ಏಪ್ರಿಲ್ 28ರಂದು ನಡೆಯಲಿರುವ ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ ಎಂದು ಕೆನಡಾದ ಗುಪ್ತಚರ ಸೇವೆ ಸೋಮವಾರ (ಮಾ.25) ಹೇಳಿದೆ.
ಭಾರತ ಮತ್ತು ಚೀನಾ ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಬಳಸುತ್ತಿವೆ ಎಂದು ಚುನಾವಣೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಕೆನಡಾದ ಭದ್ರತಾ ಗುಪ್ತಚರ ಸೇವೆಯ (CSIS)ಕಾರ್ಯಾಚರಣೆಗಳ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ ಆರೋಪಿಸಿದ್ದಾರೆ.
ಭಾನುವಾರ (ಮಾ.23) ಪ್ರಧಾನಿ ಮಾರ್ಕ್ ಕಾರ್ನಿ ಅವರು ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದು, ಈ ಬೆನ್ನಲ್ಲೇ ಗಂಭೀರ ಆರೋಪ ಕೇಳಿ ಬಂದಿದೆ.
ಭಾರತ ಸರ್ಕಾರವು ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಕೆನಡಾದ ಸಮುದಾಯಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಲಾಯ್ಡ್ ಹೇಳಿದ್ದಾರೆ.
ಈ ಚುನಾವಣೆಯ ಸಮಯದಲ್ಲಿ ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ, ವಿಶೇಷವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC)ಎಐ-ಚಾಲಿತ ಸಾಧನಗಳನ್ನು ಬಳಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಲಾಯ್ಡ್ ಪ್ರಕಾರ, ಚೀನಾ ತನ್ನ ಹಿತಾಸಕ್ತಿಗಳಿಗೆ ಹೊಂದಿಕೆಯಾಗುವ ನರೇಟಿವ್‌ಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುವ ಸಾಧ್ಯತೆಯಿದೆ. ಕೆನಡಾದಲ್ಲಿರುವ ಚೀನೀ ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮುದಾಯಗಳನ್ನು ‘ರಹಸ್ಯ ಮತ್ತು ವಂಚನೆಯ ತಂತ್ರಗಳೊಂದಿಗೆ ಚೀನಾ ಗುರಿಯಾಗಿಸಬಹುದು.
ಭಾರತ ಮತ್ತು ಚೀನಾ ಎರಡೂ ಕೆನಡಾ ಈ ಹಿಂದೆ ಮಾಡಿದ್ದ ಇದೇ ರೀತಿಯ ಆರೋಪವನ್ನು ನಿರಾಕರಿಸಿತ್ತು. ಆದರೆ, ಇತ್ತೀಚಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ.
ವಿದೇಶಿ ಸರ್ಕಾರಗಳು ನಮ್ಮ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿ ಕೆನಡಾ ಆಯೋಗ ನೀಡಿದ್ದ ವರದಿಯ ಆರೋಪಗಳನ್ನು ಭಾರತ ಈ ವರ್ಷದ ಜನವರಿಯಲ್ಲಿ ತಿರಸ್ಕರಿಸಿತ್ತು.
ವಿದೇಶಾಂಗ ಸಚಿವಾಲಯ (MEA)ಹೇಳಿಕೆ ನೀಡಿ, ಕೆನಡಾದ ಆರೋಪಗಳನ್ನು ತಳ್ಳಿಹಾಕಿತ್ತು. ಕೆನಡಾ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿತ್ತು.
ಕೆನಡಾದ ಪತ್ರಿಕೆಯಾದ ಗ್ಲೋಬ್ ಅಂಡ್ ಮೇಲ್, ಫೆಡರಲ್ ಚುನಾವಣೆಯ ಸಮಯದಲ್ಲಿ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ರಹಸ್ಯ ಹಣಕಾಸು ಬೆಂಬಲ ಒದಗಿಸಲು ಭಾರತವು ಪ್ರಾಕ್ಸಿ ಏಜೆಂಟ್‌ಗಳನ್ನು ಬಳಸಿಕೊಂಡಿರಬಹುದು ಎಂದು ವರದಿ ಮಾಡಿತ್ತು.
ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ರಷ್ಯಾ ಮತ್ತು ಪಾಕಿಸ್ತಾನ ಕೂಡ ಹಸ್ತಕ್ಷೇಪ ಮಾಡಲು ಪ್ರಯತ್ನಿಸಬಹುದು ಎಂದು ಲಾಯ್ಡ್ ಎಚ್ಚರಿಸಿದ್ದಾರೆ.
ಕ್ರೆಮ್ಲಿನ್ (ರಷ್ಯಾ) ಚರ್ಚಾ ಅಂಶಗಳನ್ನು ಉತ್ತೇಜಿಸುವ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ವೆಬ್‌ಸೈಟ್‌ಗಳಲ್ಲಿ ‘ಪ್ರಸರಣ ಜಾಲಗಳನ್ನು’ ರಚಿಸಲು ರಷ್ಯಾ ಕೆಲಸ ಮಾಡಿದೆ ಎಂದು ಲಾಯ್ಡ್ ಆರೋಪಿಸಿದ್ದು, ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ರಷ್ಯಾ ಈ ಆನ್‌ಲೈನ್ ನೆಟ್‌ವರ್ಕ್‌ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಭಾರತದ ಜಾಗತಿಕ ಶಕ್ತಿಯಾಗಿ ಬೆಳೆಯುವಾಗ, ಅದನ್ನು ಎದುರಿಸಿ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ತನ್ನ ಕಾರ್ಯತಂತ್ರವನ್ನು ಸಾಧಿಸಲು ಪಾಕಿಸ್ತಾನ ವಿದೇಶಿ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯ ಮಾಡಬಹುದು ಎಂದು ಲಾಯ್ಡ್ ಹೇಳಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 2023ರಲ್ಲಿ ಆರೋಪಿಸಿದ್ದರು. ನಂತರ ಭಾರತ ಮತ್ತು ಕೆನಡಾ ನಡುವೆ ಈ ವಿಚಾರವಾಗಿ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಭಾರತ ತನ್ನ ಮೇಲಿನ ಆರೋಪವನ್ನು ಬಲವಾಗಿ ನಿರಾಕರಿಸಿತ್ತು.
ದಕ್ಷಿಣ ಗಾಝಾದ ಅತಿದೊಡ್ಡ ನಾಸರ್ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಇಸ್ರೇಲ್: ಹಮಾಸ್ ನಾಯಕನ ಹತ್ಯೆ


