ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಇಂದಿನಿಂದ (ಮಾ.10) ಆರಂಭಗೊಂಡಿದ್ದು, ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಕುರಿತ ಚರ್ಚೆ ಶುರುವಾಗಿದೆ.
ಜನವರಿ 31ರಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಿತ್ತು. ಅಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ ಬಳಿಕ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ್ದರು. ಮರುದಿನ, ಅಂದರೆ ಫೆಬ್ರವರಿ 1ರಂದು ವಿತ್ತ ಸಚಿವೆ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ಆ ಬಳಿಕ ಚರ್ಚೆಗಳು ನಡೆದು, ಫೆಬ್ರವರಿ 13ರಂದು ಮೊದಲ ಹಂತದ ಅಧಿವೇಶನ ಮುಕ್ತಾಯಗೊಂಡಿತ್ತು.
ಇಂದಿನಿಂದ (ಮಾ.10) ಎರಡನೇ ಹಂತದ ಅಧಿವೇಶನ ಆರಂಭಗೊಂಡಿದ್ದು, ಏಪ್ರಿಲ್ 4ರಂದು ಬಜೆಟ್ ಅಧಿವೇಶನ ಮುಕ್ತಾಯಗೊಳ್ಳಲಿದೆ.
ಕೇಂದ್ರವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಸಜ್ಜು
ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಮತದಾರರ ಪಟ್ಟಿಗಳಲ್ಲಿ ಆಗಿರುವ ಅಕ್ರಮ, ವಕ್ಫ್ ಮಸೂದೆ, ಸಂಸದೀಯ ಕ್ಷೇತ್ರಗಳ ಪುನರ್‌ವಿಂಗಡನೆ ಮತ್ತು ಟ್ರಂಪ್ ಆಡಳಿತ ಭಾರತದ ಆಮದಿನ ಮೇಲೆ ಸುಂಕ ಹೇರಿರುವುದು ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಕಟ್ಟಿ ಹಾಕಲು ಈಗಾಗಲೇ ವಿಪಕ್ಷಗಳು ಸಜ್ಜಾಗಿವೆ.
ಕ್ಷೇತ್ರ ಪುನರ್‌ವಿಂಗಡನೆ ಮತ್ತು ಹಿಂದಿ ಹೇರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಈಗಾಗಲೇ ಜಟಾಪಟಿ ಏರ್ಪಟ್ಟಿದೆ. ಈ ವಿಚಾರ ಮುಂದಿಟ್ಟುಕೊಂಡು ಸಂಸತ್ತಿನಲ್ಲಿ ಡಿಎಂಕೆ ಸಂಸದರು ಕೇಂದ್ರದ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಕ್ಷೇತ್ರ ಪುನರ್‌ವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಮಾತ್ರವಲ್ಲ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಕೂಡ ಸಂಸದೀಯ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು, ಅಲ್ಲಿನ ಆಡಳಿತ, ಪ್ರತಿಪಕ್ಷಗಳಿಗೆ ಮನದಟ್ಟು ಮಾಡಿ ಕೇಂದ್ರದ ವಿರುದ್ದ ಪ್ರತಿಭಟನೆಗೆ ಇಳಿಸಲು ಡಿಎಂಕೆ ಯೋಜನೆ ರೂಪಿಸಿದೆ.
ವಕ್ಫ್ ಮಸೂದೆ ಮಂಡನೆ ಮತ್ತು ಪ್ರತಿಪಕ್ಷಗಳ ವಿರೋಧ
ಬಹು ಚರ್ಚಿತ ವಿಷಯವಾಗಿರುವ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸರ್ಕಾರ ಈ ಬಾರಿಯ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.
ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದಿಸಿದೆ. ಜೆಪಿಸಿಯಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರಸ್ತಾಪಿಸಿದ ತಿದ್ದುಪಡಿಗಳನ್ನು ಮಾತ್ರ ಅನುಮೋದಿಸಲಾಗಿದೆ. ಪ್ರತಿಪಕ್ಷಗಳು ಕೋರಿದ ತಿದ್ದುಪಡಿಗಳಲ್ಲಿಎಲ್ಲವನ್ನು ತಿರಸ್ಕರಿಸಲಾಗಿದೆ. ಇದು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಕ್ಫ್ ಮಸೂದೆಯನ್ನು ವಿರೋಧಿಸಲು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ಸಂಸತ್ತಿನ ಹೊರಗೆಯೂ ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಭಾನುವಾರ (ಮಾ.9) ಮಂಗಳೂರು ನಗರದಲ್ಲೂ ಮುಸ್ಲಿಂ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಪ್ರತಿಭಟನೆ ನಡೆದಿದೆ.
ರಾಜ್ಯ ಬಜೆಟ್ ಅಧಿವೇಶನ
ಮಾರ್ಚ್ 3ರಂದು ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 16ನೇ ಬಾರಿ ಬರೋಬ್ಬರಿ 4 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಮುಂದೂಡಿಕೆಯಾಗಿದ್ದ ಸದನ, ಇಂದಿನಿಂದ (ಮಾ.10) ಪುನರಾರಂಭಗೊಂಡಿದೆ. ಇಂದಿನಿಂದ ಬಜೆಟ್ ಮೇಲಿನ ಚರ್ಚೆಗಳು ನಡೆಯಲಿವೆ. ಮಾರ್ಚ್ 21ರಂದು ಅಧಿವೇಶನ ಕೊನೆಗೊಳ್ಳಲಿದೆ.
ಸಿಎಂ ಸಿದ್ದರಾಮಯ್ಯ ಮಂಡಿಸಿದ ಈ ಬಾರಿಯ ಬಜೆಟ್ ಅನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ‘ಹಲಾಲ್ ಬಜೆಟ್’ ‘ಪಾಕಿಸ್ತಾನಿ ಬಜೆಟ್’ ಎಂದೆಲ್ಲ ಟೀಕಿಸಿವೆ. ಬಜೆಟ್‌ನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ ಎಂಬ ಸುಳ್ಳು ಆರೋಪವನ್ನು ಮಾಡಿದೆ. ಇದಕ್ಕೆ ಈಗಾಗಲೇ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಪ್ರತ್ಯುತ್ತರ ಕೊಟ್ಟಿದ್ದಾರೆ.
ಬಜೆಟ್ ಮೇಲಿನ ಚರ್ಚೆ ವೇಳೆ ‘ಮುಸ್ಲಿಂ ಪರ ಬಜೆಟ್’ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ಮೇಲೆ ಮುಗಿಬೀಳುವುದು ದಟ್ಟವಾಗಿದೆ. ಇದನ್ನು ರಾಜ್ಯ ಸರ್ಕಾರ ಹೇಗೆ ಎದುರಿಸಲಿದೆ. ತನ್ನ ಬಜೆಟ್ ಅನ್ನು ಹೇಗೆ ಸಮರ್ಥಿಸಿಕೊಳ್ಳಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಎನ್‌ಇಪಿ-ಕ್ಷೇತ್ರ ಪುನರ್‌ವಿಂಗಡಣೆ ನಿರ್ಣಯದ ಕುರಿತು ಸಭೆ ನಡೆಸಿದ ಡಿಎಂಕೆ ಸಂಸದರು


