ಕಾಂಗ್ರೆಸ್ ಸರ್ಕಾರದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ದುರ್ಬಳಕೆ ಖಂಡಿಸಿ ಹಲವು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದ್ದಾರೆ. ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಯ್ದೆಯ 7’ಡಿ’ ಮತ್ತು 7’ಸಿ’ ಮೂಲಕ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ಸಾವಿರಾರು ಕೋಟಿ ಹಣವನ್ನು ವಾಪಸ್ ಪಡೆದು, ಪರಿಶಿಷ್ಟರ ಅಭಿವೃದ್ಧಿಗೆ ಬಳಸಬೇಕು ಎಂದು ಸರ್ಕಾರದ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೆಲವೇ ಕೆಲವು ದಲಿತ ಮುಖಂಡರು ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಬಿವಿಎಸ್’ ಕೂಡ ಬಿಜೆಪಿ ನೇತೃತ್ವದ ಹೋರಾಟದಲ್ಲಿ ಭಾಗಿಯಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಆದರೆ, “ಬಿಜೆಪಿ ಹೋರಾಟ ಬೆಂಬಲಿಸುತ್ತಿರುವುದು ‘ಬಹುಜನ ವಿದ್ಯಾರ್ಥಿ ಸಂಘವಲ್ಲ..’; ಬದಲಿಗೆ, ಇತ್ತೀಚೆಗೆ ಹುಟ್ಟಿಕೊಂಡ ಬಿಜೆಪಿಯ ಎನ್.ಮಹೇಶ್ ಬೆಂಬಲಿಗರ ಭಾರತೀಯ ವಿದ್ಯಾರ್ಥಿ ಸಂಘ” ಎಂದು ಬಹುಜನ ವಿದ್ಯಾರ್ಥಿ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಕನಕಪುರ ಶಿವಣ್ಣ ಹಾಗೂ ಕೃಷ್ಣಮೂರ್ತಿ ಚಮರಂ ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಮ್ ಜತೆಗೆ ಮಾತನಾಡಿ ಕನಕಪುರ ಶಿವಣ್ಣ, “ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) 2000ನೇ ಇಸವಿಯಲ್ಲಿ ಅಧಿಕೃತವಾಗಿ ಆರಂಭವಾಯಿತು.. ಅದಕ್ಕೂ ಮೊದಲು ನಾವು ಕನಕಪುರದಲ್ಲಿ ‘ಬಹುಜನ್ ಸ್ಟೂಡೆಂಟ್ ಫೆಡರೇಷನ್’ (ಬಿಎಸ್‌ಎಫ್) ಹೆಸರಿನಲ್ಲಿ ಸಂಘಟನೆ ಆರಂಭಿಸಿದ್ದೆವು. ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಎನ್.ಮಹೇಶ್, ಇದನ್ನು ರಾಜ್ಯವ್ಯಾಪಿ ವಿಸ್ತರಿಸೋಣ ಎಂದು ಹೇಳಿ, ‘ಫೆಡರೇಷನ್ ಕಮ್ಯುನಿಸ್ಟ್ ಸಂಘಟನೆಯನ್ನು ಹೋಲುತ್ತದೆ, ಬೌದ್ಧ ಧರ್ಮಕ್ಕೆ ಹೋಲುವಂತೆ ನಾವು ಕನ್ನಡದಲ್ಲೇ ಸಂಘ ಎಂದು ಮರುನಾಮಕರಣ ಮಾಡೋಣ’ ಎಂದು ಹೇಳಿದ್ದರು. 2000ನೇ ಇಸವಿಯಲ್ಲಿ ನಡೆದ ಮೈಸೂರಿನ ಸಮಾವೇಶದಲ್ಲಿ ನಾವು ಬಹುಜನ ವಿದ್ಯಾರ್ಥಿ ಸಂಘಟನೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆವು” ಎಂದು ಹೇಳಿದರು.
“2019ರ ವರೆಗೂ ಬಹುಜನ ವಿದ್ಯಾರ್ಥಿ ಸಂಘಟನೆಯಾಗಿಯೇ ಇತ್ತು, 2018ರಲ್ಲಿ ಎನ್. ಮಹೇಶ್ ಅವರನ್ನು ಬಿಎಸ್‌ಪಿಯಿಂದ ಉಚ್ಛಾಟಿಸಲಾಯಿತು. ಬಳಿಕ, ಅವರ ಕೆಲ ಬೆಂಬಲಿಗರು ಬಿವಿಎಸ್ ಅನ್ನು ಭಾರತೀಯ ವಿದ್ಯಾರ್ಥಿ ಸಂಘ ಎಂದು ಮರುನಾಮಕರಣ ಮಾಡೋಣ ಎಂಬ ಪ್ರಸ್ತಾಪ ಇಟ್ಟರು. ಆದರೆ, ಬಿವಿಎಸ್‌ನ ಹಳೆಯ ನಾಯಕರು ವಿರೋಧಿಸಿದರು. ‘ಬಹುಜನ ವಿದ್ಯಾರ್ಥಿ ಸಂಘ’ವಾಗಿಯೇ ಮುಂದುವರಿಯಬೇಕು ಎಂದು ಪ್ರತಿಪಾದಿಸಿದೆವು. ನಂತರ, ಅವರ ಬೆಂಬಲಿಗ ತಂಡವು, ನಾವು ಪ್ರತ್ಯೇಕ ‘ಭಾರತೀಯ..’ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಮುಂದುವರಿದರು. ಅವರ ಸಂಘಟನೆ ಘೋಷಣೆಯಾದ ಬಳಿಕ 2022ರವರೆಗೆ ಕೋವಿಡ್ ಕಾರಣದಿಂದ ಯಾವುದೇ ಚಟುವಟಿಕೆ ನಡೆದಿಲ್ಲ. ಭಾರತೀಯ ವಿದ್ಯಾರ್ಥಿ ಸಂಘಕ್ಕೆ 25 ವರ್ಷವಾಗಿದೆ ಎಂದು ಅವರು ಇತ್ತೀಚೆಗೆ ಮಾತನಾಡಲು ಆರಂಭಿಸಿದ್ದಾರೆ. 25 ವರ್ಷ ಪೂರೈಸಿರುವುದು ಬಹುಜನ ವಿದ್ಯಾರ್ಥಿ ಸಂಘ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
“ಭಾರತೀಯ ವಿದ್ಯಾರ್ಥಿ ಸಂಘಕ್ಕೆ ಕೇವಲ ಐದು ವರ್ಷವಾಗಿದೆ, 25 ವರ್ಷ ಪೂರೈಸಿರುವುದು ಬಹುಜನ ವಿದ್ಯಾರ್ಥಿ ಸಂಘ ಎಂದು ಹೇಳಿದ ನಾವು, ಜನವರಿ 26ನೇ ತಾರೀಕು ಮೈಸೂರು ಮಹಾರಾಜ ಕಾಲೇಜಿನ ಸೆಂಟ್ರಲ್ ಹಾಲ್‌ನಲ್ಲಿ ರಜತ ಮಹೋತ್ಸವ ಮಾಡಿದ್ದೇವೆ. ಭಾರತೀಯ ವಿದ್ಯಾರ್ಥಿ ಸಂಘಕ್ಕೂ 25 ವರ್ಷ ಆಗಿದೆ ಎಂದು ಮಹೇಶ್ ಬೆಂಬಲಿಗರು ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಮಾವೇಶ ಮಾಡಿರುವವರು ಎನ್. ಮಹೇಶ್ ಹಿಂಬಾಲಕರ ಗುಂಪು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮಹೇಶ್ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ, ಅದರ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ಈಗ ಬಿಜೆಪಿಗೆ ಬೆಂಬಲಿಸಿರುವ ಹರಿರಾಮ್ ಕೂಡ ಅದೇ ತಂಡದಲ್ಲಿದ್ದಾರೆ. ಭಾರತೀಯ ವಿದ್ಯಾರ್ಥಿ ಸಂಘದ ಮುಖಂಡರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆಂತರಿಕವಾಗಿ ಅವರೆಲ್ಲಾ ಬಿಜೆಪಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಭಾರತೀಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ನಡೆದಾಗ ಬಿಜೆಪಿಯ ಎಸ್‌ಸಿ ಮೋರ್ಚಾದ ಬಹುತೇಕ ಕಾರ್ಯಕರ್ತರು ಭಾಗವಹಿಸಿದ್ದರು” ಎಂದರು.
“ಮಹೇಶಣ್ಣ ಎಲ್ಲಿರುತ್ತಾರೋ, ನಾವು ಅಲ್ಲಿರುತ್ತೇವೆ ಎಂದು ಹೇಳುವ ಒಂದು ಗುಂಪಿದೆ. ಇದರಿಂದ ನಮಗೇನು ತೊಂದರೆ ಇಲ್ಲ, ರಾಜಕೀಯ ಮಾಡಬೇಕಾದರೆ ಇದೆಲ್ಲಾ ಸಾಮಾನ್ಯ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ-ನಿಲುವು ಏನಿತ್ತು ಎಂಬುದು ಮುಖ್ಯವಾಗುತ್ತದೆ. ಬಿಜೆಪಿ ಸೇರಿದ ಬಳಿಕ ಮಹೇಶಣ್ಣ ಮಾತನಾಡಿರುವ ಹಲವು ವಿಡಿಯೋಗಳನ್ನು ನಾವೆಲ್ಲಾ ನೋಡಿದ್ದೇವೆ, ‘ಸಾವರ್ಕರ್ ಮತ್ತು ಹಿಂದೂ ಧರ್ಮದ ಕುರಿತು ಅಂಬೇಡ್ಕರ್ ಮೃದು ಧೋರಣೆ ಹೊಂದಿದ್ದರು, ಆರ್‌ಎಸ್‌ಎಸ್ ಬಗ್ಗೆ ನನಗೆ ಸರಿಯಾದ ಮಾಹಿತಿ ಇರಲಿಲ್ಲ. ಆದ್ದರಿಂದ, ಪೂರ್ವಗ್ರಹನಾಗಿದ್ದೆ; ಈಗ ನನಗೆ ಇದೆಲ್ಲಾ ಅರ್ಥ ಆಗಿದೆ’ ಎಂದು ಹೇಳಿದ್ದಾರೆ. ಈಗ ನಮಗಿರುವ ಗೊಂದಲವೆಂದರೆ, ಎನ್.ಮಹೇಶ್ ಹಿಂದೂ ಧರ್ಮದ ಬಗ್ಗೆ ನಮಗೆಲ್ಲಾ ಹಿಂದೆ ಪಾಠ ಮಾಡಿದ್ದಾರೆ. ಈಗ ನೀವು ಹೇಳುತ್ತಿರುವುದು ಸರಿಯಾ? ಅಥವಾ ಹಿಂದೆ ನಮಗೆ ಹೇಳಿದ್ದು ಸರಿಯಾ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಪ್ರಶ್ನಿಸಿದರು.
“ಮಹೇಶ್ ಈಗ ಹೇಳಿದ್ದೇ ಸರಿ ಎಂದಾದರೆ, ಅಂದು ನಮ್ಮಂತವರನ್ನು ನೀವು ದಿಕ್ಕು ತಪ್ಪಿಸಿದಂತೆ ಅಲ್ಲವೇ? ಓರ್ವ ವ್ಯಕ್ತಿಯಾಗಿ ಮಹೇಶ್ ಸುಳ್ಳು ಹೇಳಬಹುದು, ಸಂದರ್ಭಕ್ಕೆ ಅನುಕೂಲ ಆಗಲಿ ಎಂದು ಹಾಗೆ ಮಾತನಾಡಿರಬಹುದು. ಆದರೆ, ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್ ಬರೆದಿರುವ ಬರಹಗಳು ಹಾಗೂ ಭಾಷಣ ಸುಳ್ಳಾಗುತ್ತವೆಯೇ? ಸಾಧ್ಯವೇ ಇಲ್ಲ. ಆದ್ದರಿಂದ, ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಬಹುಜನ ವಿದ್ಯಾರ್ಥಿ ಸಂಘಗಳೆರಡೂ ಪ್ರತ್ಯೇಕ. ಬಹುಜನ ವಿದ್ಯಾರ್ಥಿ ಸಂಘ ಬಾಬಾ ಸಾಹೇಬರು ಮತ್ತು ಪುಲೆ ದಂಪತಿಗಳ ಆಶಯದಂತೆ ಮುನ್ನಡೆಯುತ್ತಿದೆ. ಭಾರತೀಯ ವಿದ್ಯಾರ್ಥಿ ಸಂಘ ಬಿಜೆಪಿ ಜೊತೆಗೆ ಸಂಪರ್ಕ ಇಟ್ಟುಕೊಂಡು, ಅವರಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತಿರುವುದು ಸ್ಪಷ್ಟ” ಎಂದರು.
‘ಬಿಜೆಪಿಯ ರಾಜಕಾರಣವೇ ಬೇರೆ, ನಮ್ಮ ಸೈದ್ಧಾಂತಿಕ ವಿರೋಧವೇ ಬೇರೆ’
ಬಿವಿಎಸ್ ಮೊದಲ ಅಧ್ಯಕ್ಷರಾದ ಕೃಷ್ಣಮೂರ್ತಿ ಚಮರಂ ಮಾತನಾಡಿ, “ಭಾರತೀಯ ವಿದ್ಯಾರ್ಥಿ ಸಂಘಕ್ಕೂ, ನಮ್ಮ ಹಳೆಯ ಬಹುಜನ ವಿದ್ಯಾರ್ಥಿ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ.. 25 ವರ್ಷ ಆಗಿದೆ ಎಂದು ಅವರು ಕಾರ್ಯಕ್ರಮ ಮಾಡಿರುವುದು ಸರಿಯಲ್ಲ. ಆ ಸಂಘಟನೆಗೆ ಕೇವಲ ಐದು ವರ್ಷವಾಗಿದ್ದು, 25 ವರ್ಷ ಆಗಿದೆ ಎಂಬುದು ಅವರ ಭ್ರಮೆಯಷ್ಟೇ” ಎಂದು ಹೇಳಿದರು.
“ಕಾಂಗ್ರೆಸ್ ವಿರುದ್ಧದ ಬಿಜೆಪಿ ಹೋರಾಟಕ್ಕೆ ಬೆಂಬಲ ನೀಡಿರುವವರು ಭಾರತೀಯ ವಿದ್ಯಾರ್ಥಿ ಸಂಘದವರು, ಅದಕ್ಕೆ ಬಹುಜನ ವಿದ್ಯಾರ್ಥಿಗಳ ಸಂಘದ ಬೆಂಬಲವಿಲ್ಲ. ಆದರೆ, ಬಹುಜನ ವಿದ್ಯಾರ್ಥಿ ಸಂಘವು ಸರ್ಕಾರದ ಎಲ್ಲ ಜನವಿರೋಧಿ ನಡವಳಿಕೆಗಳನ್ನು ವಿರೋಧಿಸುತ್ತವೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣದ ದುರ್ಭಳಕೆಯನ್ನು ನಮ್ಮ ಸಂಘಟನೆ ಪ್ರತ್ಯೇಕವಾಗಿ ವಿರೋಧಿಸುತ್ತದೆ. ಬಿಜೆಪಿಯ ರಾಜಕಾರಣವೇ ಬೇರೆ, ನಮ್ಮ ಸೈದ್ಧಾಂತಿಕ ವಿರೋಧವೇ ಬೇರೆ. ಭಾರತೀಯ ವಿದ್ಯಾರ್ಥಿ ಸಂಘ ಬೆಂಬಲ ನೀಡುವ ಮೂಲಕ ಬಿಜೆಪಿಯ ಕೈ ಬಲಪಡಿಸುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಬಗ್ಗೆ ನಮಗೆ ಮೃದು ಧೋರಣೆ ಇಲ್ಲ.. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣದ ಅನ್ಯ ಉದ್ದೇಶ ಬಳಕೆಯನ್ನು ನಾವು ವಿರೋಧಿಸುತ್ತೇವೆ. ನಮ್ಮದು ಸಮುದಾಯ ಹಿತದೃಷ್ಟಿ ವಿರೋಧಿ ನೆಲೆ; ಆದರೆ, ಬಿಜೆಪಿ ವಿರೋಧಿಸುತ್ತಿರುವ ಕಾಂಗ್ರೆಸ್ ಮೇಲಿನ ಸೇಡಿನ ಕಾರಣಕ್ಕೆ. ಇದರಲ್ಲಿ ಸಮುದಾಯದ ಹಿತಚಿಂತನೆ ಇಲ್ಲ. ಕಾಂಗ್ರೆಸ್ ಸರ್ಕಾರ ಬೀಳುಸುವುದು ಅಥವಾ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು ಎಂಬುದಷ್ಟೆ ಅವರ ದೂರದೃಷ್ಠಿ” ಎಂದು ಸ್ಪಷ್ಟನೆ ನೀಡಿದರು.
“ಪರಿಶಿಷ್ಟರ ನಿಧಿ ಅನ್ಯ ಉದ್ದೇಶಕ್ಕೆ ಬಳಕೆಗೆ ನಮ್ಮ ವಿರೋಧದಲ್ಲಿ ಯಾವುದೇ ರಾಜಕೀಯ ಇಲ್ಲ; ಸಮುದಾಯದ ಹಿತದೃಷ್ಟಿ ಮಾತ್ರ. ನಮ್ಮ ರಾಜಕೀಯ ಹಿತಾಸಕ್ತಿ ಇಲ್ಲ, ಒಂಟಿ ಧ್ವನಿಯಾಗಿ ನಾವು ವಿರೋಧಿಸುತ್ತೇವೆ. ಆದರೆ, ಬಿಜೆಪಿ ನಡೆಸುವ ಹೋರಾಕ್ಕೆ ನಮ್ಮ ಬೆಂಬಲ ಇಲ್ಲ. ಬಿವಿಎಸ್ ಹೆಸರಲ್ಲಿ ಬೆಂಬಲ ನೀಡಿರುವುದು ಎನ್. ಮಹೇಶ್ ಬಣ. ಭಾರತೀಯ ವಿದ್ಯಾರ್ಥಿ ಸಂಘ ಎಂದರೆ ಬಿಜೆಪಿ ಬೆಂಬಲಿತ ಸಂಘಟನೆ, ಅದರಲ್ಲಿ ಯಾವುದೇ ಅನುಮಾನ ಬೇಡ; ಎನ್. ಮಹೇಶ್ ಇದರ ಮಹಾಪೋಷಕರು. ಆ ಸಂಘಟನೆಯಲ್ಲಿ ಹರಿರಾಮ್ ಕೂಡ ಒಬ್ಬರು. ಮಹೇಶ್ ಬಿಜೆಪಿ ಸೇರುತ್ತಿದ್ದಂತೆಯೇ ಅವರ ಸಮ್ಮುಖದಲ್ಲಿ ‘ಬಹುಜನ’ ಕೈಬಿಟ್ಟು ‘ಭಾರತೀಯ’ ಮಾಡಿಕೊಂಡರು. ಏಕೆಂದರೆ, ಎಬಿವಿಪಿ, ಭಾರತೀಯ ಮಜ್ದೂರ್, ಭಾರತೀಯ ಜನತಾ ಪಕ್ಷಕ್ಕೆ ‘ಬಹುಜನ’ ಪದ ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ‘ಭಾರತೀಯ ವಿದ್ಯಾರ್ಥಿ ಸಂಘಟನೆ ಮಾಡಿಕೊಂಡಿದ್ದಾರೆ” ಎಂದರು.
ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕರೆಕೊಟ್ಟ ಬಿಜೆಪಿ
ವಿಧಾನಸಭೆ ಅಧಿವೇಶನ ಪ್ರಾರಂಭವಾಗುವ ಮುನ್ನ, ಬಿಜೆಪಿ ಭಾನುವಾರ (ಮಾರ್ಚ್ 2, 2025) ರಾಜ್ಯದ ವಿವಿಧ ದಲಿತ ಸಂಘಟನೆಗಳೊಂದಿಗೆ ದಲಿತರಿಗೆ ಮೀಸಲಾದ ಹಣವನ್ನು ಇತರ ಯೋಜನೆಗಳಿಗೆ ಬಳಸುವುದನ್ನು ತಡೆಯುವ ವಿಧಾನಗಳ ಕುರಿತು ದುಂಡು ಮೇಜಿನ ಸಮಾಲೋಚನೆ ನಡೆಸಿತು.
ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ದಲಿತ ಸಂಘಟನೆಗಳು ಇತರ ಯೋಜನೆಗಳಿಗೆ, ವಿಶೇಷವಾಗಿ ಸರ್ಕಾರದ ಗ್ಯಾರಂಟಿಗಳಿಗೆ ಹಣವನ್ನು ಬಳಕೆ ಮಾಡುವುದರ ಬಗ್ಗೆ ಬೇಸರಗೊಂಡಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ತಿರುಗಿಸುವುದರಿಂದ ಸರ್ಕಾರ ಘೋಷಿಸಿದ ಗ್ಯಾರಂಟಿಗಳಲ್ಲಿ ದಲಿತರನ್ನು ತಮ್ಮ ವ್ಯಾಪ್ತಿಗೆ ಒಳಪಡಿಸಿಲ್ಲ ಎಂದು ನಾವು ಭಾವಿಸುವಂತೆ ಮಾಡಿದೆ. ನಮ್ಮ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ದುರ್ಭಳಕೆ ಮಾಡುವ ಮೂಲಕ ಸರ್ಕಾರವು ಈಗ ನಮ್ಮನ್ನು ಗ್ಯಾರಂಟಿ ಅಡಿಯಲ್ಲಿ ತಂದಿದೆ” ಎಂದು ನಾರಾಯಣಸ್ವಾಮಿ ಆರೋಪಿಸಿದರು.
ಸಮಾಲೋಚನೆಯಲ್ಲಿ ಭಾಗವಹಿಸಿದ್ದ ದಲಿತ ಸಂಘಟನೆಗಳು ಮತ್ತಷ್ಟು ಹಣದ ದುಷ್ಕೃತ್ಯವನ್ನು ತಡೆಯಲು ಒಗ್ಗಟ್ಟಿನ ಹೋರಾಟ ನಡೆಸಲು ನಿರ್ಧರಿಸಿವೆ ಎಂದು ಅವರು ಹೇಳಿದರು. “ಅಗತ್ಯವಿದ್ದರೆ, ನಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ” ಎಂದು ಅವರು ಹೇಳಿದರು.
ಹಿರಿಯ ದಲಿತ ಮುಖಂಡರಾದ ವೆಂಕಟಸ್ವಾಮಿ, ವಕೀಲರಾದ ಹರಿರಾಮ್ ಸೇರಿದಂತೆ ಹಲವು ದಲಿತ ಮುಖಂಡರು ಬಿಜೆಪಿ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ; ಇಬ್ಬರ ಬಂಧನ


