ಮೊಘಲ್ ಸಾಮ್ರಾಟ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿ ಪರ ಬಲಪಂಥೀಯ ಸಂಘಟನೆಗಳ ವಿವಾದದ ನಡುವೆ, ಆರ್‌ಎಸ್‌ಎಸ್ ನಾಯಕ ಸುರೇಶ್ ಭಯ್ಯಾಜಿ ಜೋಶಿ ಈ ವಿವಾದವನ್ನು ಅನಗತ್ಯವಾಗಿ ಎತ್ತಲಾಗಿದೆ ಎಂದು ಹೇಳಿದ್ದಾರೆ. “ಔರಂಗಜೇಬ್ ಇಲ್ಲಿ (ಮಹಾರಾಷ್ಟ್ರದಲ್ಲಿ) ನಿಧನರಾಗಿದ್ದು, ಆದ್ದರಿಂದ ಅವರ ಸಮಾಧಿಯನ್ನು ಇಲ್ಲಿ ನಿರ್ಮಿಸಲಾಗಿದೆ. ನಂಬಿಕೆ ಇರುವವರು (ಅಲ್ಲಿಗೆ) ಹೋಗುತ್ತಾರೆ.” ಎಂದು ಅವರು ಹೇಳಿದ್ದಾರೆ. ಔರಂಗಜೇಬ್ ಸಮಾಧಿ
“ನಮ್ಮ ಆದರ್ಶ ಛತ್ರಪತಿ ಶಿವಾಜಿ ಆಗಿದ್ದು, ಅವರು ಅಫ್ಜಲ್ ಖಾನ್ ಸಮಾಧಿಯನ್ನು ಸಹ ನಿರ್ಮಿಸಿದ್ದಾರೆ. ಇದು ಭಾರತದ ಉದಾರತೆ ಮತ್ತು ಒಳಗೊಳ್ಳುವಿಕೆಯನ್ನು ಸಂಕೇತಿಸುತ್ತದೆ. ಸಮಾಧಿ ಅಲ್ಲಿಯೆ ಉಳಿಯಲಿ; ಹೋಗಲು ಬಯಸುವವರು ಅಲ್ಲಿಗೆ ಹೋಗುತ್ತಾರೆ” ಎಂದು ಜೋಶಿ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳಾದ ವಿಎಚ್‌ಪಿ ಮತ್ತು ಬಜರಂಗ ದಳವು ಸಂಭಾಜಿ ನಗರದ ಖುಲ್ದಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ನಾಗ್ಪುರದಲ್ಲಿ ಪ್ರತಿಭಟನೆ ನಡೆಸಿತ್ತು.
ಪ್ರತಿಭಟನೆಯ ಸಮಯದಲ್ಲಿ ಪವಿತ್ರ ಚಾದರ್ ಅನ್ನು ಸುಟ್ಟು ಪ್ರವಾದಿಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಹಾಗಾಗಿ ಪ್ರತಿಭಟನೆಯು ವಿವಾದಕ್ಕೆ ಕಾರಣವಾಗಿತ್ತು, ಜೊತೆಗೆ ನಾಗ್ಪುರದಲ್ಲಿ ಹಿಂಸಾಚಾರ ಉದ್ಭವವಾಗಿತ್ತು.
ಜೋಶಿ ಅವರ ಹೇಳಿಕೆಗೂ ಮೊದಲು, ಮತ್ತೊಬ್ಬ ಆರ್‌ಎಸ್‌ಎಸ್ ನಾಯಕ ಸುನಿಲ್ ಅಂಬೇಕರ್ ಕೂಡಾ 17 ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿ ಇಂದು ಪ್ರಸ್ತುತವಲ್ಲ ಎಂದು ಹೇಳಿದ್ದರು. ನಾಗ್ಪುರ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಯಾವುದೇ ರೀತಿಯ ಕ್ರಮವನ್ನು ಪ್ರೋತ್ಸಾಹಿಸಬಾರದು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಾರೆ” ಎಂದು ಹೇಳಿದ್ದಾರೆ.
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಜೋಶಿ ಅವರು ಹೇಳಿಕೆ ನೀಡಿದ್ದಾರೆ. ಶಿವಾಜಿ ಪಾರ್ಕ್‌ನಲ್ಲಿ ನಡೆದ ಗುಡಿ ಪಾಡ್ವಾ ರ್ಯಾಲಿಯಲ್ಲಿ ಮಾತನಾಡಿದ್ದ ಠಾಕ್ರೆ, ಜನರು ಜಾತಿ ಮತ್ತು ಧರ್ಮ ಆಧಾರಿತ ದ್ವೇಷದ ರಾಜಕೀಯಕ್ಕೆ ಬಲಿಯಾಗಬಾರದು ಮತ್ತು ಇತಿಹಾಸವನ್ನು ಕೋಮು ದೃಷ್ಟಿಕೋನದಿಂದ ನೋಡಬಾರದು ಎಂದು ಮನವಿ ಮಾಡಿದ್ದರು.
