ಗುಜರಾತ್ ಗಲಭೆ ಕುರಿತು ಉಲ್ಲೇಖಿಸಿ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ ಎಂದು ಸಂಘ ಪರಿವಾರ ಆರೋಪಿಸಿದ ಬಳಿಕ ಮೋಹನ್‌ಲಾಲ್ ಅಭಿನಯದ ‘ಎಲ್2 ಎಂಪುರಾನ್’ ಚಿತ್ರ ವಿವಾದಕ್ಕೀಡಾಗಿದೆ.
ಸಂಘ ಪರಿವಾರ ಆಕ್ಷೇಪ ವ್ಯಕ್ತಪಡಿಸಿದ ಚಿತ್ರದ ಸುಮಾರು 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ವಿವಾದಕ್ಕೆ ಸಂಬಂಧಿಸಿದಂತೆ ನಟ ಮೋಹನ್‌ಲಾಲ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಂಪುರಾನ್ ಚಿತ್ರವನ್ನು ಬೆಂಬಲಿಸಿದ್ದು, “ಚಿತ್ರದ ನಿರ್ಮಾಪಕರ ಕೋಮುವಾದದ ವಿರುದ್ದದ ನಿಲುವಿನ ಬಗ್ಗೆ ಸಂಘಪರಿವಾರ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಣರಾಯಿ ವಿಜಯನ್ “ದೇಶಕಂಡ ಅತ್ಯಂತ ಘೋರ ನರಮೇಧಗಳಲ್ಲಿ ಒಂದನ್ನು ಈ ಚಿತ್ರ ಉಲ್ಲೇಖಿಸುತ್ತದೆ. ಅದು ಸಂಘಪರಿವಾರ ಮತ್ತು ಅದರ ಸೂತ್ರಧಾರರನ್ನು ಕೆರಳಿಸಿದೆ” ಎಂದಿದ್ದಾರೆ.
ಶನಿವಾರ (ಮಾ.29) ಸಂಜೆ ತಿರುವನಂತಪುರಂನಲ್ಲಿ ಪಿಣರಾಯಿ ವಿಜಯನ್ ಕುಟುಂಬ ಸಮೇತರಾಗಿ ಎಂಪುರಾನ್ ಸಿನಿಮಾ ವೀಕ್ಷಿಸಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಎಂದು ಎಂಪುರಾನ್ ಕುರಿತು ಶ್ಲಾಘಿಸಿದ ಪಿಣರಾಯಿ ವಿಜಯನ್, “ಸಂಘ ಪರಿವಾರ ಚಿತ್ರ, ಅದರ ನಟರು ಮತ್ತು ಸಿಬ್ಬಂದಿಯ ವಿರುದ್ಧ ವ್ಯಾಪಕ ದ್ವೇಷ ಹರಡುತ್ತಿರುವ ಹಿನ್ನೆಲೆ ಚಿತ್ರ ವೀಕ್ಷಿಸಿದೆ” ಎಂದಿದ್ದಾರೆ.
ಕೇವಲ ಕಾರ್ಯಕರ್ತರು ಮಾತ್ರವಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಕೂಡ ಚಿತ್ರದ ನಿರ್ಮಾಪಕರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿದ್ದಾರೆ. ಚಿತ್ರವನ್ನು ಮರು ಸೆನ್ಸಾರ್ ಮಾಡಲು ಮತ್ತು ದೃಶ್ಯಗಳಿಗೆ ಕತ್ತರಿ ಹಾಕಲು ಒತ್ತಾಯಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ. ಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣವು ಕಳವಳಕಾರಿ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೋಮುವಾದಿಗಳು, ಕೋಮುವಾದದ ವಿರುದ್ಧ ನಿಲುವು ತೆಗೆದುಕೊಂಡು ಅದರ ಭಯಾನಕತೆಯನ್ನು ಚಿತ್ರಿಸಿದ್ದಾರೆ ಎಂಬ ಕಾರಣಕ್ಕಾಗಿ ಚಿತ್ರ ಮತ್ತು ಅದರ ಕಲಾವಿದರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.
