ಶಂಕಿತ ಭಯೋತ್ಪಾದಕಿ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಭಾಗವಹಿಸಲಿರುವ ಮಾಲೆಗಾಂವ್‌ನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ ಎಂದು ಇಂಡಿಯಾ ಟುಡೆ ಶನಿವಾರ ವರದಿ ಮಾಡಿದೆ. ಅವರು ಆಹ್ವಾನಿತರಾಗಿರುವ ಈ ಕಾರ್ಯಕ್ರಮವನ್ನು ಸಕಲ್ ಹಿಂದೂ ಸಮಾಜ ಆಯೋಜಿಸಿದ್ದು, ಭಾನುವಾರದಂದು ನಾಲ್ಕು ಗಂಟೆಗಳ ಕಾಲ ನಡೆಯಲಿದೆ ಎಂದು ವರದಿಯಾಗಿದೆ.
ಪ್ರಜ್ಞಾ ಸಿಂಗ್ ಠಾಕೂರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಾಗಲಿದೆ ಎಂದು ಉಲ್ಲೇಖಿಸಿ ನಾಸಿಕ್ ಜಿಲ್ಲಾಡಳಿತವು ಆಡಳಿತವು ಆರಂಭದಲ್ಲಿ ಅನುಮತಿ ನಿರಾಕರಿಸಿತ್ತು. ಶಂಕಿತ ಭಯೋತ್ಪಾದಕಿ
2008 ರಲ್ಲಿ ಮಾಲೆಗಾಂವ್ ಮಸೀದಿಯ ಬಳಿ ಭೀಕರ ಸ್ಫೋಟ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪ್ರಕರಣದ ಆರೋಪಿಗಳಲ್ಲಿ ಪ್ರಜ್ಞಾ ಸಿಂಗ್ ಕೂಡಾ ಒಬ್ಬರಾಗಿದ್ದಾರೆ. ಕಾರ್ಯಕ್ರಮದ ಮತ್ತೊಬ್ಬ ಆಹ್ವಾನಿತ ಅತಿಥಿ ಮಿಲಿಂದ್ ಏಕಬೋಟೆ ಕೂಡ ದ್ವೇಷ ಭಾಷಣದ ಆರೋಪದ ಮೇಲೆ ಕಾನೂನು ಕ್ರಮ ಎದುರಿಸಿದ್ದಾರೆ.
ರಾಹುಲ್ ಬಚಾವ್ ನೇತೃತ್ವದ ಸಂಘಟಕರು ಫೆಬ್ರವರಿ 18 ರಂದು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರೂ, ನಾಸಿಕ್ ಕಲೆಕ್ಟರ್, ತಹಶೀಲ್ದಾರ್ ಅಥವಾ ಸ್ಥಳೀಯ ಪೊಲೀಸರಿಂದ ಯಾವುದೇ ಔಪಚಾರಿಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದರ ನಂತರ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಅನಧಿಕೃತವಾಗಿ ತಿಳಿಸಿರುವುದಾಗಿ ಮತ್ತು ಅನುಮೋದನೆ ಇಲ್ಲದೆ ಕಾರ್ಯಕ್ರಮ ನಡೆಸಿದರೆ ಮಧ್ಯಪ್ರವೇಶಿಸುವ ಎಚ್ಚರಿಕೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
‘ವಿರಾಟ್ ಹಿಂದೂ ಸಂತ ಸಮ್ಮೇಳನ’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು ಮಾರ್ಚ್ 30 ರಂದು ಗುಡಿ ಪಾಡ್ವಾದೊಂದಿಗೆ ಮಾಲೆಗಾಂವ್‌ನ ಸತಾನ ನಾಕಾದ ಯಶಸ್ವಿ ಕಾಂಪೌಂಡ್‌ನಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ನಡೆಯಲಿದೆ. ಸಭೆಯಲ್ಲಿ ಸ್ವಾಮಿ ಪ್ರಜ್ಞಾನಂದ್ ಸರಸ್ವತಿ ಮತ್ತು ನೀಲೇಶ್ ಚಂದ್ರ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿದ್ಧತೆಗಾಗಿ ಸಂಘಟಕರು ಈಗಾಗಲೇ ನಾಸಿಕ್‌ನಾದ್ಯಂತ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕಿದ್ದಾರೆ.


