ಅಲಹಾಬಾದ್: ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹೊರಡಿಸಲಾದ ಸಮನ್ಸ್ ಆದೇಶದ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
2022ರ ಭಾರತ್ ಜೋಡೋ ಯಾತ್ರೆಯ ರ್ಯಾಲಿಯಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 397 (ಕೆಳ ನ್ಯಾಯಾಲಯದ ದಾಖಲೆಗಳ ಪರಿಶೀಲನೆ) ಅಡಿಯಲ್ಲಿ ಗಾಂಧಿಯವರು ಸೆಷನ್ಸ್ ನ್ಯಾಯಾಧೀಶರನ್ನು ಸಂಪರ್ಕಿಸಲು ಅವಕಾಶವಿದೆ ಎಂದು ಗಮನಿಸಿದ ನಂತರ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಗಾಂಧಿಯವರ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದರು.
ವಕೀಲರಾದ ಪ್ರಾಂಶು ಅಗರ್ವಾಲ್, ಮೊಹಮ್ಮದ್ ಸಮರ್ ಅನ್ಸಾರಿ ಮತ್ತು ಮೊಹಮ್ಮದ್ ಯಾಸಿರ್ ಅಬ್ಬಾಸಿ ರಾಹುಲ್ ಗಾಂಧಿ ಪರವಾಗಿ ವಾದ ಮಂಡಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಕ್ನೋ ಸೆಷನ್ಸ್ ನ್ಯಾಯಾಲಯವು ಸಮನ್ಸ್ ಆದೇಶವನ್ನು ಅಂಗೀಕರಿಸಿತು.
ಆದೇಶದಲ್ಲಿ ಸಾವರ್ಕರ್ ಪಿಂಚಣಿ ಪಡೆಯುತ್ತಿದ್ದ ಬ್ರಿಟಿಷ್ ಸೇವಕ ಎಂದು ಗಾಂಧಿಯವರು ಹೇಳಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ಗಮನಿಸಿದೆ. ಈ ಹೇಳಿಕೆಗಳು ಸಮಾಜದಲ್ಲಿ ದ್ವೇಷ ಮತ್ತು ಕೆಟ್ಟಭಾವನೆಯನ್ನು ಹರಡಿವೆ ಎಂದು ವಿಚಾರಣಾ ನ್ಯಾಯಾಲಯ ಗಮನಿಸಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯವು ಗಾಂಧಿಯವರ ವಿರುದ್ಧ ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ಕಂಡುಕೊಂಡು ಅವರು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ. ತರುವಾಯ, ಗಾಂಧಿಯವರು ಸಮನ್ಸ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ವಕೀಲ ನೃಪೇಂದ್ರ ಪಾಂಡೆಯವರು ಅವರ ವಿರುದ್ಧ ದೂರು ದಾಖಲಿಸಿದ ನಂತರ ಗಾಂಧಿಯವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (ಸಾರ್ವಜನಿಕ ದುಷ್ಕೃತ್ಯ) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸಾವರ್ಕರ್ ಅವರ ಕುರಿತಾದ ಹೇಳಿಕೆಗಳಿಗಾಗಿ ಗಾಂಧಿಯವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಪಾಂಡೆ ಆರಂಭದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಅವರನ್ನು ಅರ್ಜಿಯೊಂದಿಗೆ ಸಂಪರ್ಕಿಸಿದ್ದರು.
ನವೆಂಬರ್ 17, 2022ರಂದು ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ಬ್ರಿಟಿಷರೊಂದಿಗೆ ಸಹಯೋಗಿ ಎಂದು ಉಲ್ಲೇಖಿಸಿದಾಗ ಮತ್ತು ಸರ್ವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ ಎಂದು ನೀಡಿದ ಹೇಳಿಕೆಗಳ ಬಗ್ಗೆ ಪಾಂಡೆ ದೂರು ಸಲ್ಲಿಸಿದ್ದಾರೆ. ಸಮಾಜದಲ್ಲಿ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ಪಾಂಡೆ ಪ್ರತಿಪಾದಿಸಿದರು.
ಮಹಾತ್ಮಾ ಗಾಂಧಿಯವರು ಈ ಹಿಂದೆ ಸಾವರ್ಕರ್ ಅವರನ್ನು ದೇಶಭಕ್ತ ಎಂದು ಗುರುತಿಸಿದ್ದರು ಎಂದು ಪಾಂಡೆ ಅವರು ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದಾರೆ. ಜೂನ್ 2023ರಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಂಬರೀಶ್ ಕುಮಾರ್ ಶ್ರೀವಾಸ್ತವ ಅವರು ಪಾಂಡೆ ಅವರ ದೂರನ್ನು ವಜಾಗೊಳಿಸಿದರು, ಇದರಿಂದಾಗಿ ಪಾಂಡೆ ಸೆಷನ್ಸ್ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿದರು.
ನಂತರ ಸೆಷನ್ಸ್ ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿತು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿಷಯವನ್ನು ಹಿಂತಿರುಗಿಸಿತು, ಅದು ನಂತರ ಗಾಂಧಿಗೆ ಸಮನ್ಸ್ ನೀಡಿತು. ಇತ್ತೀಚೆಗೆ ಲಕ್ನೋ ನ್ಯಾಯಾಲಯವು ಪ್ರಕರಣದಲ್ಲಿ ಗೈರು ಹಾಜರಾಗಿದ್ದಕ್ಕಾಗಿ ರಾಹುಲ್ ಗಾಂಧಿಯ ಮೇಲೆ 200 ರೂ. ದಂಡವನ್ನು ವಿಧಿಸಿತು.
ಸಂಭಾಲ್ | ಶಾಹಿ ಮಸೀದಿಯಲ್ಲಿ ಹಿಂದೂ ಆಚರಣೆಗೆ ಯತ್ನಿಸಿದ ಮೂವರು ದುಷ್ಕರ್ಮಿಗಳ ಬಂಧನ