ಛತ್ರಪತಿ ಶಿವಾಜಿಯ “ಸ್ವರಾಜ್ಯ”ದ ಮೇಲೆ ದಾಳಿ ಮಾಡಿದ ಔರಂಗಜೇಬ್ ಮತ್ತು ಅಫ್ಜಲ್ ಖಾನ್‌ರಂತಹ ಜನರ ಸಮಾಧಿಗಳನ್ನು ಮರಾಠಾ ಶೌರ್ಯದ ಸಂಕೇತವಾಗಿ ಪ್ರದರ್ಶಿಸಲು ಅವುಗಳನ್ನು ರಕ್ಷಿಸಬೇಕು ಎಂದು ಅವರು ಹೇಳಿದ್ದರು. ಐತಿಹಾಸಿಕ ಮಾಹಿತಿಗಾಗಿ ಜನರು ವಾಟ್ಸಾಪ್ ಫಾರ್ವರ್ಡ್‌ಗಳನ್ನು ಅವಲಂಬಿಸಬಾರದು ಎಂದು ಅವರು ಕೇಳಿಕೊಂಡಿದ್ದರು.
“ಶಿವಾಜಿ ಮಹಾರಾಜರು ಊಳಿಗಮಾನ್ಯ ಪದ್ಧತಿಯ ವಿರುದ್ಧ ಹೋರಾಡುತ್ತಿದ್ದರು. ಎಲ್ಲಾ ಸಮುದಾಯಗಳ ಜನರು ವಿಭಿನ್ನ ಸಾಮ್ರಾಜ್ಯಗಳಿಗಾಗಿ ಕೆಲಸ ಮಾಡಿದ್ದರಿಂದ, ಸೇನಾಧಿಪತಿ ಅಥವಾ ಐತಿಹಾಸಿಕ ವ್ಯಕ್ತಿಗಳ ಜಾತಿ ಮತ್ತು ಧರ್ಮವನ್ನು ನೋಡಬೇಡಿ. ಯುವಕರು ವಾಟ್ಸಾಪ್‌ನಲ್ಲಿ ಇತಿಹಾಸ ಓದುವುದನ್ನು ನಿಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು ಸಮಾಜದ ನಿಜವಾದ ಸಮಸ್ಯೆಗಳಿಂದ ನಿಮ್ಮನ್ನು ಬೇರೆಡೆಗೆ ತಿರುಗಿಸುವ ಯೋಜನೆಯಾಗಿದೆ” ಎಂದು ಜೋಶಿ ಹೇಳಿದ್ದಾರೆ.
ಸಮಾಧಿ ವಿವಾದದಿಂದ ದೂರ ಉಳಿದ ಆರ್‌ಎಸ್‌ಎಸ್
ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕಲು ವಿಎಚ್‌ಪಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪವಿತ್ರ ಶ್ಲೋಕಗಳು ಇದ್ದ ‘ಚಾದರ್’ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಲಾಗಿತ್ತು. ಹಾಗಾಗಿ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಆರ್‌ಎಸ್‌ಎಸ್ ವಕ್ತಾರ ಸುನಿಲ್ ಅಂಬೇಕರ್ 17 ನೇ ಶತಮಾನದ ಚಕ್ರವರ್ತಿಯು ಈಗ “ಅಪ್ರಸ್ತುತ” ಎಂದು ಬಣ್ಣಿಸಿದ್ದರು. ಸಮಾಧಿಯನ್ನು ಸ್ಥಳಾಂತರಿಸಬೇಕೇ ಎಂಬ ಪ್ರಶ್ನೆಗೆ ಅವರು “ಇದು ಪ್ರಸ್ತುತವಲ್ಲ” ಎಂದು ಉತ್ತರಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಈದ್ ಹಬ್ಬ: ‘ನಿರಂತರ ಸಂಬಂಧ’ವನ್ನಾಗಿ ಪರಿವರ್ತಿಸಲು ಚಿರಾಗ್ ನ ಹಿಂದು-ಮುಸ್ಲಿಮರು ಪ್ರತಿಜ್ಞೆ
ಈದ್ ಹಬ್ಬ: ‘ನಿರಂತರ ಸಂಬಂಧ’ವನ್ನಾಗಿ ಪರಿವರ್ತಿಸಲು ಚಿರಾಗ್ ನ ಹಿಂದು-ಮುಸ್ಲಿಮರು ಪ್ರತಿಜ್ಞೆ

