ಮುಂಬರುವ 2026ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರದಬ್ಬುತ್ತೇವೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ದ್ವೇಷದ ಹೇಳಿಕೆ ನೀಡಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಅವರು ಸುವೇಂದು ಅಧಿಕಾರಿ ಅವರ ಹೇಳಿಕೆಯನ್ನು ಖಂಡಿಸಿದ್ದು, “ಇದು ‘ದ್ವೇಷ ಭಾಷಣ’. ಸಾಂವಿಧಾನಿಕ ಹುದ್ದೆಯಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದು ಕ್ರಿಮಿನಲ್ ಅಪರಾಧ” ಎಂದಿದ್ದಾರೆ.
ಫೆಬ್ರವರಿ 17 ರಿಂದ ಬಜೆಟ್ ಅಧಿವೇಶನದ ಅಂತ್ಯದವರೆಗೆ ಸುವೇಂದು ಅಧಿಕಾರಿ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ಮಮತಾ ಬ್ಯಾನರ್ಜಿ ಸರ್ಕಾರವನ್ನು “ಮುಸ್ಲಿಂ ಲೀಗ್‌ನ ಎರಡನೇ ಆವೃತ್ತಿಯಂತೆ ವರ್ತಿಸುತ್ತಿರುವ ಕೋಮು ಆಡಳಿತ” ಎಂದು ಕರೆದಿರುವ ಅಧಿಕಾರಿ, “ಬಂಗಾಳದ ಜನರು ಈ ಬಾರಿ ಅವರನ್ನು (ಟಿಎಂಸಿ) ಬೇರು ಸಹಿತ ಕಿತ್ತುಹಾಕುತ್ತಾರೆ” ಎಂದು ಹೇಳಿದ್ದಾರೆ.
ಸುವೇಂದು ಅಧಿಕಾರಿಯ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಂಗಾಳದ ಬಿಜೆಪಿ ನಾಯಕರು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, “ಇದು ಅತ್ಯಂತ ಆಕ್ಷೇಪಾರ್ಹ ಹೇಳಿಕೆ. ಬಂಗಾಳದ ವಿರೋಧ ಪಕ್ಷದ ನಾಯಕರು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡಲು ಸಾಧ್ಯವಿಲ್ಲ. ನಿರ್ದಿಷ್ಟ ಧರ್ಮದ ಶಾಸಕರನ್ನು ದೈಹಿಕವಾಗಿ ಹೊರಹಾಕಲಾಗುವುದು ಎಂದು ಅವರು ಹೇಳಲು ಸಾಧ್ಯವಿಲ್ಲ. ಇದು ಸಂಭವಿಸಲೂ ಸಾಧ್ಯವಿಲ್ಲ. ಈ ರೀತಿ ಹೇಳಬಾರದು, ಅವರ ಮನಸ್ಥಿತಿ ಸರಿಯಿಲ್ಲ” ಎಂದಿದ್ದಾರೆ.
“ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳಲ್ಲಿ ಚರ್ಚೆ ಮತ್ತು ವಾದ-ವಿವಾದಗಳು ನಡೆಯಬಹುದು. ಆದರೆ ಧರ್ಮವನ್ನು ಕೆಣಕುವುದು ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಶಾಸಕರನ್ನು ಗುರಿಯಾಗಿಸಿಕೊಳ್ಳುವುದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ವಿರೋಧ ಪಕ್ಷದ ನಾಯಕ ತನ್ನ ಮಾನಸಿಕ ಅಸ್ಥಿರತೆಯಿಂದಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅಪಾಯಕಾರಿ, ಪ್ರಚೋದನಕಾರಿ ಮತ್ತು ನೀತಿಗೆಟ್ಟದ್ದು. ಇದು ಕ್ರಿಮಿನಲ್ ಅಪರಾಧವೂ ಆಗಿದೆ” ಎಂದು ಘೋಷ್ ಕಿಡಿಕಾರಿದ್ದಾರೆ.
ಸುವೇಂದು ಅಧಿಕಾರಿ ಹೇಳಿಕೆ ಅವರ ಸ್ವಂತ ಪಕ್ಷದಲ್ಲೇ ಅಸಮಾಧಾನವನ್ನು ಉಂಟುಮಾಡಿರುವುದು ಇದೇ ಮೊದಲಲ್ಲ.
2024 ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ನಂತರ, ಅಧಿಕಾರಿಯು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯನ್ನು ಕೊನೆಗೊಳಿಸಲು ಕರೆ ನೀಡಿದ್ದರು: “ಈ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಅನ್ನು ನಿಲ್ಲಿಸಿ. ನಾವು ‘ಜೋ ಹಮಾರೆ ಸಾಥ್, ಹಮ್ ಉನ್ಕೆ ಸಾಥ್’ ಎನ್ನುತ್ತೇನೆ. ನಮಗೆ ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ” ಎಂದಿದ್ದರು.
ಬಂಗಾಳದ ಬಿಜೆಪಿ ಮುಖಂಡರು ಈ ಹೇಳಿಕೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ್ದರು.


