‘ಜಾತಿ ಕಾರಣಕ್ಕೆ’ ಹಿಂದುಳಿದ ಸಮುದಾಯದ ಉದ್ಯೋಗಿಯೊಬ್ಬರಿಗೆ ತಾರತಮ್ಯವೆಸಗಿದ ಆರೋಪದ ಮೇಲೆ ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿರುವ ಪ್ರಸಿದ್ದ ಕೂಡಲ್ಮಾಣಿಕ್ಯಂ ದೇವಸ್ಥಾನದ ಅರ್ಚಕರ ವಿರುದ್ದ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಹೆಚ್‌ಆರ್‌ಸಿ) ಪ್ರಕರಣ ದಾಖಲಿಸಿದ್ದು, ತನಿಖೆಗೆ ಆದೇಶಿಸಿದೆ.
ಕೇರಳ ದೇವಸ್ವಂ (ದೇವಸ್ಥಾನ) ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ‘ಈಳವ ಸಮುದಾಯ’ಕ್ಕೆ (ಇತರೆ ಹಿಂದುಳಿದ ಸಮುದಾಯ) ಸೇರಿದ ವಿಎ ಬಾಲು ಅವರನ್ನು ದೇವಸ್ಥಾನದಲ್ಲಿ ‘ಕಝಕಂ’ ಆಗಿ ನೇಮಿಸುವುದರೊಂದಿಗೆ ವಿವಾದ ಆರಂಭವಾಗಿದೆ. ದೇವರಿಗೆ ಮಾಲೆಗಳನ್ನು ತಯಾರಿಸುವುದು ಮತ್ತು ವಿಧ್ಯುಕ್ತ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು ‘ಕಝಕಂ’ ಹುದ್ದೆಯ ಜವಾಬ್ದಾರಿಯಾಗಿರುತ್ತದೆ.
ಬಾಲು ಅವರ ನೇಮಕಾತಿಗೆ ದೇವಾಲಯದ ನಂಬೂದಿರಿ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನದ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದ್ದಾರೆ. ಅಲ್ಲದೆ, ಮುಂಬರುವ ‘ಪ್ರತಿಷ್ಠಾ ದಿನಂ’ (ಪವಿತ್ರೀಕರಣ ದಿನ) ವಿಧಿ ವಿಧಾನಗಳಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಫೆಬ್ರವರಿ 24ರಂದು ಬಾಲು ಅವರು ದೇವಸ್ಥಾನದ ಕೆಲಸಕ್ಕೆ ಸೇರಿದ್ದು, ಅಂದಿನಿಂದ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಆರು ಕುಟುಂಬಗಳ ಅರ್ಚಕರು ವಿಧಿ ವಿಧಾನಗಳನ್ನು ಮಾಡಲು ನಿರಾಕರಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ದೇವಸ್ವಂ (ದೇವಸ್ಥಾನ) ಮಂಡಳಿ ಅಧಿಕಾರಿಗಳು ಅರ್ಚಕರ ಗೈರು ಹಾಜರಿ ಕುರಿತು ವಿವರಣೆ ಕೋರಿ ನೋಟಿಸ್ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಅರ್ಚಕರು, “ತಪ್ಪು ಸರಿಪಡಿಸುವವರೆಗೆ ತಮ್ಮ ಕರ್ತವ್ಯಗಳನ್ನು ಪುನರಾರಂಭಿಸುವುದಿಲ್ಲ” ಎಂದು ಉತ್ತರಿಸಿದ್ದಾರೆ. ಒತ್ತಡಕ್ಕೆ ಮಣಿದ ದೇವಸ್ವಂ ಅಧಿಕಾರಿಗಳು ಬಾಲು ಅವರನ್ನು ಕಚೇರಿ ಕರ್ತವ್ಯಗಳಿಗೆ ಮರು ನಿಯೋಜಿಸಿದ್ದು, ಅವರನ್ನು ದೇವಾಲಯಕ್ಕೆ ಸಂಬಂಧಿಸಿದ ಜವಾಬ್ದಾರಿಗಳಿಂದ ಮುಕ್ತಗೊಳಿಸಿದ್ದಾರೆ ಎಂದು ವರದಿ ಹೇಳಿದೆ.