“ಪ್ರಜಾಪ್ರಭುತ್ವ ಸಮಾಜದಲ್ಲಿ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಕಲಾಕೃತಿಗಳು ಮತ್ತು ಕಲಾವಿದರನ್ನು ನಾಶಮಾಡುವ ಮತ್ತು ನಿಷೇಧಿಸುವ ಹಿಂಸಾತ್ಮಕ ಕರೆಗಳು ಫ್ಯಾಸಿಸ್ಟ್ ಮನಸ್ಥಿತಿಯ ಹೊಸ ಅಭಿವ್ಯಕ್ತಿಗಳಾಗಿವೆ. ಇದು ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಚಲನಚಿತ್ರಗಳನ್ನು ನಿರ್ಮಿಸುವ, ವೀಕ್ಷಿಸುವ, ಆನಂದಿಸುವ ಮತ್ತು ಅವುಗಳನ್ನು ಮೌಲ್ಯಮಾಪನ ಮಾಡುವ ಅಥವಾ ಅವುಗಳನ್ನು ಒಪ್ಪುವ ಅಥವಾ ಒಪ್ಪದಿರುವ ಹಕ್ಕುಗಳನ್ನು ಕಳೆದುಕೊಳ್ಳಬಾರದು ಎಂದು ಹೇಳಿದ ವಿಜಯನ್, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಲ್ಲಿ ಬೇರೂರಿರುವ ದೇಶದ ಒಗ್ಗಟ್ಟಿನ ಧ್ವನಿಯನ್ನು ಇದಕ್ಕಾಗಿ ಎತ್ತಬೇಕು ಎಂದಿದ್ದಾರೆ.
ಪೃಥ್ವಿರಾಜ್ ನಿರ್ದೇಶನದ ಎಂಪುರಾನ್ ಚಿತ್ರ, ಪೃಥ್ವಿರಾಜ್-ಮೋಹನ್ ಲಾಲ್ ತಂಡ ಯೋಜಿಸಿರುವ ಲೂಸಿಫರ್ ಚಿತ್ರದ ಎರಡನೇ ಭಾಗವಾಗಿದ್ದು, ಬಲಪಂಥೀಯ ರಾಜಕೀಯದ ಟೀಕೆ ಮತ್ತು ಗುಜರಾತ್ ಗಲಭೆಯ ರಹಸ್ಯ ಉಲ್ಲೇಖದಿಂದಾಗಿ ಬಿಸಿ ಚರ್ಚೆಯ ವಿಷಯವಾಗಿದೆ.
ಚಿತ್ರ ಬಿಡುಗಡೆಯಾದ ಗುರುವಾರ, ಸಂಘ ಪರಿವಾರವು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ವಿರುದ್ಧ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿತ್ತು. ಆದರೆ, ಕಾಂಗ್ರೆಸ್ ಮತ್ತು ಎಡಪಂಥೀಯ ತಂಡಗಳು ಬಲಪಂಥೀಯ ರಾಜಕೀಯವನ್ನು ‘ವಿಲನ್’ ರೂಪದಲ್ಲಿ ಚಿತ್ರಿಸಿದ್ದಕ್ಕಾಗಿ ಚಿತ್ರವನ್ನು ಶ್ಲಾಘಿಸಿದೆ.
ಗುರುವಾರ ವಿಶ್ವಾದ್ಯಂತ ಬಿಡುಗಡೆಯಾದ ಎಲ್2: ಎಂಪುರಾನ್, ಮೊದಲ ದಿನ ಕೇರಳವೊಂದರಲ್ಲೇ 746 ಪರದೆಗಳಲ್ಲಿ 4,500 ಪ್ರದರ್ಶನಗಳನ್ನು ಕಂಡಿದೆ ಎಂದು ವರದಿಯಾಗಿದೆ.
ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ‘ಎಲ್2 : ಎಂಪುರಾನ್ ಚಿತ್ರ’; ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧಾರ


