ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉಲ್ಲೆಖಿಸಿ “ದೇಶದ್ರೋಹಿ” ಎಂದು ಕರೆದಿರುವ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಸಿದ್ದು, ಅಧಿಕಾರಿಗಳು ಕುನಾಲ್ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಮ್ರಾ ಅವರ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಶಿಂಧೆ ಅವರನ್ನು ಅವಮಾನಿಸಿದ್ದಕ್ಕಾಗಿ ಕುನಾಲ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಶಿಂಧೆ ವಿರುದ್ಧ ಹೇಳಿಕೆ
“ಕುನಾಲ್ ಕಮ್ರಾ ಸಂವಿಧಾನ ಪುಸ್ತಕವನ್ನು ತೋರಿಸಿ ತನಗೆ ಮಾತನಾಡುವ ಹಕ್ಕಿದೆ ಎಂದು ಹೇಳಿದ್ದಾರೆ. ಆದರೆ ಕುನಾಲ್ ಅವರು ಸಂವಿಧಾನವನ್ನು ಓದಬೇಕು, ಅಲ್ಲಿ ನಿಮಗೆ ವಾಕ್ ಮತ್ತು ಬರವಣಿಗೆಯ ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸಲಾಗಿದೆ, ಆದರೆ ಅದು ಯಾರನ್ನೂ ಅವಮಾನಿಸುವವರೆಗೆ ವಿಸ್ತರಿಸಬಾರದು. ಅವರು ಯಾರ ಸ್ವಾತಂತ್ರ್ಯವನ್ನೂ ಅತಿಕ್ರಮಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಕುನಾಲ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ,” ಎಂದು ಫಡ್ನವೀಸ್ ಹೇಳಿದ್ದಾರೆ.
ಖಾರ್‌ನ ಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ನಡೆದ ಪ್ರದರ್ಶನದಲ್ಲಿ, ಕುನಾಲ್ ಅವರು ಶಿಂಧೆ ಅವರ ಬಗ್ಗೆ ಎರಡು ನಿಮಿಷಗಳ ವಿಡಂಬನಾತ್ಮಕ ಹಾಡನ್ನು ಒಳಗೊಂಡಂತೆ ಸುಮಾರು 50 ನಿಮಿಷಗಳ ಸೆಟ್ ಅನ್ನು ಪ್ರದರ್ಶಿಸಿದ್ದರು. ಶಿಂಧೆ ವಿರುದ್ಧ ಹೇಳಿಕೆ
ಉದ್ಧವ್ ಠಾಕ್ರೆ ವಿರುದ್ಧ 2022 ರಲ್ಲಿ ದಂಗೆಯೆದ್ದ ಶಿಂಧೆ ಅವರನ್ನು ಅಣಕಿಸಲು ಅವರು ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಹಾಡನ್ನು ಮಾರ್ಪಡಿಸಿದ ಆವೃತ್ತಿಯನ್ನು ಬಳಸಿದ್ದಾರೆ. ಈ ವೇಳೆ ಕುನಾಲ್ ಅವರು ವಿವಿಧ ಉದ್ಯಮಿಗಳು ಮತ್ತು ರಾಜಕಾರಣಿಗಳ ಬಗ್ಗೆಯೂ ವಿಡಂಬನಾತ್ಮಕ ಟೀಕೆಗಳನ್ನು ಮಾಡಿದ್ದಾರೆ.
ಶಿಂಧೆ ವಿರುದ್ಧದ ಹಾಸ್ಯಕ್ಕೆ ಉದ್ರಿಕ್ತರಾಗಿರುವ ಶಿವಸೇನೆ ಕಾರ್ಯಕರ್ತರು ಮತ್ತೊಬ್ಬ ಹಾಸ್ಯನಟ ರಜತ್ ಸೂದ್ ಅದೇ ಸ್ಥಳದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಸ್ಥಳಕ್ಕೆ ನುಗ್ಗಿದ್ದಾರೆ. ಶಿಂಧೆ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ ಅವರು, ಕುನಾಲ್ ಪ್ರದರ್ಶನ ನೀಡಿದ ಸ್ಟುಡಿಯೋವನ್ನು ಧ್ವಂಸ ಮಾಡಿದ್ದಾರೆ. ಇದರ ನಂತರ ಮುಂಬೈ ಪೊಲೀಸರು ರಾಹುಲ್ ಕನಾಲ್ ಸೇರಿದಂತೆ ಹನ್ನೊಂದು ಶಿವಸೇನಾ ಕಾರ್ಯಕರ್ತರನ್ನು ವಿಧ್ವಂಸಕ ಕೃತ್ಯಕ್ಕಾಗಿ ಬಂಧಿಸಿದ್ದಾರೆ. ಅವರನ್ನು ಅದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ರಾಜ್ಯ ಗೃಹ ಸಚಿವ ಯೋಗೇಶ್ ಕದಮ್ ಅವರು ಪ್ರತಿಕ್ರಿಯಿಸಿ, ಅಧಿಕಾರಿಗಳು ಕುನಾಲ್ ಅವರ ಫೋನ್ ದಾಖಲೆಗಳನ್ನು ತನಿಖೆ ಮಾಡಿ ಅವರ ಸ್ಥಳವನ್ನು ಪತ್ತೆಹಚ್ಚುತ್ತಾರೆ ಎಂದು ಹೇಳಿದ್ದಾರೆ. “ಶಿವಸೇನೆ ಕಾರ್ಯಕರ್ತರ ಕೋಪವನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾನು ವಿಧ್ವಂಸಕ ಕೃತ್ಯವನ್ನು ಬೆಂಬಲಿಸುವುದಿಲ್ಲ, ಆದರೆ ಡಿಸಿಎಂ ಶಿಂಧೆ ವಿರುದ್ಧ ಕುನಾಲ್ ಅವರ ಅವಹೇಳನಕಾರಿ ಹೇಳಿಕೆಗಳನ್ನು ಹಾಗೆ ಬಿಟ್ಟು ಬಿಡಲಾಗುವುದಿಲ್ಲ ಅಥವಾ ಸಹಿಸಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಕುನಾಲ್ ಅವರ ಪ್ರದರ್ಶನದ ನಂತರದ ಉಂಟಾದ ಗೊಂದಲದ ಬಳಿಕ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೋಟೆಲ್ ವಿರುದ್ಧ ತ್ವರಿತ ಕ್ರಮ ಕೈಗೊಂಡಿದೆ. ಕೆಲವೇ ತಿಂಗಳುಗಳ ಹಿಂದೆ ಕಾನೂನುಬದ್ಧಗೊಳಿಸಿದ್ದ ಕೆಲವು ಕಟ್ಟಡಗಳನ್ನು ಕೆಡವಲು ತಕ್ಷಣದ ನೋಟಿಸ್ ನೀಡಿದೆ. ಜೊತೆಗೆ ಶಿವಸೇನೆಯು ಕುನಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) 2023 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಬಹು ವಿಭಾಗಗಳ ಅಡಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿದೆ.
