ಪತ್ತನಂತಿಟ್ಟ (ಕೇರಳ): ಪುರುಷ ಭಕ್ತರು ದೇವಾಲಯ ಪ್ರವೇಶಿಸುವ ಮುನ್ನ ಶರ್ಟ್ ಅಥವಾ ಮೇಲಂಗಿ ಕಳಚಬೇಕು ಎಂಬ ದೀರ್ಘಕಾಲದ ಪದ್ಧತಿಯನ್ನು ವಿರೋಧಿಸಿ, ಭಾನುವಾರ (ಮಾ.23) ಇಲ್ಲಿನ ಕೊಯಿಕ್ಕಲ್ ಶ್ರೀ ಧರ್ಮಶಾಸ್ತ ದೇವಸ್ಥಾನಕ್ಕೆ ಗುಂಪೊಂದು ಶರ್ಟ್ ಕಳಚದೆ ಪ್ರವೇಶಿಸಿ ಪ್ರತಿಭಟಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ವಹಿಸುವ ಪೆರುನಾಡುವಿನ ದೇವಾಲಯದ ಮುಂದೆ ಎಸ್‌ಎನ್‌ಡಿಪಿ ಸಂಯುಕ್ತ ಸಮರ ಸಮಿತಿಯ ಸದಸ್ಯರು (ಪ್ರತಿಭಟನಾಕಾರರು) ತಮ್ಮ ಶರ್ಟ್‌ಗಳನ್ನು ಕಳಚದೆ ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದ ವಿಡಿಯೋಗಳು ವೈರಲ್ ಆಗಿದೆ.
ಪೊಲೀಸರು ಮತ್ತು ದೇವಾಲಯದ ಆಡಳಿತ ಮಂಡಳಿಯವರು ಆಕ್ಷೇಪ ವ್ಯಕ್ತಪಡಿಸದ ಕಾರಣ ಪ್ರತಿಭಟನೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಕೊನೆಗೊಂಡಿದೆ.
ಪುರುಷ ಭಕ್ತರು ದೇವಸ್ಥಾನ ಪ್ರವೇಶಿಸುವ ಮುನ್ನ ತಮ್ಮ ಮೇಲಂಗಿ ಕಳಚುವ ಕಡ್ಡಾಯ ಪದ್ಧತಿಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
“ಪ್ರತಿಭಟನೆ ಶಾಂತಿಯುತವಾಗಿತ್ತು. ಭಕ್ತರು ಸಾಂಪ್ರದಾಯಿಕವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರೂ, ಯಾರಾದರೂ ತಮ್ಮ ಶರ್ಟ್ ಕಳಚದೆ ದೇವಾಲಯ ಪ್ರವೇಶಿಸಿದರೆ ಅದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲಿ ಮೇಲಂಗಿ ಕಳಚುವ ಈ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಸ್ವಾಮಿ ಸಚ್ಚಿದಾನಂದ ಕರೆ ನೀಡಿದ ತಿಂಗಳುಗಳ ನಂತರ ಈ ಪ್ರತಿಭಟನೆ ನಡೆದಿದೆ.
ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಪ್ರಸಿದ್ಧ ಶಿವಗಿರಿ ಮಠದ ಮುಖ್ಯಸ್ಥರಾದ ಸ್ವಾಮಿ ಸಚ್ಚಿದಾನಂದ ಅವರು ಈ ಪದ್ಧತಿಯನ್ನು ಸಾಮಾಜಿಕ ಅನಿಷ್ಟ ಎಂದು ಬಣ್ಣಿಸಿದ್ದರು ಮತ್ತು ಕಳೆದ ವರ್ಷ ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.
ಪುರುಷರು ಜನಿವಾರ ಧರಿಸಿದ್ದಾರೆಯೇ ಎಂದು ಪರಿಶೀಲಿಸಲು ಮೇಲಂಗಿ ಕಳಚುವ ಸಂಪ್ರದಾಯ ಪರಿಚಯಿಸಲಾಯಿತು ಎಂದು ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ.
ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್‌ಎನ್‌ಡಿಪಿ) ಸಂಖ್ಯಾತ್ಮಕವಾಗಿ ಪ್ರಬಲವಾದ ಈಜವ (ಈಡಿಗ-ಬಿಲ್ಲವ) ಸಮುದಾಯವನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಯಾಗಿದೆ.
ಸಂಸತ್ತನ್ನು ಮುಂದೂಡಲು ಬಿಜೆಪಿ ‘ಸಂಪೂರ್ಣ ನಕಲಿ’ ವಿಷಯವನ್ನು ಮಂಡಿಸಿದೆ: ಕಾಂಗ್ರೆಸ್


