ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಚಿವ ಹಾಗೂ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಇತರರ ಪಾತ್ರ ಇರುವ ಬಗ್ಗೆ ಎಫ್‌ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲು ದೆಹಲಿ ನ್ಯಾಯಾಲಯ ಮಂಗಳವಾರ (ಏ.1) ನಿರ್ದೇಶಿಸಿದೆ.
ಕಪಿಲ್ ಮಿಶ್ರಾ, ದಯಾಳ್‌ಪುರ ಪೊಲೀಸ್ ಠಾಣೆಯ ಆಗಿನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ), ಬಿಜೆಪಿ ಶಾಸಕ ಮೋಹನ್ ಸಿಂಗ್ ಬಿಶ್ತ್ ಮತ್ತು ಪಕ್ಷದ ಮಾಜಿ ಶಾಸಕ ಜಗದೀಶ್ ಪ್ರಧಾನ್ ಸೇರಿದಂತೆ ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಪುರಸ್ಕರಿಸಿದ್ದಾರೆ.
2020ರ ಫೆಬ್ರವರಿ 24 ಮತ್ತು 26ರ ನಡುವೆ ಈಶಾನ್ಯ ದೆಹಲಿಯಲ್ಲಿ ಕೋಮು ಹಿಂಸಾಚಾರ ನಡೆದಿತ್ತು. ಇದರಲ್ಲಿ 53 ಜನರು ಸಾವನ್ನಪ್ಪಿದ್ದರು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಮತ್ತು ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು.
ಈ ವರ್ಷದ ಫೆಬ್ರವರಿಯಲ್ಲಿ, ದೆಹಲಿ ಪೊಲೀಸರು ದೂರುದಾರರ ಅರ್ಜಿಯನ್ನು ವಿರೋಧಿಸಿದ್ದರು. ಮಿಶ್ರಾ ಅವರನ್ನು ಈ ವಿಷಯದಲ್ಲಿ ಸಿಲುಕಿಸಲಾಗುತ್ತಿದೆ. 2020ರ ಈಶಾನ್ಯ ದೆಹಲಿ ಗಲಭೆಯಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿದ್ದರು.
ಗಲಭೆಯ ಹಿಂದಿನ ಪಿತೂರಿಯಲ್ಲಿ ಮಿಶ್ರಾ ಅವರ ಪಾತ್ರದ ಬಗ್ಗೆ ಈಗಾಗಲೇ ತನಿಖೆ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಕಪಿಲ್ ಮಿಶ್ರಾ ಮತ್ತು ಇತರರು ಈಶಾನ್ಯ ದೆಹಲಿಯ ಕರ್ದಂಪುರಿಯಲ್ಲಿ ರಸ್ತೆ ತಡೆದು ವ್ಯಾಪಾರಸ್ಥರ ತಳ್ಳುಗಾಡಿಗಳನ್ನು ನಾಶಪಡಿಸಿರುವುದನ್ನು ನೋಡಿರುವುದಾಗಿ ಅರ್ಜಿದಾರ ಇಲ್ಯಾಸ್ ಅವರು ಹೇಳಿದ್ದರು. ಈಶಾನ್ಯ ದೆಹಲಿಯ ಆಗಿನ ಪೊಲೀಸ್ ಆಯುಕ್ತರು (ಡಿಸಿಪಿ) ಮಿಶ್ರಾ ಪಕ್ಕದಲ್ಲಿ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ನಿಂತು ಪ್ರತಿಭಟನಾಕಾರರಿಗೆ ಪ್ರದೇಶವನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದರು.
ಬಿಜೆಪಿ ನಾಯಕರಾದ ಪ್ರಧಾನ್ ಮತ್ತು ಬಿಶ್ತ್ ಅವರೊಂದಿಗೆ ದಯಾಳ್‌ಪುರದ ಎಸ್‌ಎಚ್‌ಒ ಈಶಾನ್ಯ ದೆಹಲಿಯಾದ್ಯಂತ ಮಸೀದಿಗಳನ್ನು ಧ್ವಂಸ ಮಾಡಿದ್ದನ್ನು ತಾನು ನೋಡಿರುವುದಾಗಿ ವಿವರಿಸಿದ್ದರು.
2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಜನತಾ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿಎ) ಅಡಿಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಶ್ರಾ ವಿರುದ್ಧದ ಆರೋಪದ ಕುರಿತು ವಾದಗಳನ್ನು ಆಲಿಸಲು ಪ್ರಾರಂಭಿಸುವುದಾಗಿ ಮಾರ್ಚ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿಳಿಸಿದೆ.


