ಕೇರಳದ ಕೊಚ್ಚಿಯಲ್ಲಿರುವ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯ ಉದ್ಯೋಗಿಯೊಬ್ಬರು ಟಾರ್ಗೆಟ್ ತಲುಪಲಿಲ್ಲ ಎಂಬ ಕಾರಣಕ್ಕೆ ವ್ಯವಸ್ಥಾಪಕನೊಬ್ಬ ಅಮಾನವೀಯವಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಸಂತ್ರಸ್ತನ ಕೊರಳಿಗೆ ಸರಪಳಿಯಿಂದ ಬಂಧಿಸಿ, ನಾಯಿಗಳಂತೆ ಮೊಣಕಾಲುಗಳ ಮೇಲೆ ನಡೆಯುವಂತೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ಕಂಪನಿಯ ಮಾಜಿ ವ್ಯವಸ್ಥಾಪಕರೊಬ್ಬರು ಕಂಪನಿಯ ಮಾಲೀಕರೊಂದಿಗೆ ಅಸಮಾಧಾನ ಹೊಂದಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದ್ದ ಸಿಬ್ಬಂದಿಗೆ ಶಿಕ್ಷೆ ನೀಡಿ ವೀಡಿಯೊ ಚಿತ್ರೀಕರಿಸಿಕೊಂಡಿದ್ದಾನೆ. ತನ್ನ ಕೃತ್ಯ ಸಮರ್ಥಿಸಿಕೊಂಡಿದ್ದ ಆತ ಇದು ತರಬೇತಿಯ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾನೆ.
ವ್ಯಕ್ತಿಯ ಕುತ್ತಿಗೆಗೆ ಚೈನ್ ಕಟ್ಟಿದ್ದು, ಮತ್ತೋರ್ವ ವ್ಯಕ್ತಿ ನಾಯಿಯಂತೆ ಮೊಣಕಾಲುಗಳ ಮೇಲೆ ನಡೆಯುವಂತೆ ಮಾಡುವುದನ್ನು ತೋರಿಸುವ ವೈರಲ್ ವೀಡಿಯೊವನ್ನು ಸುಮಾರು ನಾಲ್ಕು ತಿಂಗಳ ಹಿಂದೆ ಚಿತ್ರೀಕರಿಸಲಾಗಿದೆ. ಆರೋಪಿತ ವ್ಯವಸ್ಥಾಪಕ ಈಗ ಕಂಪನಿಯನ್ನು ತೊರೆದಿದ್ದಾನೆ ಎಂದು ತಿಳಿದುಬಂದಿದೆ.
ಮತ್ತೊಂದು ವೀಡಿಯೊದಲ್ಲಿ ಶಿಕ್ಷೆಯಾಗಿ ನೌಕರರನ್ನು ಬಲವಂತವಾಗಿ ವಿವಸ್ತ್ರಗೊಳಿಸುವುದನ್ನು ತೋರಿಸಲಾಗಿದೆ.
ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ರಾಜ್ಯ ಕಾರ್ಮಿಕ ಇಲಾಖೆಯು ಕೆಲಸದ ಸ್ಥಳದಲ್ಲಿ ನಡೆದ ಅಮಾನವೀಯ ಕಿರುಕುಳದ ಬಗ್ಗೆ ತನಿಖೆಗೆ ಆದೇಶಿಸಿತು. ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಕೋರಿತು.
ವೈರಲ್ ವೀಡಿಯೊಗಳಲ್ಲಿ ಕಂಡುಬರುವ ನೌಕರರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಘಟನೆಗೆ ಮಾಜಿ ವ್ಯವಸ್ಥಾಪಕರನ್ನು ದೂಷಿಸಿದ್ದಾರೆ.
ಸಂಸ್ಥೆಯ ಉದ್ಯೋಗಿಗಳೆಂದು ನಂಬಲಾದ ಕೆಲವು ಜನರು ಸ್ಥಳೀಯ ಟಿವಿ ಚಾನೆಲ್‌ಗೆ ನೀಡಿದ ಹೇಳಿಕೆಯಲ್ಲಿ, ಟಾರ್ಗೆಟ್ ಸಾಧಿಸುವಲ್ಲಿ ವಿಫಲರಾದವರಿಗೆ ಆಡಳಿತ ಮಂಡಳಿಯು ಇಂತಹ ಶಿಕ್ಷೆಗಳನ್ನು ವಿಧಿಸುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಕಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ನಡೆದಿದೆ; ಅಪರಾಧವು ಹತ್ತಿರದ ಪೆರುಂಬವೂರಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ದೃಶ್ಯಗಳಲ್ಲಿ ಕಿರುಕುಳ ಮತ್ತು ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಲಾದ ವ್ಯಕ್ತಿ ಮಾತನಾಡಿ, ದೃಶ್ಯಗಳಲ್ಲಿ ಚಿತ್ರಿಸಿದ್ದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಸಂಸ್ಥೆಯಲ್ಲಿ ಯಾವುದೇ ಕಿರುಕುಳ ಇಲ್ಲ ಎಂದಿದ್ದಾರೆ.
“ನಾನು ಇನ್ನೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ದೃಶ್ಯಗಳು ಕೆಲವು ತಿಂಗಳ ಹಿಂದಿನವು ಮತ್ತು ಆಗ ಸಂಸ್ಥೆಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬಲವಂತವಾಗಿ ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಆಡಳಿತ ಮಂಡಳಿಯು ರಾಜೀನಾಮೆ ನೀಡುವಂತೆ ಕೇಳಿಕೊಂಡಿತು. ಅವರು ಈಗ ಸಂಸ್ಥೆಯ ಮಾಲೀಕರನ್ನು ಕೆಣಕಲು ಈ ದೃಶ್ಯಗಳನ್ನು ಬಳಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಅವರು ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅದೇ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಈ ದೃಶ್ಯಗಳನ್ನು ‘ಆಘಾತಕಾರಿ’ ಎಂದು ಬಣ್ಣಿಸಿದ್ದಾರೆ. ಕೇರಳದಂತಹ ರಾಜ್ಯದಲ್ಲಿ ಇದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ, ತನಿಖೆ ನಡೆಸಿದ ನಂತರ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದೇನೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಹೈಕೋರ್ಟ್ ವಕೀಲ ಕುಲತ್ತೂರ್ ಜೈಸಿಂಗ್ ಅವರ ದೂರಿನ ಆಧಾರದ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದೆ.
ಈ ಮಧ್ಯೆ, ಕೇರಳ ರಾಜ್ಯ ಯುವ ಆಯೋಗವು ಸಹ ಮಧ್ಯಪ್ರವೇಶಿಸಿ ಕಿರುಕುಳ ಘಟನೆಯ ಬಗ್ಗೆ ಸ್ವತಃ ಪ್ರಕರಣ ದಾಖಲಿಸಿದೆ. ಈ ಸಂಬಂಧ ವರದಿ ಸಲ್ಲಿಸುವಂತೆ ಸಮಿತಿಯು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ನಾಗರಿಕ ಮತ್ತು ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ವೀಕಾರಾರ್ಹವಲ್ಲದ ಇಂತಹ ಪದ್ಧತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ಎಂ ಶಾಜರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


