ಸೌಜನ್ಯ ಅತ್ಯಾಚಾರ, ಕೊಲೆ ಖಂಡಿಸಿ ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಿ ಪ್ರತಿಭಟನೆಗೆ ಹೈಕೋರ್ಟ್ ಶುಕ್ರವಾರ (ಏ.4) ತಾತ್ಕಾಲಿಕ ತಡೆ ನೀಡಿದೆ.
ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಮುಂದಿನ ವಿಚಾರಣೆಯವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದೆ ಎಂದು barandbench.com ವರದಿ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿರುವ ಕುರಿತಂತೆ ಸಂದೇಶಗಳನ್ನು ಪೀಠಕ್ಕೆ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯ ಈ ಹಿಂದೆ ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಗಳ ಪರವಾಗಿ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ. ಅಲ್ಲದೆ, ಬಲವಂತವಾಗಿ ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.
ಈ ಅಂಶ ದಾಖಲಿಸಿಕೊಂಡ ಪೀಠ, ಪ್ರತಿಭಟನೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಅಲ್ಲದೇ, ಪ್ರತಿಭಟನೆಯ ಆಯೋಜಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ ಎಂದು ವರದಿ ವಿವರಿಸಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿಯನ್ನು ನ್ಯಾಯಾಲಯ ನಿರಪರಾಧಿ ಎಂದು ಘೋಷಣೆ ಮಾಡಿದೆ. ಹಾಗಾಗಿ, ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ವಿವಿಧ ಸಂಘಟನೆಗಳು ಮುಂದಾಗಿದ್ದವು ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ಸೌಜನ್ಯ ಪರ ಹೋರಾಟದ ಸಮಾಲೋಚನಾ ಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಶಾಂತಿಯುತ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗದು ಎಂದು ಆದೇಶಿಸಿತ್ತು.


