ತಮಿಳುನಾಡಿನಲ್ಲಿ 2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಮುಂದಿನ 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತ್ತೆ ಎಐಎಡಿಎಂಕೆ ಮತ್ತು ಬಿಜೆಪಿ ಒಂದಾಗಲು ಹೊರಟಿದೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ, ಅಣ್ಣಾಮಲೈಗೆ ಬಿಜೆಪಿ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎಂದು indianexpress.com ವರದಿ ಮಾಡಿದೆ.
ಮುಂದಿನ ಚುನಾವಣೆಗೆ ಎಐಎಡಿಎಂಕೆ ಮತ್ತು ಬಿಜೆಪಿ ಜಾತಿ ಲೆಕ್ಕಾಚಾರ ಹಾಕಿದೆಯಂತೆ. ಅದರಂತೆ, ಎಐಎಡಿಎಂಕೆ ಮತ್ತು ಬಿಜೆಪಿ ಎರಡೂ ಪಕ್ಷಗಳ ಮುಖ (ಫೇಸ್) ಆಗಿ ‘ಗೌಂಡರ್’ ಸಮುದಾಯದವರು ಮುಂದುವರೆಯುವುದು ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಂತೆಯೇ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕೂಡ ಪ್ರಬಲ ಹಿಂದುಳಿದ ಸಮುದಾಯಕ್ಕೆ ಸೇರಿದವರು ಮತ್ತು ಪಶ್ಚಿಮ ಕೊಂಗು ಪ್ರದೇಶವರು (ಇಲ್ಲಿ ಗೌಂಡರ್‌ಗಳು ಪ್ರಬಲರು).
ಮೈತ್ರಿ ಮಾತುಕತೆಯ ಮೊದಲ ಹೆಜ್ಜೆಯಾಗಿ ಎಐಎಡಿಎಂಕೆಯ ಪಳನಿಸ್ವಾಮಿಯವರು ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಅಣ್ಣಾಮಲೈ ಕೂಡ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅಣ್ಣಾಮಲೈ ಅವರೇ ಎರಡೂ ಪಕ್ಷಗಳ ನಾಯಕರು ಒಂದೇ ಸಮುದಾಯವರು ಆಗಿರುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ, ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬೇರೆ ಸಮುದಾಯದ ಒಬ್ಬರನ್ನು ನೇಮಿಸುವ ಯೋಚನೆಯಲ್ಲಿದೆ. ಅಣ್ಣಾಮಲೈಗೆ ರಾಷ್ಟ್ರೀಯ ಬಿಜೆಪಿಯಲ್ಲಿ ಹೈಕಮಾಂಡ್ ಸ್ಥಾನ ಕೊಡುವ ಸಾಧ್ಯತೆ ಇದೆ.
ಒಂದು ವೇಳೆ ಅಣ್ಣಾಮಲೈ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ, ಆ ಸ್ಥಾನಕ್ಕೆ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ ನೇಮಕಗೊಳ್ಳುವ ಸಾಧ್ಯತೆ ಇದೆ. ಜಯಲಲಿತಾ ಅವರ ನಾಯಕತ್ವದಡಿಯಲ್ಲಿ ಎಐಎಡಿಎಂಕೆಯಲ್ಲಿದ್ದ ಪ್ರಭಾವಿ ತೇವರ್ ಸಮುದಾಯಕ್ಕೆ ಸೇರಿದ ತಿರುನಲ್ವೇಲಿಯ ಜನಪ್ರಿಯ ನಾಯಕರಾಗಿದ್ದಾರೆ ಈ ನಾಗೇಂದ್ರನ್. ಈ ಹಿಂದೆ ಜಯಲಲಿತಾ ಅವರ ಆಪ್ತೆ ವಿ. ಕೆ ಶಶಿಕಲಾ ಮೂಲಕ ಎಐಎಡಿಎಂಕೆ ತೇವರ್ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಂಡಿತ್ತು.
“ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಅವರಿಗೆ ಕೊಡುವ ಶಿಕ್ಷೆಯಲ್ಲ ಅಥವಾ ಹಿಂಬಡ್ತಿಯೂ ಅಲ್ಲ. ಬಿಜೆಪಿ ಪಶ್ಚಿಮ ತಮಿಳುನಾಡಿನ ಆಚೆಗೂ ತನ್ನ ಹಿಡಿತವನ್ನು ಬಲಪಡಿಸಲು ಬಯಸುತ್ತಿದೆ. ನಾಗೇಂದ್ರನ್ ಅವರಂತಹ ತೇವರ್ ಸಮುದಾಯದ ನಾಯಕನಿಗೆ ಪಕ್ಷದ ಚುಕ್ಕಾಣಿ ಕೊಡುವುದರಿಂದ ದಕ್ಷಿಣ ಜಿಲ್ಲೆಗಳು ಮತ್ತು ಅದರಾಚೆಗೆ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸಲು ಸಹಾಯವಾಗುತ್ತದೆ. ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ಡಿಎಂಕೆಯ ಭದ್ರಕೋಟೆಯನ್ನು ಬೇಧಿಸಬೇಕಿದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ indianexpress.com ವರದಿ ತಿಳಿಸಿದೆ.
ಭಾನುವಾರ ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಣ್ಣಾಮಲೈ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದು, “ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಒಂದು ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನೀವು ಅದನ್ನೇ ಪಕ್ಷದ ಅಂತಿಮ ಅಭಿಪ್ರಾಯವಾಗಿ ತೆಗೆದುಕೊಳ್ಳಬಹುದು” ಎಂದು ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್‌ಗೆ ತಮಿಳುನಾಡಿನ ವಿವರವಾದ ರಾಜಕೀಯ ಅಧ್ಯಯನ ನೀಡುವಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಣ್ಣಾಮಲೈ “ಒಬ್ಬ ಕೇಡರ್ ಮತ್ತು ನಾಯಕನಾಗಿ, ನಾನು ಸೂಕ್ಷ್ಮ ವಿಶ್ಲೇಷಣೆಯನ್ನು ಮಾಡಿದ್ದೇನೆ ಮತ್ತು ರಾಜ್ಯ ಘಟಕದ ಪ್ರಸ್ತುತ ಸ್ಥಿತಿ ಮತ್ತು ಅದು ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಪುರಾವೆಗಳೊಂದಿಗೆ ಪಕ್ಷದ ರಾಷ್ಟ್ರೀಯ ನಾಯಕರಿಗೆ ವಿವರಿಸಿದ್ದೇನೆ” ಎಂದಿದ್ದಾರೆ.
ತಮಿಳುನಾಡಿನ ಚುನಾವಣಾ ವ್ಯವಸ್ಥೆಯನ್ನು ಐದು ವಲಯಗಳ ಮೂಲಕ ವಿವರಿಸಿದ ಅಣ್ಣಾಮಲೈ, ಬಿಜೆಪಿ ಪಶ್ಚಿಮ ಪ್ರದೇಶದಲ್ಲಿ (54 ಸ್ಥಾನಗಳು) ಮತ್ತು ದಕ್ಷಿಣ ಜಿಲ್ಲೆಗಳಲ್ಲಿ (60 ಸ್ಥಾನಗಳು) ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 150 ಸ್ಥಾನಗಳನ್ನು ಗೆಲ್ಲಲು, ಒಂದು ಪಕ್ಷವು ಮೂರು ವಲಯಗಳನ್ನು ಗೆದ್ದುಕೊಳ್ಳಬೇಕು; 180-190 ಸ್ಥಾನಗಳನ್ನು ಪಡೆಯಲು, ಅದು ನಾಲ್ಕು ವಲಯಗಳಲ್ಲಿ ಪ್ರಾಬಲ್ಯ ಸಾಧಿಸಬೇಕು ಎಂದು ತಿಳಿಸಿದ್ದಾರೆ.
ದಕ್ಷಿಣ ತಮಿಳುನಾಡಿದಾದ್ಯಂತ ಬಿಜೆಪಿ ಈಗಾಗಲೇ ಎಐಎಡಿಎಂಕೆ ಮೇಲೆ ಮೇಲುಗೈ ಸಾಧಿಸಿದೆ. ಪಶ್ಚಿಮ ತಮಿಳುನಾಡಿನ ನಿರ್ಣಾಯಕ ಪ್ರದೇಶಗಳಲ್ಲಿಯೂ ಎಐಎಡಿಎಂಕೆ ಬಿಜೆಪಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ಈದ್ ಹಬ್ಬ: ‘ನಿರಂತರ ಸಂಬಂಧ’ವನ್ನಾಗಿ ಪರಿವರ್ತಿಸಲು ಚಿರಾಗ್ ನ ಹಿಂದು-ಮುಸ್ಲಿಮರು ಪ್ರತಿಜ್ಞೆ


