ಪಶ್ಚಿಮ ಬಂಗಾಳದ ಮೇದಿನಿಪುರ ಕಾಲೇಜಿನ ವಿದ್ಯಾರ್ಥಿನಿಯರು ಮಾರ್ಚ್ 3 ರಂದು ತಮ್ಮ ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸ್ಥಳೀಯ ಪೊಲೀಸರಿಂದ ಕಸ್ಟಡಿಯಲ್ಲಿ ಚಿತ್ರಹಿಂಸೆ ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿದ್ಯಾರ್ಥಿಗಳು ಕಲ್ಕತ್ತಾ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪೊಲೀಸರು ಅವರ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಮಾರ್ಚ್ 1ರಂದು ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ರಾಜ್ಯಾದ್ಯಂತದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ತರಗತಿ ಬಹಿಷ್ಕರಿಸಿ ಪ್ರತಿಭಟಿಸುವಂತೆ ಕರೆ ನೀಡಿತ್ತು.
ಅದರಂತೆ, ರಾಜ್ಯಾದ್ಯಂತ ಅನೇಕ ಕಾಲೇಜುಗಳಲ್ಲಿ ಪ್ರತಿಭಟನೆ ನಡೆದಿತ್ತು. ಅವುಗಳಲ್ಲಿ ಮೇದಿನಿಪುರ ಕಾಲೇಜಿನ ವಿದ್ಯಾರ್ಥಿನಿಯರ ಪ್ರತಿಭಟನೆಯೂ ಒಂದು. ರಾಜ್ಯಾದ್ಯಂತ ಹಲವೆಡೆಗಳಲ್ಲಿ ಪ್ರತಿಭಟನೆ ವೇಳೆ ರಾಜಕೀಯ ಘರ್ಷಣೆಗಳು ನಡೆದಿತ್ತು.
ಪ್ರತಿಭಟನೆ ಬಳಿಕ ಯಾವುದೇ ಸರಿಯಾದ ಕಾರಣ ನೀಡದೆ, ಸೂಕ್ತ ಪ್ರಕ್ರಿಯೆ ಇಲ್ಲದೆ ನಮ್ಮನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೇದಿನಿಪುರ ಕಾಲೇಜಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂದು ಸುಚರಿತ ದಾಸ್ ಎಂಬ ವಿದ್ಯಾರ್ಥಿನಿ ಪತ್ರಕರ್ತರಿಗೆ ತಿಳಿಸಿದ್ದಾರೆ.
“ಅವರು ನನ್ನನ್ನು ಉದ್ದೇಶಿಸಿ ಲೈಂಗಿಕ ಹೇಳಿಕೆಗಳನ್ನು ನೀಡಿದ್ದಾರೆ. ಮೌಖಿಕವಾಗಿ ನಿಂದಿಸಿದ್ದಾರೆ. ಪೊಲೀಸರು ಆಡಳಿತ ಪಕ್ಷದ ತೋಳುಗಳಾಗಿ ಮಾರ್ಪಟ್ಟಿದ್ದಾರೆ. ಅವರಿಗೆ ಸ್ವಾತಂತ್ರ್ಯದಿಂದ ಪಕ್ಷಪಾತವಿಲ್ಲದೆ ಕೆಲಸ ಮಾಡಲು ಆಗುತ್ತಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಸುಚರಿತ ದಾಸ್ ಮತ್ತು ಅವರ ಗೆಳೆಯರು ಪ್ರತಿಭಟನೆ ನಡೆಸುತ್ತಿದ್ದಾಗ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೂಂಡಾಗಳು ಹಲವಾರು ವಿದ್ಯಾರ್ಥಿನಿಯರಿಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಟಿಎಂಸಿ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಸ್ಥಳೀಯ ಪೊಲೀಸರು ವಿದ್ಯಾರ್ಥಿನಿಯರನ್ನು ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಹಲವು ಗಂಟೆಗಳ ಚಿತ್ರಹಿಂಸೆಯ ನಂತರ, ಮಾರ್ಚ್ 4ರಂದು ಬೆಳಗಿನ ಜಾವ 2:30ಕ್ಕೆ ಸುಚರಿತ ದಾಸ್ ಅವರು ಅಂತಿಮವಾಗಿ ಬಿಡುಗಡೆ ಮಾಡಲಾಯಿತು” ಎಂದು ಪಶ್ಚಿಮ ಬಂಗಾಳದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ದೇಬಂಜನ್ ಡೇ ತಿಳಿಸಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಪಶ್ಚಿಮ ಮೇದಿನಿಪುರದ ಪೊಲೀಸ್ ವರಿಷ್ಠಾಧಿಕಾರಿ ದೃತಿಮಾನ್ ಸರ್ಕಾರ್ ಪೊಲೀಸರ ವಿರುದ್ದದ ಆರೋಪಗಳನ್ನು ನಿರಾಕರಿಸಿದ್ದಾರೆ. “ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ವಿಷಯವನ್ನು ದೊಡ್ಡದು ಮಾಡಲು ಪ್ರಯತ್ನಿಸುತ್ತಿದ್ದಾರೆ. ‘ನಮಗೆ ಒಳ್ಳೆಯ ವಿಷಯ ಸಿಕ್ಕಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಇದನ್ನು ಕೋರ್ಟ್ಗೆ ಕೊಂಡೊಯ್ಯಬೇಕು’ ಎಂದು ಅದರ ಜಿಲ್ಲಾ ಕಾರ್ಯದರ್ಶಿ ಹೇಳಿರುವ ವೈರಲ್ ವಿಡಿಯೋ ನಮಗೆ ದೊರೆತಿದೆ” ಎಂದಿದ್ದಾರೆ.
ಮೇದಿನಿಪುರ ಕಾಲೇಜಿನ ವಿದ್ಯಾರ್ಥಿಗಳು ಕಸ್ಟಡಿ ಪೊಲೀಸ್ ಚಿತ್ರಹಿಂಸೆಯ ವಿರುದ್ಧ ಕಲ್ಕತ್ತಾ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಮೂರ್ತಿ ತೀರ್ಥಂಕರ ಘೋಷ್ ಅವರು ಶೀಘ್ರದಲ್ಲೇ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆದರೆ, ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಈ ಹಿಂದೆ, ಮಾರ್ಚ್ 1ರ ಪ್ರತಿಭಟನೆಯ ಸಮಯದಲ್ಲಿ ‘ಪೊಲೀಸರ ನಿಷ್ಕ್ರಿಯತೆ’ ಮತ್ತು ‘ತಟಸ್ಥವಲ್ಲದ ನಿಲುವು’ ಬಗ್ಗೆ ಆರೋಪಿಸಿ ಕಲ್ಕತ್ತಾ ಹೈಕೋರ್ಟ್ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಲಾಗಿತ್ತು.
550 ದಲಿತರಿಗೆ ಶಿವ ದೇಗುಲಕ್ಕೆ ಪ್ರವೇಶ ನಿರ್ಬಂಧ; ಕ್ರಮ ತೆಗೆದುಕೊಳ್ಳದ ಮಮತಾ ಬ್ಯಾನರ್ಜಿ ಸರ್ಕಾರ


