ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕಬೇಕೆಂಬ ಕರೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬೆಂಬಲಿಸಿದ್ದಾರೆ. ಅದಾಗ್ಯೂ, ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ರಕ್ಷಿಸುತ್ತಿರುವುದರಿಂದ ಕಾನೂನಿನ ವ್ಯಾಪ್ತಿಯಲ್ಲಿಯೇ ಅದನ್ನು ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾಗಿ ಸೋಮವಾರ ಪಿಟಿಐ ವರದಿ ಮಾಡಿದೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಪಕ್ಷದ ಸಹೋದ್ಯೋಗಿ ಮತ್ತು ಸತಾರಾ ಸಂಸದ ಉದಯನ್‌ರಾಜೆ ಭೋಸಲೆ ಅವರು ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕರೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಈ ಹೇಳಿಕೆ ನೀಡಿದ್ದಾರೆ.
ಸಂಸದ ಭೋಸಲೆ ಅವರು 17 ನೇ ಶತಮಾನದ ಮರಾಠಾ ದೊರೆ ಶಿವಾಜಿಯ ವಂಶಸ್ಥರಾಗಿದ್ದು, ಅವರನ್ನು ಮೊಘಲ್ ಆಳ್ವಿಕೆಯ ವಿರುದ್ಧದ ಪ್ರತಿರೋಧದ ಸಂಕೇತವಾಗಿ ಮಹಾರಾಷ್ಟ್ರದಲ್ಲಿ ಮೆರೆಸಲಾಗುತ್ತದೆ.
“ನಾವೆಲ್ಲರೂ ಸಹ ಅದೇ ವಿಷಯವನ್ನು ಬಯಸುತ್ತೇವೆ. ಆದರೆ ನೀವು ಅದನ್ನು ಕಾನೂನಿನ ಚೌಕಟ್ಟಿನೊಳಗೆ ಮಾಡಬೇಕಾಗಿದೆ. ಏಕೆಂದರೆ ಇದು ಸಂರಕ್ಷಿತ ತಾಣವಾಗಿದೆ” ಎಂದು ಫಡ್ನವೀಸ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. “ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಸ್ಥಳವನ್ನು ಎಎಸ್‌ಐ [ಭಾರತೀಯ ಪುರಾತತ್ವ ಸಮೀಕ್ಷೆ] ರಕ್ಷಣೆಗೆ ಒಳಪಡಿಸಲಾಗಿತ್ತು.” ಎಂದು ಅವರು ಹೇಳಿದ್ದಾರೆ.
ಔರಂಗಜೇಬ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಿಂದ ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಮುಖ್ಯಮಂತ್ರಿಯವರ ಈ ಹೇಳಿಕೆ ಹೊರಬಿದ್ದಿದೆ.
ಮಾರ್ಚ್ 3 ರಂದು ಹೇಳಿಕೆ ನೀಡಿದ್ದ ಅವರು ಔರಂಗಜೇಬ್ ಅವರನ್ನು ಕ್ರೂರ ಆಡಳಿತಗಾರ ಎಂದು ತಾನು ಪರಿಗಣಿಸುವುದಿಲ್ಲ ಎಂದು ಅಜ್ಮಿ ಹೇಳಿದ್ದರು. “ಇತಿಹಾಸವನ್ನು ತಪ್ಪಾಗಿ ತೋರಿಸಲಾಗುತ್ತಿದೆ. ಔರಂಗಜೇಬ್ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ನಾನು ಅವರನ್ನು ಕ್ರೂರ ಆಡಳಿತಗಾರ ಎಂದು ತಾನು ಪರಿಗಣಿಸುವುದಿಲ್ಲ.” ಎಂದು ಹೇಳಿದ್ದರು.
ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅವರ ಹೇಳಿಕೆಯ ಒಂದು ದಿನದ ನಂತರ ಅಜ್ಮಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಅಗ್ರಹಿಸಲಾಗಿತ್ತು. ಜೊತೆಗೆ ಅವರ ವಿರುದ್ಧ ಶಿವಸೇನೆ ಸಂಸದ ನರೇಶ್ ಮಾಸ್ಕೆ ಅವರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೂತುಕುಡಿ | ದಲಿತ ಶಾಲಾ ಬಾಲಕನನ್ನು ಬಸ್ಸಿನಿಂದ ಇಳಿಸಿ ಥಳಿತ; ಕುಡುಗೋಲಿನಿಂದ ಹಲ್ಲೆ
ತೂತುಕುಡಿ | ದಲಿತ ಶಾಲಾ ಬಾಲಕನನ್ನು ಬಸ್ಸಿನಿಂದ ಇಳಿಸಿ ಥಳಿತ; ಕುಡುಗೋಲಿನಿಂದ ಹಲ್ಲೆ

