ಚೆನ್ನೈನಲ್ಲಿ ಶನಿವಾರ (ಮಾ.22) ನಡೆದ ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡನೆಗಾಗಿ ‘ಜಂಟಿ ಕ್ರಿಯಾ ಸಮಿತಿ’ (ಜೆಎಸಿ) ಸಭೆಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, “ರಾಷ್ಟ್ರದ ಗಮನ ಸೆಳೆಯುವಷ್ಟು ರಾಜಕೀಯ ಶಕ್ತಿ ಇಲ್ಲದ ಕಾರಣ ನ್ಯಾಯಕ್ಕಾಗಿ ಎತ್ತಿರುವ ರಾಜ್ಯದ ಧ್ವನಿಯನ್ನು ನಿರ್ಲಕ್ಷಿಸಲಾಗಿದೆ. ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯ ಕಡಿಮೆಯಾಗುವುದರಿಂದ ನಮ್ಮ ರಾಜಕೀಯ ಶಕ್ತಿ ಕಡಿಮೆಯಾಗುತ್ತದೆ” ಎಂದು ಹೇಳಿದರು.
ಮಣಿಪುರದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಹಿಂಸಾಚಾರ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಮೌನ ವಹಿಸಿದೆ. ರಾಜಕೀಯ ಬಲ ಇಲ್ಲದ ರಾಜ್ಯಗಳಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಇದು ಉದಾಹರಣೆ ಎಂದರು.
“ನಮ್ಮ ಹೋರಾಟ ಕ್ಷೇತ್ರ ಪುನರ್‌ವಿಂಗಡನೆಯ ವಿರುದ್ದವಲ್ಲ, ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡನೆಗಾಗಿ. ಇದು ಸೀಟುಗಳ ಸಂಖ್ಯೆಯ ವಿಷಯವಲ್ಲ. ಬದಲಾಗಿ, ಇದು ನಮ್ಮ ಅಧಿಕಾರ, ನಮ್ಮ ಹಕ್ಕುಗಳು ಮತ್ತು ನಮ್ಮ ಭವಿಷ್ಯದ ವಿಷಯ” ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು.
ರಾಜ್ಯಗಳ ಸ್ವಾಯತ್ತತೆಯನ್ನು ಖಚಿತಪಡಿಸಿಕೊಂಡರೆ ಮಾತ್ರ ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಮೇಲುಗೈ ಸಾಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
“ಈ ಹಿಂದೆ ಒಕ್ಕೂಟ ವ್ಯವಸ್ಥೆಗೆ ಬೆದರಿಕೆಗಳು ಬಂದಾಗಲೆಲ್ಲಾ, ವಿವಿಧ ಪ್ರಜಾಪ್ರಭುತ್ವ ಶಕ್ತಿಗಳು ಅವುಗಳನ್ನು ತಡೆಯುತ್ತಿದ್ದವು. ಈಗ, ನಾವು ಅದೇ ರೀತಿಯ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ” ಎಂದರು.
In an unprecedented show of unity, Chief Ministers, Deputy Chief Ministers and leaders of various parties across India came together at Chennai for a historic #JointActionCommittee meeting. This formidable gathering reflects our collective resolve to uphold India’s federalism in… pic.twitter.com/dz6rO0Xjpq
— M.K.Stalin (@mkstalin) March 22, 2025
ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡನೆಯಿಂದಾಗುವ ಹಾನಿಗಳನ್ನು ಪಟ್ಟಿ ಮಾಡಿದ ಸ್ಟಾಲಿನ್ “ಪ್ರಾತಿನಿಧ್ಯ ಕಡಿಮೆಯಾಗುವುದರಿಂದ ರಾಜ್ಯಗಳು ಕೇಂದ್ರದಿಂದ ತಮ್ಮ ಹಣವನ್ನು ಪಡೆಯಲು ಹೆಣಗಾಡುತ್ತವೆ. ಕೇಂದ್ರ ಅನಗತ್ಯ ಕಾನೂನುಗಳನ್ನು ಜಾರಿಗೆ ತರುತ್ತದೆ. ನಮ್ಮ ಜನರ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ನಮ್ಮನ್ನು ಅರ್ಥಮಾಡಿಕೊಳ್ಳದವರು ತೆಗೆದುಕೊಳ್ಳುತ್ತಾರೆ. ಮಹಿಳಾ ಸಬಲೀಕರಣವು ಹಿನ್ನಡೆ ಅನುಭವಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ರೈತರು ತಮ್ಮ ಬೆಂಬಲವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಸಂಸ್ಕೃತಿ, ಗುರುತು, ಪ್ರಗತಿಗೆ ಧಕ್ಕೆಯಾಗುತ್ತದೆ. ಸಾಮಾಜಿಕ ನ್ಯಾಯವು ದುರ್ಬಲಗೊಳ್ಳುತ್ತದೆ. ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ವಿವರಿಸಿದರು. “ನಮ್ಮ ದೇಶದಲ್ಲಿಯೇ ನಾವು ರಾಜಕೀಯವಾಗಿ ದುರ್ಬಲರಾಗುತ್ತೇವೆ” ಎಂದರು.
ಭಾರತದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇಂದಿನ ದಿನ ಮಹತ್ವದ ದಿನವಾಗಿ ಇತಿಹಾಸದ ಪುಟ ಸೇರಲಿದೆ ಎಂದು ಸಿಎಂ ಸ್ಟಾಲಿನ್ ಪುನರುಚ್ಚರಿಸಿದರು.
ಜಾತಿ ಆಧಾರಿತ ಜನಗಣತಿ ಮತ್ತು ಆ ಆಧಾರದ ಮೇಲೆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದಾಗ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡನೆ ನಡೆದರೆ ದಕ್ಷಿಣ ರಾಜ್ಯಗಳು ಸುಮಾರು 100 ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ 2023ರಲ್ಲಿ ತೆಲಂಗಾಣದಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ‘ದಕ್ಷಿಣದ ರಾಜ್ಯಗಳು ಅದನ್ನು ಸ್ವೀಕರಿಸುತ್ತವೆಯೇ?” ಸ್ಟಾಲಿನ್ ಪ್ರಶ್ನಿಸಿದರು.
ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಮೋದಿ ಒಪ್ಪಿಕೊಂಡಿದ್ದಾರೆ. ಆದರೂ, ಕ್ಷೇತ್ರ ಪುನರ್‌ವಿಂಗಡನೆಗೆ ಒತ್ತಾಯಿಸುತ್ತಲೇ ಇದ್ದಾರೆ ಎಂದು ಹೇಳಿದರು. ಬಿಜೆಪಿ ಯಾವಾಗಲೂ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಈಗಲೂ ತಮ್ಮ ಉದ್ದೇಶಗಳನ್ನು ಪೂರೈಸಲು ಕ್ಷೇತ್ರ ಪುನರ್‌ವಿಂಗಡನೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬೆದರಿಕೆಯನ್ನು ಅರ್ಥಮಾಡಿಕೊಂಡು, ತಮಿಳುನಾಡು ದೊಡ್ಡ ಒಗ್ಗಟ್ಟಿನಿಂದ ಅದರ ವಿರುದ್ಧ ನಿಂತಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಇದೇ ರೀತಿಯ ಒಗ್ಗಟ್ಟಿಗಾಗಿ ಜೆಎಸಿ ಸಭೆಯಲ್ಲಿ ನಾಯಕರಿಗೆ ನಾನು ಮನವಿ ಮಾಡಿತ್ತಿದ್ದೇನೆ” ಎಂದರು.
ಕ್ಷೇತ್ರ ಪುನರ್‌ವಿಂಗಡನೆಯ ರಾಜಕೀಯ ವಿರೋಧಗಳನ್ನು ಕಾನೂನು ವೇದಿಕೆಗೆ ವಿಸ್ತರಿಸಲು ನಾಯಕರ ಸಲಹೆಗಳನ್ನು ಸ್ಟಾಲಿನ್ ಆಹ್ವಾನಿಸಿದ್ದು, ರಾಜಕೀಯ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲು ‘ತಜ್ಞರ ಸಮಿತಿ’ಯನ್ನು ಪ್ರಸ್ತಾಪಿಸಿದರು.
“ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡನೆ ಅನುಮತಿಸಬಾರದು ಎಂದು ನಾವೆಲ್ಲರೂ ದೃಢಸಂಕಲ್ಪ ಮಾಡಬೇಕು. ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡ ರಾಜ್ಯಗಳನ್ನು ಶಿಕ್ಷಿಸಲು ನಾವು ಬಿಡಬಾರದು” ಎಂದು ಹೇಳಿದರು. ನ್ಯಾಯಯುತವಾದ ಕ್ಷೇತ್ರ ಪುನರ್‌ವಿಂಗಡನೆ ಸಾಧಿಸುವವರೆಗೆ ಹೋರಾಟವನ್ನು ಮುಂದುವರೆಸುವುದಾಗಿ ಸ್ಟಾಲಿನ್ ಒತ್ತಿ ಹೇಳಿದರು.
“ಯಾವುದೇ ಬೆಲೆ ತೆತ್ತಾದರೂ, ಈ ಸಭೆಯಲ್ಲಿ ಉಪಸ್ಥಿತರಿರುವ ರಾಜ್ಯಗಳು ನಮ್ಮ ಸಂಸದೀಯ ಪ್ರಾತಿನಿಧ್ಯ ಕಡಿಮೆಯಾಗಲು ಬಿಡಬಾರದು” ಎಂದು ಅವರು ಮನವಿ ಮಾಡಿದರು.
ಕ್ಷೇತ್ರ ಪುನರ್‌ವಿಂಗಡನೆಯಿಂದ ಪರಿಣಾಮ ಬೀರುವ ಸಾಧ್ಯತೆ ಇರುವ ರಾಜ್ಯಗಳ ರಾಜಕೀಯ ನಾಯಕರಾದ ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೆಎಸಿ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಚೋದನಕಾರಿ & ನಿಂದನಾತ್ಮಕ ಹೇಳಿಕೆ | ಯತಿ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲು


