ಏಷ್ಯನ್ ನ್ಯೂಸ್ ಏಜೆನ್ಸಿ (ANI) ಸಂಸ್ಥೆಯ ವಿರುದ್ಧ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಕುರಿತು ವಿಕಿಪೀಡಿಯಾ ಪುಟ ಮತ್ತು ಇತರ ಚರ್ಚೆಗಳನ್ನು ತೆಗೆದುಹಾಕುವಂತೆ ನಿರ್ದೇಶಿಸುವ ದೆಹಲಿ ಹೈಕೋರ್ಟ್ ಆದೇಶದ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ. “ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳ ಕಾನೂನುಬದ್ಧತೆ ಮತ್ತು ಸಿಂಧುತ್ವದ ಬಗ್ಗೆ ನಮಗೆ ಕಳವಳ ಇದೆ” ಎಂದು ಪೀಠವು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ವಿಕಿಪೀಡಿಯಾ vs ಎಎನ್‌ಐ ಪ್ರಕರಣ
ವಿಕಿಮೀಡಿಯಾ ಫೌಂಡೇಶನ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ವಿಕಿಪೀಡಿಯಾ ಪುಟದಲ್ಲಿನ ವಿಷಯವು ನಡೆಯುತ್ತಿರುವ ನ್ಯಾಯಾಲಯದ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ದೆಹಲಿ ಹೈಕೋರ್ಟ್‌ನ ಅಭಿಪ್ರಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ನ್ಯಾಯಾಲಯವು ANI ಗೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 4 ರಂದು ಉತ್ತರಿಸಲು ಹೇಳಿದೆ.
ANI ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ವಿಚಾರಣೆ ನಡೆಸುವಾಗ, ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠವು “ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ vs. ವಿಕಿಮೀಡಿಯ ಫೌಂಡೇಶನ್” ಎಂಬ ಶೀರ್ಷಿಕೆಯ ವಿಕಿಪೀಡಿಯಾ ಪುಟವನ್ನು ತೆಗೆದುಹಾಕುವಂತೆ ನಿರ್ದೇಶಿಸಿತ್ತು. ವಿಕಿಪೀಡಿಯಾ vs ಎಎನ್‌ಐ ಪ್ರಕರಣ
ಪುಟದಲ್ಲಿನ ಕೆಲವು ಹೇಳಿಕೆಗಳು, ವಿಶೇಷವಾಗಿ ಭಾರತದಲ್ಲಿ ವಿಕಿಪೀಡಿಯಾವನ್ನು ಸ್ಥಗಿತಗೊಳಿಸುವಂತೆ ನ್ಯಾಯಾಧೀಶರು ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯು ಪ್ರಾಥಮಿಕವಾಗಿ ನ್ಯಾಯಾಲಯದ ನಿಂದನೆಗೆ ಸಮಾನವಾಗಿದೆ ಎಂದು ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಪುಟದಲ್ಲಿನ ವಿಷಯ ಮತ್ತು ನಂತರದ ಚರ್ಚೆಗಳು ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಾಲಯದ ವಿಚಾರಣೆಗಳ ಹೇಳಿಕೆಗಳು ಮತ್ತು ಟೀಕೆಗಳನ್ನು ಅಸಾಮಾನ್ಯವೆಂದು ನೋಡಲಾಗುವುದಿಲ್ಲ ಎಂದು ಸೂಚಿಸಿದ ನ್ಯಾಯಮೂರ್ತಿ ಓಕಾ, “ಈ ನ್ಯಾಯಾಲಯದಲ್ಲಿ, ನಾವು ವಿಷಯಗಳನ್ನು ಹೇಳುತ್ತೇವೆ ಮತ್ತು ಯಾರಾದರೂ ಅದರ ಬಗ್ಗೆ ಹೇಳಿಕೆ ನೀಡಲು ಬಯಸುತ್ತಾರೆ … ಅಂತದ್ದು ನಡೆಯುತ್ತದೆ. ಕೆಲವೊಮ್ಮೆ ಜನರು ನ್ಯಾಯಾಲಯವು ಪೂರ್ವಭಾವಿ ಮನಸ್ಸಿನಿಂದ ಇಲ್ಲಿ ಕುಳಿತಿದೆ ಎಂದು ಹೇಳುತ್ತಾರೆ ಅಥವಾ ನೀವು ವಿಚಾರಣೆಯನ್ನು ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಜನರು ಇಂತಹ ಮಾತುಗಳನ್ನು ಹೇಳುತ್ತಲೆ ಇರುತ್ತಾರೆ, ಆದರೆ ಅದನ್ನು ನಾವು ಸಹಿಸಿಕೊಳ್ಳಬೇಕಾಗುತ್ತದೆ.” ಎಂದು ಹೇಳಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶವನ್ನು ಟೀಕಿಸಿದ ಅವರು, “ವಕೀಲರು ಉತ್ತಮವಾದ ವಾದಗಳನ್ನು ಮಾಡಲು ಕೆಲವೊಮ್ಮೆ ನಾವು ಮುಕ್ತ ನ್ಯಾಯಾಲಯದಲ್ಲಿ ಅನೇಕ ವಿಷಯಗಳನ್ನು ಹೇಳುತ್ತೇವೆ. ಈಗ, ನ್ಯಾಯಾಲಯ ಮೌಖಿಕವಾಗಿ ಏನಾದರೂ ಹೇಳಿದರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ, ಎಲ್ಲೋ ಒಂದು ಹೇಳಿಕೆ ನೀಡಲ್ಪಟ್ಟರೆ, ಅಂತಹ ಹೇಳಿಕೆಗಳ ಬಗ್ಗೆ ನ್ಯಾಯಾಲಯ ಏಕೆ ಕಟುವಾಗಿ ವರ್ತಿಸಬೇಕು… ನ್ಯಾಯಾಲಯದಲ್ಲಿ ನಡೆಯುವ ವಿಚಾರದ ಬಗ್ಗೆ ಜನರು ಏನನ್ನಾದರೂ ಚರ್ಚಿಸುತ್ತಾರೆ, ಅದಕ್ಕೆ ಹಸ್ತಕ್ಷೇಪಕ್ಕೆ ಮಾಡುವುದು ಸರಿಯೆ?” ಎಂದು ಹೇಳಿದ್ದಾರೆ.
ವಿಕಿಮೀಡಿಯಾ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ದೆಹಲಿ ಹೈಕೋರ್ಟ್ ಮಾನನಷ್ಟದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ವಾದಿಸಿದ್ದಾರೆ. ಸಂಬಂಧಪಟ್ಟ ವಿಷಯವು ವಿಕಿಮೀಡಿಯಾದ್ದಲ್ಲ, ಬದಲಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನದಿಂದ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ಓಕಾ ANI ವಿರುದ್ಧ ಕೂಡಾ ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ವಿಷಯವು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ. ವಿಕಿಮೀಡಿಯಾ ಪುಟದಲ್ಲಿನ ಹೇಳಿಕೆಗಳಿಗೆ ಕಾರಣರಾದ ವ್ಯಕ್ತಿಗಳು ನ್ಯಾಯಾಲಯದಲ್ಲಿ ಇಲ್ಲ ಎಂದು ANI ವಕೀಲರು ವಾದಿಸಿದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಓಕಾ, “ನೀವು ಒಂದು ಪ್ರಮುಖ ಅಂಶವನ್ನು ಕಳೆದುಕೊಂಡಿದ್ದೀರಿ. ಅಂತಿಮವಾಗಿ, ಇದು ಮಾಧ್ಯಮವಾಗಿದ್ದು. ಪ್ರಶ್ನೆಯಿರುವುದು ಮಾಧ್ಯಮದ ಸ್ವಾತಂತ್ರ್ಯದ ಬಗ್ಗೆ ಆಗಿದೆ.” ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಮದೇವಸ್ಥಾನದಲ್ಲಿ ದಲಿತ ಯುವಕನಿಗೆ ತಿಲಕ ಹಚ್ಚಲು ಪೂಜಾರಿ ನಿರಾಕರಣೆ: ನಾವು ಹಿಂದೂಗಳಲ್ಲವೇ? ಎಂದು ಆಕ್ರೋಶ
ರಾಮದೇವಸ್ಥಾನದಲ್ಲಿ ದಲಿತ ಯುವಕನಿಗೆ ತಿಲಕ ಹಚ್ಚಲು ಪೂಜಾರಿ ನಿರಾಕರಣೆ: ನಾವು ಹಿಂದೂಗಳಲ್ಲವೇ? ಎಂದು ಆಕ್ರೋಶ

