ಅತ್ಯಾಚಾರಕ್ಕೆ ಒಳಗಾಗಿ, ನಂತರ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾಳ ನ್ಯಾಯಕ್ಕೆ ಆಗ್ರಹಿಸಿ ಮತ್ತು ಊಳಿಗಮಾನ್ಯ ದರ್ಪದ ವಿರುದ್ಧ ಆಯೋಜಿಸಿದ್ದ ಸಮಾನ ಮನಸ್ಕ ಸಾಹಿತಿ, ಚಿಂತಕರ ಹೋರಾಟದ ದಿಕ್ಸೂಚಿ ಸಭೆಗೆ ಮತ್ತೆ ಅವಕಾಶ ನಿರಾಕರಿಸಲಾಗಿದೆ.
ನ್ಯಾಯಾಲಯದ ನಿರ್ದೇಶನದ ಕಾರಣ ನೀಡಿ, ಬೆಂಗಳೂರಿನ ಶೇಷಾದ್ರಿಪುರದ ಎಐಟಿಯುಸಿ ಸಭಾಂಗಣದಲ್ಲಿ ಇಂದು (18 ಮಾರ್ಚ್ ಮಂಗಳವಾರ) ಸಂಜೆ 5ಗಂಟೆಗೆ ‘ಸಮಾನ ಮನಸ್ಕರ ವೇದಿಕೆ’ ಆಯೋಜಿಸಿರುವ ಸಭೆಯನ್ನು ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ಹೈಕೋರ್ಟ್ ಆದೇಶವನ್ನು ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು, “ಈ ರೀತಿಯ ಪ್ರತಿಭಟನೆಗೆ ಅವಕಾಶವಿಲ್ಲ. ಒಂದು ವೇಳೆ ತಾವು ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು”ಎಂದು ತಿಳಿಸಿದ್ದಾರೆ. ಆದರೆ, ನಮಗೆ ಲಭ್ಯವಾದ ಡಿಜಿಟಲ್ ಪೋಸ್ಟರ್‌ನಲ್ಲಿ ದಿಕ್ಸೂಚಿ ಸಭೆ ಎಂದು ಉಲ್ಲೇಖಿಸಲಾಗಿದೆ, ಪ್ರತಿಭಟನೆ ಎಂದಿಲ್ಲ.

ಪೊಲೀಸರ ನೋಟಿಸ್‌ನಲ್ಲಿ ಏನಿದೆ?
“ಸಾರಿಗೆ ನೌಕರರ ಹಿತ ರಕ್ಷಣಾ ವೇದಿಕೆಯ ನವೀನ್ ಶೀನಿವಾಸ್, ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್, ವಕೀಲರಾದ ಮೈತ್ರಿಯವರ ನೇತೃತ್ವದಲ್ಲಿ ‘ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ, ಊಳಿಗೆಮಾನ್ಯ ದರ್ಪದ ವಿರುದ್ಧ – ಸಾಹಿತಿ, ಚಿಂತಕ ಹೋರಾಟ ದಿಕ್ಕೂಚಿ ಸಭೆ ಹಮ್ಮಿಕೊಂಡಿದ್ದಾರೆ. ಪ್ರಸ್ತುತ ಸಭೆಯಲ್ಲಿ ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಾಗುತ್ತಿರುವ ಕುರಿತು ಮತ್ತು ಸೌಜನ್ಯ ಪ್ರಕರಣದ ಕಾನೂನು ಹೋರಾಟದ ರೂಪುರೇಷೆ ಚರ್ಚೆಯಾಗಲಿದೆ. ಈ ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂಬ ಮಾಹಿತಿಯಿದೆ. ಕರ್ನಾಟಕ ಹೈಕೋರ್ಟ್ ಆದೇಶದಂತೆ ಈ ರೀತಿಯ ಪ್ರತಿಭಟನೆಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ನೋಟಿಸ್ ನಲ್ಲಿ ತಿಳಿಸಲಾಗಿದೆ.

