ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ (ಹೆಚ್‌ಒಯು) ಜಮೀನಿಗೆ ಹೊಂದಿಕೊಂಡಿರುವ ‘ಕಾಂಚ ಗಚಿಬೌಲಿ’ಯ 400 ಎಕರೆ ಅರಣ್ಯ ನಾಶ ವಿವಾದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತೆಲಂಗಾಣ ಸರ್ಕಾರ ಗುರುವಾರ (ಏ.3) ಮೂವರು ಸಚಿವರ ಸಮಿತಿ ರಚಿಸಿದೆ.
ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ, ಕೈಗಾರಿಕೆ ಮತ್ತು ಹಾಗೂ ಐಟಿ ಸಚಿವ ಡಿ. ಶ್ರೀಧರ್ ಬಾಬು ಮತ್ತು ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಸಮಿತಿಯಲ್ಲಿದ್ದಾರೆ.
ಈ ಸಮಿತಿಯು ಭೂ ವಿವಾದವನ್ನು ಪರಿಹರಿಸಲು ಹೈದರಾಬಾದ್ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ, ಜಂಟಿ ಕ್ರಿಯಾ ಸಮಿತಿ (ಜೆಎಸಿ) ಮತ್ತು ನಾಗರಿಕ ಗುಂಪುಗಳು, ವಿದ್ಯಾರ್ಥಿಗಳ ನಿಯೋಗ ಸೇರಿದಂತೆ ಈ ಪ್ರಕರಣದ ಎಲ್ಲಾ ಪಕ್ಷಕಾರರೊಂದಿಗೆ ಸಮಾಲೋಚನೆ ನಡೆಸಲಿದೆ.
ವಿವಾದಿತ ಭೂಮಿಯಲ್ಲಿ ಮರಗಳ ತೆರವು ಕಾರ್ಯಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಮುಂದಿನ ಆದೇಶದವರೆಗೆ ಮರಗಳನ್ನು ಉರುಳಿಸದಂತೆ ನೋಡಿಕೊಳ್ಳಲು ತೆಲಂಗಾಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ತೆಲಂಗಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ (ನ್ಯಾಯಾಂಗ) ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಸರ್ಕಾರ ಅರಣ್ಯ ನಾಶ ಮುಂದುವರೆಸಬಾರದು ಎಂದು ಹೈದರಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.
ಪ್ರತಿಪಕ್ಷಗಳಾದ ಬಿಆರ್‌ಎಸ್, ಬಿಜೆಪಿ, ಸಿಪಿಐ, ಸಿಪಿಐ-ಎಂ ಮತ್ತು ಅವುಗಳಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿ ಗುಂಪುಗಳು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಿವೆ.
ಕಳೆದ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಸಚಿವರಾದ ಮಲ್ಲು ಭಟ್ಟಿ ವಿಕ್ರಮಾರ್ಕ, ಶ್ರೀಧರ್ ಬಾಬು ಮತ್ತು ಶ್ರೀನಿವಾಸ್ ರೆಡ್ಡಿ, “ರಾಜಕೀಯ ಲಾಭಕ್ಕಾಗಿ ಜಮೀನಿನ ಬಗ್ಗೆ ಪ್ರತಿಪಕ್ಷಗಳಾದ ಬಿಆರ್‌ಎಸ್ ಮತ್ತು ಬಿಜೆಪಿ ಸುಳ್ಳುಗಳನ್ನು ಹರಡುತ್ತಿವೆ” ಎಂದು ವಾಗ್ದಾಳಿ ನಡೆಸಿದ್ದರು. ವಿರೋಧ ಪಕ್ಷಗಳ ಮಾತು ಕೇಳಿ ದಾರಿ ತಪ್ಪದಂತೆ ವಿದ್ಯಾರ್ಥಿಗಳಲ್ಲಿ ಅವರು ಮನವಿ ಮಾಡಿದ್ದರು.
ಸರ್ಕಾರಿ ಕೆಲಸಗಳು ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದರು.
ವಕ್ಫ್ ಮಸೂದೆ ವಿರುದ್ಧ ವಿಜಯ್ ನೇತೃತ್ವದ ಟಿವಿಕೆ ಪ್ರತಿಭಟನೆ; ಕಾನೂನು ಸಮರದ ಎಚ್ಚರಿಕೆ


