ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಭಾನುವಾರ (ಮಾ.23) ವರದಿಯಾಗಿತ್ತು. ಆದರೆ, ತಾನು ರಾಜೀನಾಮೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿದ ಹೊರಟ್ಟಿ, “ಸಹಿ ಮಾಡಿದ ಪತ್ರ ಇನ್ನೂ ಲಾಕರ್‌ನಲ್ಲಿದೆ. ವೈರಲ್ ಆಗಿರುವುದು ಸಹಿ ಮಾಡದ ಪತ್ರ. ನನ್ನ ಪಿಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ದಿನಾಂಕ 21 ಎಂದು ಹಾಕಿದ್ದೆ. ಆ ಪತ್ರ ಬಹಳ ಜನರ ಹತ್ತಿರ ಹೋಗಿದೆ. ಸಚಿವರು, ಪರಿಷತ್ ಸದಸ್ಯರು ಕರೆ ಮಾಡಿ ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಕೆಲವು ಸಲ ಹಿತೈಷಿಗಳ ಮಾತು ಕೇಳಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ರಾಜೀನಾಮೆ ಕುರಿತು ವಿಚಾರ ಮಾಡುತ್ತೇನೆ. ಮಾನಸಿಕವಾಗಿ ಬೇಸರವಾಗಿದ್ದು ನಿಜ. ಹೀಗಾಗಿ ನಾನು ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದೆ. ಕೆಲವರ ನಡವಳಿಕೆ ನನ್ನ ಮನಸ್ಸಿಗೆ ಸಮಾಧಾನವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಅಸಮಾಧಾನವಾಗಿದೆ. ರಾಜ್ಯದ ಎಲ್ಲಾ ಕಡೆಯಿಂದ ಕರೆಗಳು ಬಂದಿವೆ. ಮಾನಸಿಕ ನೆಮ್ಮದಿ ಹಾಳಾಗಿದೆ. ನಾಳೆ ಒಂದು ದಿನ ಕುಳಿತು ವಿಚಾರ ಮಾಡುತ್ತೇನೆ. ಆತ್ಮೀಯರ ಮಾತು ಕೇಳಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
“ನಾನು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಸಾಕಾಗಿದೆ, ಇನ್ನೂ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಇದೆ. ಜನರಿಗೆ ಮೋಸ ಮಾಡೋ ಟ್ರೆಂಡ್ ಬಂದಿದೆ. ಇದೀಗ ವಿಧಾನಮಂಡಲಕ್ಕೆ ಬಂದಿದೆ. ರಾಜಕಾರಣ ಬಹಳ ಕಲುಷಿತ ಆಗಿದೆ, ಕಾಲ ಕೆಟ್ಟಿದೆ. ಸದನದ ಗೌರವ ಹೋಗಿ ಬಹಳ ದಿನ ಆಗಿದೆ” ಎಂದಿದ್ದಾರೆ.
“ಚುನಾವಣೆಯಲ್ಲಿ ಸೋಲಿಸೋಕೆ ಆಗದಿದ್ರೆ ಈ ತರ ಟಾರ್ಗೆಟ್ ಮಾಡೋದು ಸರಿಯಲ್ಲ. ಇದೆಲ್ಲ ದುರ್ದೈವ. ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತರಿಸಿದೆ. ಈ ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ. ಸದನದಲ್ಲಿ ನಡೆದ ಬೆಳವಣಿಗೆ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


