ಪ್ರಯಾಗ್‌ರಾಜ್‌ನಲ್ಲಿ ವಕೀಲ, ಪ್ರಾಧ್ಯಾಪಕ ಮತ್ತು ಇತರ ಮೂವರ ಮನೆಗಳನ್ನು ಕೆಡವಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ (ಮಾ.6) ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಸರ್ಕಾರದ ಕ್ರಮಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ಇಂತಹ ಕ್ರಮಗಳು ‘ಆಘಾತಕಾರಿ ಮತ್ತು ತಪ್ಪು ಸಂದೇಶವ’ನ್ನು ರವಾನಿಸುತ್ತವೆ ಎಂದು ಹೇಳಿದ್ದಾರೆ.
“ಸಂವಿಧಾನದ ವಿಧಿ 21 ಎಂದು ಕರೆಯಲ್ಪಡುವ ಒಂದು ವಿಷಯವಿದೆ” ಎಂದು ನ್ಯಾಯಮೂರ್ತಿ ಓಕಾ ಕಠುವಾಗಿ ಹೇಳಿದ್ದಾರೆ.
ಧ್ವಂಸ ಕಾರ್ಯಾಚರಣೆಗೆ ಮುನ್ನ ಅನುಸರಿಸಬೇಕಾದ ಕಾರ್ಯವಿಧಾನವನ್ನು ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ನ್ಯಾಯಮೂರ್ತಿ ಓಕಾ ಅವರು ಉಲ್ಲೇಖಿಸಿದ್ದು, “ನಿಮ್ಮ ಬುಲ್ಡೋಝರ್ ನ್ಯಾಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಮನ್ವಯ ಪೀಠ ತೀರ್ಪು ನೀಡಿದೆ” ಎಂದಿದ್ದಾರೆ.
ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಓಕಾ ಅವರು, “ಕೆಡವಲಾದ ಕಟ್ಟಡಗಳನ್ನು ನಿಮ್ಮದೇ ಖರ್ಚಿನಲ್ಲಿ ಮರು ನಿರ್ಮಿಸಲು ಸರ್ಕಾರಕ್ಕೆ ಆದೇಶಿಸುತ್ತೇವೆ. ಅದೊಂದೆ ಮಾರ್ಗ ಈ ಬಾಕಿಯಿರುವುದು” ಎಂದು ಹೇಳಿದ್ದಾರೆ.
ಸರ್ಕಾರದ ಧ್ವಂಸ ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ನಂತರ ವಕೀಲ ಝುಲ್ಫಿಕರ್ ಹೈದರ್, ಪ್ರಾಧ್ಯಾಪಕ ಅಲಿ ಅಹ್ಮದ್, ಇಬ್ಬರು ವಿಧವೆಯರು ಮತ್ತು ಇನ್ನೊಬ್ಬ ವ್ಯಕ್ತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
“ಶನಿವಾರ ನೋಟಿಸ್ ನೀಡಿ, ಭಾನುವಾರ ಮನೆಗಳನ್ನು ಸರ್ಕಾರ ಧ್ವಂಸಗೊಳಿಸಿದೆ. ಇದನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡಿಲ್ಲ. ಅರ್ಜಿದಾರರು ಭೂಮಿಯ ಕಾನೂನುಬದ್ಧ ಗುತ್ತಿಗೆದಾರರು. ಅವರ ಗುತ್ತಿಗೆ ಹಕ್ಕುಗಳನ್ನು ಫ್ರೀಹೋಲ್ಡ್ ಆಸ್ತಿಯಾಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದರು” ಎಂದು ಅರ್ಜಿದಾರ ಪರ ವಕೀಲರು ವಾದಿಸಿದ್ದಾರೆ.
“ಸರ್ಕಾರ ಅರ್ಜಿದಾರರ ಜಾಗವನ್ನು 2023ರಲ್ಲಿ ಕೊಲ್ಲಲ್ಪಟ್ಟ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್‌ರೊಂದಿಗೆ ತಪ್ಪಾಗಿ ಜೋಡಿಸಿದೆ” ಎಂದು ಆರೋಪಿಸಿದ್ದಾರೆ.
ಅರ್ಜಿದಾರರಿಗೆ ನೋಟಿಸ್ ಉತ್ತರ ನೀಡಲು ಸಾಕಷ್ಟು ಸಮಯ ಇತ್ತು ಎಂದು ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದ ಮಂಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಓಕಾ ಅವರು, ನೋಟಿಸ್ ಜಾರಿ ಮಾಡಿದ ವಿಧಾನವನ್ನು ಪ್ರಶ್ನಿಸಿದ್ದು, ನೋಟಿಸ್ ಕಳುಹಿಸುವ ವಿಧಾನದ ಕುರಿತ ರಾಜ್ಯದ ವಾದದಲ್ಲಿ ಬದ್ದತೆ ಕೊರೆತೆಯನ್ನು ಎತ್ತಿ ತೋರಿಸಿದ್ದಾರೆ.
ಅಟಾರ್ನಿ ಜನರಲ್ ಈ ಪ್ರಕರಣವನ್ನು ಹೈಕೋರ್ಟ್‌ಗೆ ಹಿಂತಿರುಗಿಸಬೇಕೆಂದು ಮನವಿ ಮಾಡಿದ್ದು, ಅದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಕರಣವನ್ನು ವಾಪಸ್ ಕಳುಹಿಸುವುದರಿಂದ ಅನಗತ್ಯ ವಿಳಂಬವಾಗುತ್ತದೆ ಎಂದು ಹೇಳಿದೆ.
