“ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯ ಮೇಲಿನ ಪೊಲೀಸ್ ದಬ್ಬಾಳಿಕೆಯ ವಿರುದ್ಧ ಮಾರ್ಚ್ 28 ರಂದು ಭಾರತದಾದ್ಯಂತ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಾಷ್ಟ್ರೀಯ ಸಮನ್ವಯ ಸಮಿತಿಯು ಭಾರತದಾದ್ಯಂತ ರೈತರಿಗೆ ಕರೆ ನೀಡಿದೆ” ಎಂದು ರೈತ ಸಂಘ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಕಿಸಾನ್ ಮಜ್ದೂರ್ ಮೋರ್ಚಾ, ಎಸ್‌ಕೆಎಂ ಸೇರಿದಂತೆ ಎಲ್ಲ ರೈತ ಸಂಘಟನೆಗಳು ಮತ್ತು ವೇದಿಕೆಗಳು ಸಮಸ್ಯೆ ಆಧಾರಿತ ಏಕತೆಗೆ ಸೇರಬೇಕು. ದಬ್ಬಾಳಿಕೆಯ ವಿರುದ್ಧ ಒಗ್ಗೂಡಲು ಮುಂದೆ ಬರಬೇಕು ಎಂದು ಎಸ್‌ಕೆಎಂ ಒತ್ತಾಯಿಸಿದೆ.
“ಭಗವಂತ್ ಸಿಂಗ್ ಮಾನ್ ನೇತೃತ್ವದ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ, ಪಂಜಾಬ್ ಪೊಲೀಸರು ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ಸೇರಿದಂತೆ 350 ರೈತ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಖಾನೌರಿ ಮತ್ತು ಶಂಬು ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರ ಡೇರೆಗಳು ಮತ್ತು ವೇದಿಕೆಗಳನ್ನು ಪೊಲೀಸರು ಬುಲ್ಡೋಜರ್‌ನಿಂದ ಕೆಡವಿದ್ದು, ಟ್ರ್ಯಾಕ್ಟರ್ ಟ್ರೇಲರ್‌ಗಳು, ಟ್ರಾಲಿಗಳು ಮತ್ತು ಇತರ ಉಪಕರಣಗಳನ್ನು ಬಲವಂತವಾಗಿ ತೆರವುಗೊಳಿಸಿದರು” ಎಂದು ಹೇಳಿಕೆ ತಿಳಿಸಿದೆ.
ಈ ಮಧ್ಯೆ, ಬುಧವಾರ ಹಲವಾರು ರೈತ ನಾಯಕರೊಂದಿಗೆ ಬಂಧನಕ್ಕೊಳಗಾದ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ವಾಲ್ ಅವರನ್ನು ಭಾನುವಾರ ಜಲಂಧರ್‌ನಿಂದ ಪಟಿಯಾಲಕ್ಕೆ ಸ್ಥಳಾಂತರಿಸಲಾಯಿತು.
ಕಳೆದ ವರ್ಷ ನವೆಂಬರ್ 26 ರಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ದಲ್ಲೆವಾಲ್ ಅವರನ್ನು ಬುಧವಾರ ಪಂಜಾಬ್ ಪೊಲೀಸರು ಹಲವಾರು ರೈತರನ್ನು ಬಂಧಿಸಿದ ನಂತರ ಜಲಂಧರ್‌ನ ಪಂಜಾಬ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಯಿತು. ಬಳಿಕ, ಅವರನ್ನು ಜಲಂಧರ್‌ನ ಪಿಡಬ್ಲ್ಯೂಡಿ ವಿಶ್ರಾಂತಿ ಗೃಹಕ್ಕೆ ಕರೆದೊಯ್ಯಲಾಯಿತು.
ಭಾನುವಾರ, ರೈತ ನಾಯಕನನ್ನು ಪಟಿಯಾಲದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ.
ಚಂಡೀಗಢದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕೇಂದ್ರ ನಿಯೋಗದೊಂದಿಗೆ ಸಭೆಯ ನಂತರ ಹಿಂತಿರುಗುತ್ತಿದ್ದ ಪಂಧೇರ್, ದಲ್ಲೆವಾಲ್ ಮತ್ತು ಹಲವಾರು ರೈತ ನಾಯಕರನ್ನು ಬುಧವಾರ ಮೊಹಾಲಿಯಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು.
ಸಭೆಯಲ್ಲಿ ರೈತರ ವಿವಿಧ ಬೇಡಿಕೆಗಳ ಬಗ್ಗೆ, ವಿಶೇಷವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನಿನ ಬಗ್ಗೆ ಚರ್ಚಿಸಲಾಯಿತು. ಸಭೆಯ ನಂತರ ನಿರ್ಗಮಿಸಿದ ರೈತರು ಮೊಹಾಲಿಗೆ ಪ್ರವೇಶಿಸಿದಾಗ, ಅವರನ್ನು ತಡೆಯಲಿ ಭಾರೀ ಬ್ಯಾರಿಕೇಡ್ ಹಾಕಲಾಯಿತು; ಅವರಸ್ಥಳದಲ್ಲೇ ಕೆಲವು ನಾಯಕರನ್ನು ಬಂಧಿಸಲಾಯಿತು.
ಶಂಭು ಮತ್ತು ಖಾನೌರಿಯಲ್ಲಿ ನಡೆದ ಪ್ರತಿಭಟನೆಗಳ ನೇತೃತ್ವವನ್ನು ಎಸ್‌ಕೆಎಂ ಮತ್ತು ಕೆಎಂಎಂ ಸಂಘಟನೆಗಳು ವಹಿಸಿವೆ.
ಪಂಜಾಬ್ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ನಡೆಸಿದ ದಬ್ಬಾಳಿಕೆಯ ನಡುವೆ, ಎಸ್‌ಕೆಎಂ ಮತ್ತು ಭಾರತಿ ಕಿಸಾನ್ ಯೂನಿಯನ್ ಶುಕ್ರವಾರ ಪಂಜಾಬ್ ಸರ್ಕಾರ ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದವು.
ರೈತರ ವಿರುದ್ಧ ಪೊಲೀಸ್ ಕ್ರಮಕ್ಕಾಗಿ ಸರ್ಕಾರವನ್ನು ಟೀಕಿಸಿದ ರೈತ ಸಂಘಟನೆಗಳು, ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಾ ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದವು.
ಭಾನುವಾರ ಎಸ್‌ಕೆಎಂ ಹೇಳಿಕೆಯ ಪ್ರಕಾರ, ಮಾರ್ಚ್ 28 ರಂದು ಪಂಜಾಬ್‌ನಾದ್ಯಂತ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳ ಮುಂದೆ ‘ಪೊಲೀಸ್ ದಬ್ಬಾಳಿಕೆ’ಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ.