“ಸಭೆ ನಡೆದೇ ನಡೆಯುತ್ತದೆ”
ಪೊಲೀಸರ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಆಯೋಜಕರು “ಕರ್ನಾಟಕದಲ್ಲಿ ಫ್ಯೂಡಲ್ ಅಧೀನದ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದೆಯೇ? ಹೈಕೋರ್ಟ್ ಆದೇಶವನ್ನು ತಿರುಚಿ ಸೌಜನ್ಯ ಪರ ಹೋರಾಟವನ್ನು ನಿಲ್ಲಿಸಲು ಪೊಲೀಸರು ರಾತ್ರಿ ಹಗಲು ಶ್ರಮಿಸುತ್ತಿರುವುದೇಕೆ? ಕಚೇರಿಯೊಳಗೆ ಸಮಾಲೋಚನಾ ಸಭೆ/ದಿಕ್ಸೂಚಿ ಸಭೆ ನಡೆಸುವಂತಿಲ್ಲವೇ? ನಾಳೆ ಮನೆಯೊಳಗೂ ಮನೆ ಮಂದಿಯ ಜೊತೆಗೂ ಸೌಜನ್ಯ ಬಗ್ಗೆ ಮಾತನಾಡಬಾರದು ಎಂದು ಪೊಲೀಸರು ನೋಟಿಸ್ ನೀಡಬಹುದೇ? ಯಾರದ್ದೇ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳಬಹುದೇ ವಿನಃ ಸಮಾಲೋಚನಾ ಸಭೆಗಳ ಮೇಲಲ್ಲ. ಹಾಗಾಗಿ ಕಾನೂನು ತಜ್ಞರು ನಮಗೆ ನೀಡಿದ ವ್ಯಾಖ್ಯಾನದಂತೆ, ದಿನಾಂಕ 18.03.2025 ಮಂಗಳವಾರ ಸಂಜೆ 5 ಗಂಟೆಗೆ ನಡೆಸಲು ಉದ್ದೇಶಿಸಿದ ಸಾಹಿತಿ-ಚಿಂತಕ- ಹೋರಾಟಗಾರರ ದಿಕ್ಸೂಚಿ ಸಭೆ ಸಾಂಗವಾಗಿ ನಡೆಯಲಿದೆ” ಎಂದಿದ್ದಾರೆ.
“ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ?.. ಸರ್ವಾಧಿಕಾರದಲ್ಲಿದ್ದೇವಾ?”
ಎರಡನೇ ಬಾರಿಗೆ ಸಭೆ ನಡೆಸದಂತೆ ನೋಟಿಸ್ ಬಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಈ ಹಿಂದೆ ಇದೇ ವಿಷಯಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯನ್ನೇ ಧರ್ಮಸ್ಥಳದ ವಕೀಲ ಮತ್ತು ಪೊಲೀಸರ ಒತ್ತಡದಿಂದಾಗಿ ರದ್ದುಪಡಿಸಲಾಗಿತ್ತು. ಈಗ ಆಂತರಿಕ ಸಮಾಲೋಚನಾ ಸಭೆಯನ್ನೂ ತಡೆಯಲು ನೋಡುತ್ತಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೇ ಅಥವಾ ಸರ್ವಾಧಿಕಾರದಲ್ಲಿದ್ದೇವೆಯೇ?” ಎಂದು ಜನರು ಪ್ರಶ್ನಿಸಿದ್ದಾರೆ.
