ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಕನಕಲಕ್ಷ್ಮೀ ಬಂಧನವಾಗಿದೆ. ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಹಿಳಾ ವಕೀಲೆ ಜೀವಾ 13 ಪುಟಗಳ ಡೆತ್ನೋಟ್ ಬರೆದಿಟ್ಟು 2024 ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ.
ಈ ಸಂಬಂಧ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ಜೀವಾ ಸಹೋದರಿ ದೂರು ನೀಡಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿಯಾಗಿದ್ದ ಕನಕಲಕ್ಷ್ಮಿ, ವಿಚಾರಣೆ ನೆಪದಲ್ಲಿ ಜೀವಾ ಅವರನ್ನು ಅವಾಚ್ಯವಾಗಿ ನಿಂದಿಸಿ ಮಾನಸಿಕ ಆಘಾತಕ್ಕೆ ಗುರಿಪಡಿಸಿದ್ದರು ಎಂದು ದೂರು ನೀಡಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ಅಕ್ರಮದ ಕುರಿತು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇದನ್ನು ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅವರು ತನಿಖೆ ಕೈಗೊಂಡಿದ್ದು, ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ ಆರೋಪದ ಮೇಲೆ 34 ವರ್ಷದ ವಕೀಲೆ ಜೀವಾ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವಿಚಾರಣೆಯ ನಂತರ ವಕೀಲೆ ಜೀವಾ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಿಮ್ಯಾಂಡ್ ಅರ್ಜಿ ಪರಿಶೀಲಿಸಿದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ, ಆರೋಪಿ ಕನಕಲಕ್ಷ್ಮಿ ಅವರನ್ನು ಮಾ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಡೆತ್‌ನೋಟ್‌ನಲ್ಲಿ ಬರೆದ ಬರವಣಿಗೆ ಜೀವಾ ಅವರದ್ದೇ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ. ತನಿಖೆ ಸಂದರ್ಭದಲ್ಲಿ 2024ರ ನವೆಂಬರ್ 14ರಂದು ಸಿಐಡಿ ಕಚೇರಿಗೆ ಕರೆಸಿದ್ದ ಕನಕಲಕ್ಷ್ಮಿ, ‘ಒಳ ಉಡುಪು ತೆಗೆಸಿ ವಿವಸ್ತ್ರಗೊಳಿಸಿದ್ದರು. ಬೆನ್ನಿನ ಮೇಲೆ ಹಲ್ಲೆ ನಡೆಸಿದ್ದರು. ಸೈನೈಡ್ ತಂದಿದ್ದೀಯಾ ಎಂದು ಹೀಯಾಳಿಸಿ ಹಿಂಸೆ ನೀಡಿದ್ದರು,’ ಎಂದು ಜೀವಾ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಈ ಕುರಿತ ವಿಡಿಯೊ ತುಣುಕುಗಳು ಕನಕಲಕ್ಷ್ಮಿ ಅವರ ಮೊಬೈಲ್‌ನಲ್ಲಿಯೇ ಸಿಕ್ಕಿವೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.
ಉದ್ಯಮಿ, ವಕೀಲೆ ಎಸ್. ಜೀವಾ ಕುರಿತು ಪೊಲೀಸರಿಗೆ ದೂರು ನೀಡಿದ್ದ ಅವರ ತಂಗಿ ಸಂಗೀತಾ, ‘ಭೋವಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ ವಿಚಾರಣೆ ವೇಳೆ ನನ್ನ ಅಕ್ಕ ಜೀವಾ ಅವರನ್ನು ನಗ್ನಗೊಳಿಸಿ ಡಿವೈಎಸ್‌ಪಿ ಕನಕಲಕ್ಷ್ಮಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಜತೆಗೆ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಜೀವಾ ಆತ್ಮಹತ್ಯೆಗೆ ಅವರೇ ಕಾರಣ,’ ಎಂದು ಆರೋಪಿಸಿದ್ದರು.
ಕೇರಳದ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಜಾತಿ ತಾರತಮ್ಯ : ಬ್ರಾಹ್ಮಣ ಅರ್ಚಕರ ವಿರುದ್ಧ ಪ್ರಕರಣ ದಾಖಲು, ತನಿಖೆಗೆ ಆದೇಶ


