ಕಲಬುರಗಿ ನಗರದ ವಿಶ್ವರಾಧ್ಯ ದೇವಸ್ಥಾನದ ಬಳಿ ಮಂಗಳಮುಖಿಯೊಬ್ಬರನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶೀಲಾ ಅಲಿಯಾಸ್ ವಿಜಯಕುಮಾರ್ (38), ಭವಾನಿ ಅಲಿಯಾಸ್ ಬಸವರಾಜ್ (24) ಮತ್ತು ಅಂಕೀತಾ ಅಲಿಯಾಸ್ ಅಂಕುಶ್ ಬಂಧಿತ ಮಂಗಳಮುಖಿಯರು ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿ ಅಂಕಿತಾ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಘಟನೆಗೆ ಸಂಬಂದಿಸಿದಂತೆ 03 ಜನ ಆರೋಪಿತ ಮಂಗಳಮುಖಿಯರನ್ನು ಬಂದಿಸಲಾಗಿರುತ್ತದೆ. @DgpKarnataka @Kalaburgivarthe @KarnatakaCops @SharanappaDr pic.twitter.com/swZujqKEgb
— Kalaburagi City Police (@KlbCityPolice) March 18, 2025
ಬಂಧಿತ ಮಂಗಳಮುಖಿಯರು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅಂಕಿತಾ ಚವ್ಹಾಣ ಎಂಬ ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಆರೋಪಿಗಳು ಅಂಕಿತಾ ಚವ್ಹಾಣ ಅವರಿಗೆ ಹಲ್ಲೆ ಮಾಡಿದ್ದರು. ಅಲ್ಲಿಂದ ಆಟೋದಲ್ಲಿ ಆಳಂದ ಚೆಕ್‌ಪೋಸ್ಟ್ ಬಳಿಯ ವಿಶ್ವರಾಧ್ಯ ದೇವಸ್ಥಾನದ ಕಾಂಪೌಂಡ್ ಒಳಗೆ ಕರೆದೊಯ್ದು ಮತ್ತೆ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಕತ್ತು ಹಿಚುಕಿದ್ದಾರೆ. ಕಾಲಿನಿಂದ ಮೈಮೇಲೆ ಒದ್ದು, ಕೂದಲು ಹಿಡಿದು ಎಳೆದಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.


