ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ವಿಜಯನಗರ ಜಿಲ್ಲೆ ಮೂಲದ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಮಲ್ಪೆ ಪೊಲೀಸರು, ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಕೆ ಅರುಣ್, “ವಿಜಯನಗರ ಜಿಲ್ಲೆಯಿಂದ ಬಂದ ಮಹಿಳೆ ಮೀನು ಕದ್ದಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮಹಿಳೆ ಲಕ್ಷ್ಮಿಬಾಯಿ ಮೊದಲು ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳೀಯರನ್ನು ಸೇರಿಸಿ ಮರಕ್ಕೆ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿ ಕೆಲವರು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧ ಹಲ್ಲೆಗೊಳಗಾದ ಮಹಿಳೆ ಕಡೆಯವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ವಿರುದ್ದ ಬಿಎನ್‌ಎಸ್ 74, 115, 351,352, ಮತ್ತು ದಲಿತ ದೌರ್ಜನ್ಯ (ತಡೆ) ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಲಕ್ಷ್ಮಿಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬರನ್ನು ಬಂಧಿಸಿದ್ದಾರೆ. ವಿಡಿಯೋ ಪರಿಶೀಲಿಸಿ, ಪ್ರಕರಣದಲ್ಲಿ ಇನ್ನು ಯಾರದ್ದಾದರು ಪಾತ್ರ ಇದ್ದರೆ ಆದಷ್ಟು ಬೇಗ ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ | ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಎಚ್ಚರಿಕೆ