“ಅರ್ಜಿದಾರರು ತಾವು ಅತಿಕ್ರಮಣಕಾರರಲ್ಲ, ಬದಲಾಗಿ ತಮ್ಮ ಗುತ್ತಿಗೆ ಹಕ್ಕನ್ನು ಫ್ರೀಹೋಲ್ಡಾಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದರು. ಮಾರ್ಚ್ 1, 2021ರಂದು ಅವರ ಮನೆಗಳನ್ನು ಕೆಡವಲು ನೋಟಿಸ್ ಜಾರಿ ಮಾಡಲಾಗಿದ್ದು, ಮಾರ್ಚ್ 6, 2021 ರಂದು ಅದು ಅವರಿಗೆ ತಲುಪಿದೆ. ಮರುದಿನ ಮಾರ್ಚ್ 7, 2021ರಂದು ಅವರ ಮನೆಗಳನ್ನು ಕೆಡವಲಾಗಿದೆ. ಯುಪಿ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 27(2) ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರದ ಮುಂದೆ ಧ್ವಂಸ ಕಾರ್ಯಾಚರಣೆ ಕುರಿತು ಪ್ರಶ್ನಿಸಲು ಅವರಿಗೆ ಸರಿಯಾದ ಅವಕಾಶ ನೀಡಿಲ್ಲ. ಅರ್ಜಿದಾರರಲ್ಲಿ ವಕೀಲರು ಮತ್ತು ಪ್ರಾಧ್ಯಾಪಕರು ಸೇರಿದ್ದಾರೆ, ಅವರ ಸಂಪೂರ್ಣ ಗ್ರಂಥಾಲಯವನ್ನು ಕೆಡವಲಾಗಿದೆ. ಅಲಹಾಬಾದ್ ಹೈಕೋರ್ಟ್ ಸೆಪ್ಟೆಂಬರ್ 15, 2020ರಂದು ಬರೆದ ಪತ್ರವನ್ನು ಆಧರಿಸಿ ಅರ್ಜಿಯನ್ನು ವಜಾಗೊಳಿಸಿದೆ. ಅವರಿಗೆ ಅದನ್ನು ಸಮರ್ಥಿಸಿಕೊಳ್ಳಲೂ ಅವಕಾಶ ನೀಡಿಲ್ಲ” ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಈ ಪ್ರಕರಣ ಪ್ರಯಾಗ್‌ರಾಜ್‌ನಲ್ಲಿರುವ ನಜುಲ್ ಪ್ಲಾಟ್ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದೆ. ವಿವಾದಿತ ಭೂಮಿಯನ್ನು 1906 ರಲ್ಲಿ ಗುತ್ತಿಗೆಗೆ ನೀಡಲಾಗಿತ್ತು. ಗುತ್ತಿಗೆ 1996 ರಲ್ಲಿ ಮುಕ್ತಾಯಗೊಂಡಿತ್ತು. ಅದನ್ನು ಫ್ರೀಹೋಲ್ಡ್ ಪರಿವರ್ತನೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು 2015 ಮತ್ತು 2019 ರಲ್ಲಿ ತಿರಸ್ಕರಿಸಲಾಗಿದೆ. ಭೂಮಿಯನ್ನು ಸಾರ್ವಜನಿಕ ಬಳಕೆಗಾಗಿ ಮೀಸಲಿಡಲಾಗಿದೆ ಎಂದು ಸರ್ಕಾರ ವಾದಿಸಿದೆ ಮತ್ತು ಅರ್ಜಿದಾರರು ತಮ್ಮ ವಹಿವಾಟುಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಇಲ್ಲದ ಕಾರಣ ಅವರಿಗೆ ಯಾವುದೇ ಕಾನೂನು ಹಕ್ಕುಗಳಿಲ್ಲ. ಅಲ್ಲಿನ ನಿರ್ಮಾಣಗಳು ಅನಧಿಕೃತವಾಗಿವೆ ಎಂದು ತೀರ್ಮಾನಿಸಿ ಹೈಕೋರ್ಟ್ ಅರ್ಜಿದಾರರ ಅರ್ಜಿಗಳನ್ನು ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಕ್ರಮದ ವಿರುದ್ಧ ದೃಢ ನಿಲುವು ತೆಗೆದುಕೊಂಡಿದೆ ಮತ್ತು ಪ್ರಕರಣ ವಿಚಾರಣೆಯನ್ನು ಮಾರ್ಚ್ 21, 2025 ಕ್ಕೆ ಮುಂದೂಡಿದೆ. ಹಿರಿಯ ವಕೀಲ ಅಭಿಮನ್ಯು ಭಂಡಾರಿ ಜೊತೆಗೆ ವಕೀಲೆ ರೂಹ್-ಎ-ಹಿನಾ ದುವಾ (ಎಆರ್‌ಒ), ವಕೀಲ ಆತಿಫ್ ಸುರ್ಹವರ್ದಿ, ವಕೀಲ ಸೈಯದ್ ಮೆಹದಿ ಇಮಾಮ್ (ಎಆರ್‌ಒ) ಈ ಪ್ರಕರಣದಲ್ಲಿ ವಾದಿಸಿದ್ದಾರೆ.
ಸನಾತನ ವಿವಾದ: ಉದಯನಿಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್