ಸಿಎಂ ಫಡ್ನವೀಸ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಕುನಾಲ್ ಕಮ್ರಾಗೆ ಹಾಸ್ಯ ಮಾಡಲು ಸಂಪೂರ್ಣ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆದರೆ ಅವರು ಮಿತಿಗಳು ಮತ್ತು ಸಾಂವಿಧಾನಿಕ ಚೌಕಟ್ಟಿನೊಳಗೆ ಅದನ್ನು ಮಾಡಬೇಕು. ಜನರು ಅಧಿಕಾರಕ್ಕೆ ಮರಳಲು ಜನಾದೇಶವನ್ನು ನೀಡಿರುವ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವರು ಅವಮಾನಿಸುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಉದ್ಧವ್ ಠಾಕ್ರೆ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದ್ದು, “ಕುನಾಲ್ ಏನು ತಪ್ಪು ಮಾತನಾಡಿದ್ದಾರೆ? ಶಿಂಧೆ ನಮಗೆ ದ್ರೋಹ ಬಗೆದರು, ನನ್ನ ಸರ್ಕಾರವನ್ನು ಉರುಳಿಸಿದರು ಮತ್ತು ಬಿಜೆಪಿಯೊಂದಿಗೆ ಸೇರಿ ಸರ್ಕಾರವನ್ನು ರಚಿಸಿದರು. ಅವರನ್ನು ದೇಶದ್ರೋಹಿ ಎಂದು ಕರೆಯುವುದು ಸಮರ್ಥನೀಯ.” ಎಂದು ಹೇಳಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ ಕಾಮಿಡಿ ಕ್ಲಬ್ ಮೇಲಿನ ದಾಳಿಯನ್ನು ಟೀಕಿಸಿದ್ದು,”ಅಸುರಕ್ಷಿತ ಹೇಡಿ ಮಾತ್ರ ಯಾರಾದರೊಬ್ಬರ ಹಾಡಿಗೆ ಪ್ರತಿಕ್ರಿಯಿಸುತ್ತಾನೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೆ?” ಎಂದು ಪ್ರಶ್ನಿಸಿದ್ದಾರೆ. ಕುನಾಲ್ ಅವರು ತಮ್ಮ ಪ್ರದರ್ಶನದಲ್ಲಿ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಹೆಸರಿಸಲಿಲ್ಲ ಎಂದು ಅವರು ಹೇಳಿದ್ದು, “ಹಾಗಾದರೆ ಶಿಂಧೆ ಮತ್ತು ಅವರ ಜನರು ‘ದೇಶದ್ರೋಹಿ’ ಎಂಬ ಪದವು ಅವರಿಗೆ ಉದ್ದೇಶಿಸಲಾಗಿದೆ ಎಂದು ಹೇಗೆ ಖಚಿತವಾಗಿ ತಿಳಿಯುತ್ತಾರೆ? ಶಿಂಧೆ ‘ದೇಶದ್ರೋಹಿ’ ಎಂಬ ಪದಕ್ಕೆ ಹೆದರುತ್ತಾರೆ ಎಂದು ಇದು ತೋರಿಸುತ್ತದೆ” ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಈ ನಡುವೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿವಾದದಿಂದ ಅಂತರ ಕಾಪಾಡಿದ್ದು, “ಪೊಲೀಸರ ಮೇಲೆ ಒತ್ತಡ ಇರಬಾರದು” ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕರ್ನಾಟಕದ ವಕೀಲರ ಸಂಘಗಳಲ್ಲಿ ಮಹಿಳಾ ನ್ಯಾಯವಾದಿಗಳಿಗೆ ಶೇ.30ರಷ್ಟು ಮೀಸಲಾತಿ: ಸುಪ್ರೀಂ ಕೋರ್ಟ್ ಆದೇಶ
ಕರ್ನಾಟಕದ ವಕೀಲರ ಸಂಘಗಳಲ್ಲಿ ಮಹಿಳಾ ನ್ಯಾಯವಾದಿಗಳಿಗೆ ಶೇ.30ರಷ್ಟು ಮೀಸಲಾತಿ: ಸುಪ್ರೀಂ ಕೋರ್ಟ್ ಆದೇಶ

