“ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಅಲ್ಲ” ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್ ಬುಧವಾರ (ಮಾ.26) ತಡೆ ನೀಡಿದೆ.
ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾದ ಹೈಕೋರ್ಟ್‌ನ ಆದೇಶದ ವಿರುದ್ಧ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಸುಪ್ರೀಂ ಕೋರ್ಟ್ ಪೀಠ, ಹೈಕೋರ್ಟ್‌ನ ಅಭಿಪ್ರಾಯಕ್ಕೆ ತನ್ನ ಬಲವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹೈಕೋರ್ಟ್‌ನ ಆದೇಶವು ‘ಆಘಾತಕಾರಿ’ ಎಂದು ಹೇಳಿದೆ.
“ಹೈಕೋರ್ಟ್‌ನಲ್ಲಿ ತೀರ್ಪಿನಲ್ಲಿ ಮಾಡಲಾದ ಕೆಲವೊಂದು ಅವಲೋಕನಗಳು, ವಿಶೇಷವಾಗಿ ಪ್ಯಾರಾ 21, 24 ಮತ್ತು 26 ರಲ್ಲಿ ಸೂಕ್ಷ್ಮತೆಯ ಕೊರತೆ ಕಂಡು ಬಂದಿದೆ ಎಂದು ಹೇಳಲು ನಮಗೆ ಬೇಸರವಾಗುತ್ತಿದೆ” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
“ತೀರ್ಪನ್ನು ಆಕಸ್ಮಿಕವಾಗಿ ನೀಡಲಾಗಿಲ್ಲ, ಬದಲಿಗೆ ಸುಮಾರು ನಾಲ್ಕು ತಿಂಗಳು ಕಾಯ್ದಿರಿಸಿದ ನಂತರ ಪ್ರಕಟಿಸಲಾಗಿದೆ ಎಂಬುವುದನ್ನು ಗಮನಿಸಿದ ಪೀಠ, ಇದರರ್ಥ ನ್ಯಾಯಾಧೀಶರು ಸರಿಯಾದ ಪರಿಶೀಲನೆ ಮಾಡಿ ತಮ್ಮ ಮನಸ್ಸಿಗೆ ತೋಚಿದಂತೆ ತೀರ್ಪು ನೀಡಿದ್ದಾರೆ. ಈ ಅವಲೋಕನಗಳು ಕಾನೂನಿನ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ದವಾಗಿದೆ ಮತ್ತು ಸಂವೇದನಾರಹಿತವಾಗಿದೆ” ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಇತರ ಪಕ್ಷಕಾರರಿಗೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರದ ಪರ ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೈಕೋರ್ಟ್‌ನ ತೀರ್ಪನ್ನು ಖಂಡಿಸಿದ್ದು, ಆಫಾತಕಾರಿ ಎಂದಿದ್ದಾರೆ.
‘ವಿ ದಿ ವುಮೆನ್ ಆಫ್ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಯ ಪರವಾಗಿ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಕಳುಹಿಸಿದ ಪತ್ರದ ಆಧಾರದ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಮಾರ್ಚ್ 17ರಂದು ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರು “ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಅಪರಾಧ” ಎಂದು ಹೇಳಿದ್ದರು.
ಕೋಟಾ| ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆಗೆ ಶರಣು; ಜನವರಿ ಬಳಿಕ ಒಂಬತ್ತನೇ ಪ್ರಕರಣ


