಗೂ ಪ್ರಕರಣಗಳ ವರದಿಯೇ ಈ ಏರಿಕೆಗೆ ಕಾರಣ ಎಂದು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಯೋಜನಾ ನಿರ್ದೇಶಕ ಡಾ. ಅನ್ಸರ್ ಅಹ್ಮದ್ ಅವರು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. “ಎಲ್ಲಾ ನಾಯಿ ಕಡಿತ ಪ್ರಕರಣಗಳು ರೇಬೀಸ್ ಪ್ರಕರಣಗಳಲ್ಲ. ಆದಾಗ್ಯೂ, ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ಪ್ರತಿಯೊಂದು ಗಾಯವನ್ನು ತಕ್ಷಣವೇ ಸೋಂಕುರಹಿತ ನೀರು ಮತ್ತು ಸೋಪಿನಿಂದ ತೊಳೆಯುವುದು ಮುಖ್ಯ,” ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ : ಉಭಯ ಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು
ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ : ಉಭಯ ಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು

