ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ನೇತೃತ್ವದ ಆಯೋಗ ಇಂದು (ಮಾ. 27) ರಾಜ್ಯ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿತು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನ್ಯಾ.ನಾಗಮೋಹನದಾಸ್ ವರದಿ ಸಲ್ಲಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಬಸಂತಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಪ್ರಾತಿನಿಧ್ಯತೆ ಕಲ್ಪಿಸುವ ಕುರಿತು ಪ್ರಾಯೋಗಿಕ ಅಂಕಿ ಅಂಶ (ಎಂಫರಿಕಲ್ ಡಾಟಾ) ಪಡೆದು ಒಳಮೀಸಲಾತಿ ಜಾರಿಗೆ ಸೂಕ್ತ ಶಿಫಾರಸು ಮಾಡುವಂತೆ 14 ನವೆಂಬರ್ 2024ರಂದು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಬಳಿಕ ಅವಧಿಯನ್ನು ವಿಸ್ತರಿಸಲಾಗಿತ್ತು.


