ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ವರದಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ತಳ್ಳಿಹಾಕಿದ್ದು, ಇಂತಹ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಯತ್ನಾಳ್ ಅವರ ಸಿದ್ಧಾಂತ ಒಂದೇ ಆಗಿದ್ದು ಅದು ಕಾಂಗ್ರೆಸ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅವರು ಸುಮಾರು ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬಿಜೆಪಿಗೆ ಮತ್ತೆ ಮರಳಲಿದ್ದಾರೆ ಎಂದು ಜಾರಕಿಹೊಳಿ ಹೇಳಿದ್ದಾರೆ. ಯತ್ನಾಳ್ ಬಿಜೆಪಿಯಿಂದ ಉಚ್ಚಾಟಿತರಾದ ನಂತರ ಕೆಲವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರಬಹುದು, ಆದರೆ ಅಷ್ಟಕ್ಕೆ ಅವರು ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಅರ್ಥವಲ್ಲ ಎಂದು ಜಾರಕಿಹೊಳಿ ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದೆಯೂ ಯತ್ನಾಳ್ ಬಿಜೆಪಿ ತೊರೆದು ಮತ್ತೆ ಬಿಜೆಪಿ ಸೇರಿದ್ದರು, ಅವರಿಗೆ ಕಾಂಗ್ರೆಸ್ ಸಿದ್ಧಾಂತ ಸರಿಹೊಂದುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.
ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಸಭೆ ನಡೆಸಿದ್ದೆ ಎಂದು ಜಾರಕಿಹೊಳಿ ಹೇಳಿದ್ದಾರೆ. ಈ ವೇಳೆ ಅವರು ಕೇಂದ್ರ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿದ್ದ ಊಹಾಪೋಹಗಳಿಗೂ ಉತ್ತರಿಸಿದ್ದಾರೆ.
“ಬೆಳಗಾವಿ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಕೈಗಾರಿಕೆಗಳನ್ನು ಮಂಜೂರು ಮಾಡುವಂತೆ ವಿನಂತಿಸಲು ನಾನು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದೆ. ಬೆಳಗಾವಿ ಬೆಂಗಳೂರಿನಂತೆಯೇ ಅಭಿವೃದ್ಧಿ ಹೊಂದಬೇಕೆಂದು ನಾವು ಬಯಸುತ್ತೇವೆ. ಕುಮಾರಸ್ವಾಮಿ ಅವರೊಂದಿಗಿನ ಈ ಭೇಟಿಯಲ್ಲಿ ರಾಜಕೀಯದ ಬಗ್ಗೆ ಚರ್ಚಿಸಲಾಗಿಲ್ಲ ಮತ್ತು ದೇವೇಗೌಡರೊಂದಿಗಿನ ಭೇಟಿ ಕಾಕತಾಳೀಯವಾಗಿತ್ತು” ಎಂದು ಅವರು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಭೇಟಿಯು ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ಚರ್ಚಿಸಲು ಅಲ್ಲ ಎಂದು ಅವರು ಹೇಳಿದ್ದಾರೆ. “ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ” ಎಂದು ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ ಮತ್ತು ಇತರ ತೆರಿಗೆಗಳ ಹೆಚ್ಚಳದ ವಿರುದ್ಧ ಬಿಜೆಪಿ ಪ್ರತಿಭಟನೆ ಘೋಷಿಸಿರುವ ಬಗ್ಗೆ ಉತ್ತರಿಸಿದ ಅವರು, “ಕರ್ನಾಟಕ ಹಾಲು ಒಕ್ಕೂಟದಿಂದ ಪ್ರಸ್ತಾವನೆ ಬಂದ ನಂತರ ಹಾಲಿನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಜೊತೆಗೆ ಇಂತಹ ಹೆಚ್ಚಳ ಇದು ಮೊದಲ ಬಾರಿಗೆ ಮಾಡಿರುವುದಲ್ಲ. ವಿವಿಧ ಸರ್ಕಾರಗಳ ಅವಧಿಯಲ್ಲಿ, ತೆರಿಗೆಗಳನ್ನು ಹೆಚ್ಚಿಸಲಾಯಿತು ಮತ್ತು ಹಾಲಿನ ಬೆಲೆಗಳನ್ನು ಸಹ ಹೆಚ್ಚಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಈ ಪ್ರತಿಭಟನೆಗಳು ಅನಗತ್ಯವಾಗಿದ್ದು, ಇದನ್ನೆ ಅನ್ವಯಿಸಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ ಟೋಲ್ ಏರಿಕೆಯ ವಿರುದ್ಧ ಅವರು ಪ್ರತಿಭಟನೆ ನಡೆಸಬೇಕು ಎಂದು ಜಾರಕಿಹೊಳಿ ಹೇಳಿದ್ದಾರೆ.