ಕಸಾಪದಲ್ಲಿ ಏರ್ಪಡಿಸಿದ್ದ ಸಭೆಗೆ ಕೊನೆ ಕ್ಷಣದಲ್ಲಿ ಅನುಮತಿ ರದ್ದು
ಮಾರ್ಚ್ 9ರಂದು ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸೌಜನ್ಯ ಪರ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ಅದಕ್ಕೆ ಅಂತಿಮ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಕಾರಣ, ಸಭೆ ಮುಂದೂಡಿಕೆಯಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣವನ್ನು ಬಾಡಿಗೆ ಪಾವತಿಸಿ ಕಾರ್ಯಕ್ರಮಕ್ಕೆ ನಿಗದಿಗೊಳಿಸಲಾಗಿತ್ತು. ಕಾರ್ಯಕ್ರಮದ ಬಗ್ಗೆ ಪರಿಷತ್ ಜೊತೆಗೆ ಚರ್ಚೆ ನಡೆಸಲಾಗಿತ್ತು. ಆದರೆ, ಸಾಹಿತ್ಯ ಪರಿಷತ್‌ಗೆ ಬಂದ ಲೀಗಲ್ ನೋಟಿಸ್ ಮತ್ತು ಪೊಲೀಸ್ ನೋಟಿಸ್ ಆಧಾರದಲ್ಲಿ ಸಭಾಂಗಣವನ್ನು ನೀಡಲಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾರ್ಚ್ 8ರ ರಾತ್ರಿ 10.30ಕ್ಕೆ ಸಂಘಟಕರಲ್ಲೋರ್ವರಾದ ಬೈರಪ್ಪ ಹರೀಶ್ ಕುಮಾರ್ ಅವರಿಗೆ ಲಿಖಿತ ನೋಟಿಸ್ ಕಳಿಸಿದ್ದಾರೆ ಈ ಕಾರಣಕ್ಕೆ ಸಭೆ ಮುಂದೂಡಲಾಗಿದೆ ಎನ್ನಲಾಗಿತ್ತು.
ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಲೀಗಲ್ ನೋಟಿಸ್
ಧರ್ಮಸ್ಥಳದ ವಕೀಲರು ಲೀಗಲ್ ನೋಟಿಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕಸಾಪ ಸಭಾಂಗಣದಲ್ಲಿ ಸೌಜನ್ಯ ಪರ ಸಭೆ ನಡೆಸಲು ಅನುಮತಿ ನಿರಾಕರಿಸಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಸೌಜನ್ಯ ಪರ ಹೋರಾಟಗಾರರ ಪರವಾಗಿ ಎಸ್.ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ.
ಬಾಲನ್ ಅವರು ನೀಡಿರುವ ಲೀಗಲ್ ನೋಟಿಸ್‌ನಲ್ಲಿ ”ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ನೀಡಲಾದ ಲೀಗಲ್ ನೋಟಿಸ್‌ಗೆ ವಿಳಾಸ, ಲೆಟರ್ ಹೆಡ್, ಸಂಪರ್ಕ ಸೇರಿದಂತೆ ಯಾವುದೇ ತಲೆ-ಬಾಲ ಇಲ್ಲವಾಗಿದ್ದು, ಸೌಜನ್ಯ ಪರ ಹೋರಾಟಗಾರರನ್ನು ದಾರಿ ತಪ್ಪಿಸಲು ಹೈಕೋರ್ಟ್ ಆದೇಶವನ್ನು ತಿರುಚಿ ವಂಚನೆ ಮಾಡಲಾಗಿದೆ” ಎಂದು ವಿವರಿಸಲಾಗಿದೆ.
“ತಲೆ ಮತ್ತು ಬಾಲವಿಲ್ಲದ ಲೀಗಲ್ ನೋಟಿಸ್ ಆಧಾರದ ಮೇಲೆ ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಡಲಾಗಿದ್ದ ಸಭಾಂಗಣದ ಬುಕಿಂಗ್ ಅನ್ನು ಹೇಗೆ ರದ್ದುಗೊಳಿಸಿದ್ದೀರಿ” ಎಂದು ಸೌಜನ್ಯ ಪರ ಹೋರಾಟಗಾರರ ಪರ ವಕೀಲ ಬಾಲನ್ ಪ್ರಶ್ನಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್


