ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬ ಕಾರಣ ನೀಡಿ ಕೊನೆ ಕ್ಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ನೀಡಿದ್ದ ಅನುಮತಿ ನಿರಾಕರಿಸಿದ್ದರಿಂದ ‘ಸೌಜನ್ಯ ಪರ ಸಮಾಲೋಚನಾ ಸಭೆ’ ಮುಂದೂಡಲಾಗಿದೆ. ಯುಟ್ಯೂಬರ್ ಸಮೀರ್ ಎಂ.ಡಿ. ಎಂಬಾತ ಮಾಡಿದ ವಿಡಿಯೊ ವೈರಲ್ ಆದ ಬಳಿಕ ಸೌಜನ್ಯಾ ಪ್ರಕರಣದ ಮರುತನಿಖೆಗೆ ಒತ್ತಡ ಹೆಚ್ಚಾಗಿದೆ.
ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಇಂದು (ಭಾನುವಾರ 09/03/2025), 2013 ರಲ್ಲಿ ಅತ್ಯಾಚಾರ-ಹತ್ಯೆಗೆ ಒಳಗಾದ ಧರ್ಮಸ್ಥಳದ ಅಪ್ರಾಪ್ತ ಬಾಲಕಿ ಸೌಜನ್ಯ ಪರವಾಗಿ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಆಯೋಜಕರು ಮಾಹಿತಿ ನೀಡಿದ್ದು, “ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಸೌಜನ್ಯ ಪರ ಸಾಹಿತಿ, ಚಿಂತಕ, ಪತ್ರಕರ್ತರು, ಹೋರಾಟಗಾರರ ಸಮಾಲೋಚನಾ ಸಭೆ ಕರೆಯಲಾಗಿತ್ತು. ಆದರೆ, ಕನ್ನಡ ಸಾಹಿತ್ಯ ಪರಿಷತ್ ಒತ್ತಡಕ್ಕೊಳಗಾಗಿ ಕೊನೇ ಕ್ಷಣದಲ್ಲಿ ಸಭಾಂಗಣದ ಅನುಮತಿಯನ್ನು ರದ್ದುಗೊಳಿಸಿದ್ದರಿಂದ ಸಮಾಲೋಚನಾ ಸಭೆಯನ್ನು ಮುಂದೂಡಲಾಗಿದೆ” ಎಂದು ಹೇಳಿದ್ದಾರೆ.
“ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣವನ್ನು ಬಾಡಿಗೆ ಪಾವತಿಸಿ ಕಾರ್ಯಕ್ರಮಕ್ಕೆ ನಿಗಧಿಗೊಳಿಸಲಾಗಿತ್ತು. ಕಾರ್ಯಕ್ರಮದ ಬಗ್ಗೆ ಪರಿಷತ್ ಜೊತೆಗೆ ಚರ್ಚೆ ನಡೆಸಲಾಗಿತ್ತು. ಆದರೆ, ಸಾಹಿತ್ಯ ಪರಿಷತ್ ಗೆ ಬಂದ ಲೀಗಲ್ ನೋಟಿಸ್ ಮತ್ತು ಪೊಲೀಸ್ ನೋಟಿಸ್ ಆಧಾರದಲ್ಲಿ ಸಭಾಂಗಣವನ್ನು ನೀಡಲಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು 08.03.2025 ರಂದು ರಾತ್ರಿ 10.30 ಕ್ಕೆ ಸಂಘಟಕರಲ್ಲೋರ್ವರಾದ ಬೈರಪ್ಪ ಹರೀಶ್ ಕುಮಾರ್ ಅವರಿಗೆ ಲಿಖಿತ ನೋಟಿಸ್ ಕಳಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ಕೊನೆ ಕ್ಷಣದಲ್ಲಿ ಸಭಾಂಗಣ ನಿರಾಕರಣೆಯ ಹಿನ್ನಲೆಯಲ್ಲಿ 09.03.2025 ರವಿವಾರ 10.30 ಕ್ಕೆ ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಸಲುದ್ದೇಶಿಸಿದ್ದ “ಸೌಜನ್ಯ ಸಮಾಲೋಚನಾ ಸಭೆ”ಯನ್ನು ಮುಂದೂಡಲಾಗಿದೆ” ಎಂದು ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.
ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಕರ್ನಾಟಕ ರಣಧೀರ ಪಡೆ ಅಧ್ಯಕ್ಷ, ಸೌಜನ್ಯ ಸಮಾಲೋಚನಾ ಸಭೆ ಆಯೋಜಕರಲ್ಲಿ ಒಬ್ಬರಾದ ಹರೀಶ್ ಕುಮಾರ್, “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನಿನ್ನೆ ತಡರಾತ್ರಿ ವೀರೇಂದ್ರ ಹೆಗಡೆ ಪರ ವಕೀಲರು ಮತ್ತು ವಿ.ವಿ. ಪುರಂ ಪೊಲೀಸರು ನೋಟಿಸ್ ನೀಡಿದ್ದಾರೆ. ವಿವಾದ ಇರುವದರಿಂದ ಅನುಮತಿ ನಿರಾಕರಿಸಿದ್ದೇವೆ ಎಂದು ಖುದ್ದು ಮಹೇಶ್ ಜೋಶಿ ಅವರೇ ನೇರವಾಗಿ ನನಗೆ ವಾಟ್ಸಾಪ್ ಸಂದೇಶ ಕಳಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಸಮಾಲೋಚನಾ ಸಭೆ ರದ್ದುಗೊಳಿಸಿದ್ದೇವೆ ಎಂಬ ಕಾರಣಕ್ಕೆ ಖುಷಿ ಪಡುವ ಅಗತ್ಯ ಇಲ್ಲ, ತುಳಿದಷ್ಟೇ ವೇಗವಾಗಿ ನಾವು ಮೇಲೆದ್ದು ಬರುತ್ತೇವೆ; ಇಂದು ಸಮಾನ ಮನಸ್ಕರೊಂದಿಗೆ ಸಭೆ ನಡೆಸಿ, ಶೀಘ್ರದಲ್ಲೇ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸುತ್ತೇವೆ” ಎಂದು ಹೇಳಿದರು.
ಕಲಬುರಗಿ| ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಚಪಾತಿ ವಿವಾದ; ಉತ್ತರ-ದಕ್ಷಿಣ ಭಾರತದ ವಿದ್ಯಾರ್ಥಿಗಳ ನಡುವೆ ಘರ್ಷಣೆ