ಈ ಕುರಿತು ತನಿಖೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೋಮವಾರ (ಮಾ.10) ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿ. ಗೀತಾ ಅವರು ಕೊಚ್ಚಿನ್ ದೇವಸ್ವಂ (ದೇವಸ್ಥಾನ) ಆಯುಕ್ತರು ಮತ್ತು ಕೂಡಲ್ಮಾಣಿಕ್ಯಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ಕೆ. ರಾಧಾಕೃಷ್ಣನ್ ಅವರು “ದೇವಸ್ವಂ ಮಂಡಳಿಯು 10 ತಿಂಗಳ ಅವಧಿಗೆ ‘ಕಝಕಂ’ ಹುದ್ದೆಗೆ ಬಾಲು ಅವರನ್ನು ನೇಮಿಸುವ ನಿರ್ಧಾರ ತೆಗೆದುಕೊಂಡಿತ್ತು. ಆ ನಿರ್ಧಾರವನ್ನು ಎತ್ತಿ ಹಿಡಿಯಬೇಕು. ಒಬ್ಬ ವ್ಯಕ್ತಿಗೆ ಕೆಲಸ ಮಾಡುವ ಸ್ವಾತಂತ್ರ್ಯವನ್ನು ನಿರಾಕರಿಸುವ ಹಕ್ಕು ಪುರೋಹಿತರಿಗೆ ಇಲ್ಲ” ಎಂದಿದ್ದಾರೆ. ತಾರತಮ್ಯ ನೀತಿ ಮತ್ತು ನಂಬಿಕೆಗಳನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.
“ಪ್ರಸ್ತುತ ಬಾಲು ಅವರನ್ನು ದೇವಸ್ಥಾನದ ಹುದ್ದೆಯಿಂದ ಹೊರಗಿಡಲಾಗಿದೆ. ಅವರ ಬದಲಿಗೆ ‘ಪಿಶಾರೋಡಿ’ ಸಮುದಾಯದ ಒಬ್ಬರನ್ನು’ಕಝಕಂ’ ಹುದ್ದೆಗೆ ತಾತ್ಕಾಲಿಕವಾಗಿ ನೇಮಿಸಲಾಗಿದೆ” ನ್ಯಾಯಾಲಯ ಅಥವಾ ಸರ್ಕಾರ ಏನಾದರು ಆದೇಶದ ನೀಡದ ಹೊರತು, ಅರ್ಚಕರಿಂದ ಎಷ್ಟೇ ಒತ್ತಡ ಇದ್ದರೂ ಬಾಲು ಅವರನ್ನು ದೇವಾಲಯದ ಕರ್ತವ್ಯಕ್ಕೆ ಮರಳಿ ಸೇರಿಸಿಕೊಳ್ಳಲಾಗುವುದು” ಎಂದು ಕೂಡಲ್ಮಾಣಿಕ್ಯಂ ದೇವಸ್ವಂ (ದೇವಸ್ಥಾನ) ಅಧ್ಯಕ್ಷ ಸಿ.ಕೆ ಗೋಪಿ ಹೇಳಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ತಿಳಿಸಿದೆ.
ಪವಿತ್ರೀಕರಣ ದಿನದಂದು ವಿಧಿ ವಿಧಾನಗಳು ಸುಗಮವಾಗಿ ನಡೆಯಲು ಪುರೋಹಿತರ ಭಾಗವಹಿಸುವಿಕೆ ಅಗತ್ಯವಾಗಿದೆ. ಹಾಗಾಗಿ, ದೇವಸ್ಥಾನದ ಮಂಡಳಿ ಅಧಿಕಾರಿಗಳು ಕಝಕಂ ಹುದ್ದೆಗೆ ತಾತ್ಕಾಲಿಕವಾಗಿ ಒಬ್ಬರನ್ನು ನೇಮಕ ಮಾಡಿದ್ದಾರೆ ಎಂದು ಸಿ.ಕೆ ಗೋಪಿ ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲು ಅವರು, “ತಾನು ಇನ್ನು ಮುಂದೆ ‘ಕಝಕಂ’ ಕೆಲಸವನ್ನು ಮಾಡುವುದಿಲ್ಲ. ತನ್ನ ನಿರ್ಧಾರದ ಬಗ್ಗೆ ದೇವಸ್ಥಾನ ಮಂಡಳಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಮಹಾಕುಂಭದಿಂದ ತಂದ ಗಂಗಾಜಲ ಕುಡಿಯಲು ನಿರಾಕರಿಸಿದ ರಾಜ್ ಠಾಕ್ರೆ: ಮೂಢನಂಬಿಕೆಯಿಂದ ಹೊರಬರಲು ಜನತೆಗೆ ಕರೆ


