ಕೇಂದ್ರ ಕಾರ್ಮಿಕ ಸಂಘಗಳು, ಸ್ವತಂತ್ರ ವಲಯ ಒಕ್ಕೂಟಗಳು ಮತ್ತು ಸಂಘಗಳ ವೇದಿಕೆಯು ಮೇ 20 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಉದ್ದೇಶಿತ ಮುಷ್ಕರಕ್ಕೂ ಮೊದಲು ದೇಶಾದ್ಯಂತ ಎರಡು ತಿಂಗಳ ಕಾಲದ ಪ್ರಚಾರ ಅಭಿಯಾನವನ್ನು ನಡೆಸಲು ದೇಶದ ಕಾರ್ಮಿಕರಿಗೆ ಕರೆ ನೀಡಿದೆ. ಮಾರ್ಚ್ 18ರ ಗುರುವಾರ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಮಿಕರ ರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಕಾರ್ಮಿಕ ಹೋರಾಟ
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು, ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್‍ಸಿ)ವನ್ನು ಆಯೋಜಿಸಬೇಕು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ದೆಹಲಿಯ ಸಮಾವೇಶ ಆಗ್ರಹಿಸಿದೆ. ದೇಶದ ಹೆಚ್ಚಿನ ಎಲ್ಲಾ ವಲಯದ ಕಾರ್ಮಿಕ ಮುಖಂಡರು ಮತ್ತು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಕಾರ್ಮಿಕ ಹೋರಾಟ
ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧದ ಪ್ರತಿರೋಧದಲ್ಲಿ ಒಗ್ಗಟ್ಟಿನ ಪ್ರದರ್ಶನಕ್ಕಾಗಿ ನವದೆಹಲಿಯ ಪ್ಯಾರೆಲಾಲ್ ಭವನದಲ್ಲಿ ಎಲ್ಲಾ ರಾಜ್ಯಗಳ ಎಲ್ಲಾ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮತ್ತು ವಲಯ ಒಕ್ಕೂಟಗಳ ಪ್ರತಿನಿಧಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದರು.
ಕಾರ್ಮಿಕ ಸಂಘಟನೆಗಳು ಸತತವಾಗಿ ಎತ್ತುತ್ತಿರುವ ಬೇಡಿಕೆಗಳಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಉದ್ದೇಶಪೂರ್ವಕವಾಗಿ ಕಿವಿಗೊಡದಿರುವ ಕೇಂದ್ರ ಸರಕಾರದ ನಡೆಗೆ ಖಂಡಿಸಿದ ಕಾರ್ಮಿಕ ಸಂಘಟನೆಗಳು, ಸರಕಾರದ ಇಂತಹ ನೀತಿಗಳ ವಿರುದ್ಧ ಸಾಮೂಹಿಕವಾಗಿ ತಿರಸ್ಕಾರ ವ್ಯಕ್ತಪಡಿಸಿದವು. ಜೊತೆಗೆ ಮೇ 20, 2025 ರಂದು ಒಂದು ದಿನದ ರಾಷ್ಟ್ರೀಯ ಮುಷ್ಕರಕ್ಕಾಗಿ ಕರೆ ನೀಡಲಾಗಿದೆ ಎಂದು ಸಭೆಯ ನಂತರ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನೀಡಿದ ಹೇಳಿಕೆಯಲ್ಲಿ ತಿಳಿಸಿವೆ.
ಸರ್ಕಾರದ ಸವಾಲನ್ನು ಸ್ವೀಕರಿಸಲು ದುಡಿಯುವ ಜನರು ಸಿದ್ಧರಾಗಬೇಕು ಎಂದು ಕರೆ ನೀಡಿರುವ ಸಮಾವೇಶವು, ಮೇ 20 ಕಾರ್ಮಿಕರು ಮತ್ತು ರೈತರ ರಾಷ್ಟ್ರವ್ಯಾಪಿ ನಿರ್ಣಾಯಕ ಹೋರಾಟಗಳ ಸರಣಿಗೆ ಚಾಲನೆ ನೀಡುವ ವೇದಿಕೆಯಾಗಲಿದೆ, ಶೋಷಣೆ, ಆಳವಾಗುತ್ತಿರುವ ಆದಾಯ ಅಸಮಾನತೆ, ಸಾಂವಿಧಾನಿಕ ಹಕ್ಕುಗಳ ನಿರಾಕರಣೆ ಮತ್ತು ಭಾರತದ ಜನರ ಮೇಲೆ ಆಗುತ್ತಿರುವ ಒಟ್ಟಾರೆ ಅನ್ಯಾಯವನ್ನು ಹೊಸ ಶಕ್ತಿಯಿಂದ ಎದುರಿಸಲಾಗುವುದು ಎಂದು ಸಾರಿದೆ.
ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವ ತನ್ನ ಬಹುದಿನಗಳ ಆಗ್ರಹವನ್ನು ಪುನರುಚ್ಚರಿಸುವುದರ ಜೊತೆಗೆ, ತನ್ನ 17 ಅಂಶಗಳ ಆಗ್ರಹಗಳ ಪಟ್ಟಿಯನ್ನು ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಘೋಷಣೆಯು ಪುನರುಚ್ಚರಿಸಿದೆ. ಅಲ್ಲದೆ ನವ ಉದಾರವಾದದ ವಿನಾಶಕಾರಿ ನೀತಿಗಳಿಗೆ ಪರ್ಯಾಯವನ್ನು ಸಹ ಸೂಚಿಸಿದ ಸಮಾವೇಶವು ಧರ್ಮ, ಪ್ರದೇಶ, ಜಾತಿ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಕಾರ್ಮಿಕರನ್ನು ವಿಭಜಿಸುವ ಎನ್‍ಡಿಎ ಸರ್ಕಾರದ ಎಲ್ಲಾ ಕೆಟ್ಟ ಪ್ರಯತ್ನಗಳನ್ನು ವಿಫಲಗೊಳಿಸುವುದಾಗಿಯೂ ಸಾರಿದೆ.


