ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ‘ಸಂತ್ರಸ್ತೆಯೇ ಅಪಾಯ ತಂದುಕೊಂಡಳು’ ಎಂಬ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ಅನುಚಿತ ಹೇಳಿಕೆಗಳನ್ನು ನೀಡದಂತೆ ನ್ಯಾಯಾಧೀಶರಿಗೆ ಮಂಗಳವಾರ ಎಚ್ಚರಿಕೆ ನೀಡಿದೆ.
ಮಾರ್ಚ್ 17ರಂದು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ “ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಅಲ್ಲ” ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.
ಮಂಗಳವಾರ ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮೇಲಿನ ಹೇಳಿಕೆಯನ್ನು ನೀಡಿದೆ.
ಪ್ರತಿಯೊಂದು ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳಿಗೆ ಜಾಮೀನು ನೀಡುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟದ್ದು. ಆದರೆ, ದೂರುದಾರರ ವಿರುದ್ಧ ಇಂತಹ ಅನಗತ್ಯ ಅವಲೋಕನಗಳು ಅಥವಾ ಟೀಕೆಗಳು ಮಾಡಬಾರದು ಎಂದು ಪೀಠ ಹೇಳಿದೆ.
ಸಂತ್ರಸ್ತೆ ಮದ್ಯಪಾನ ಮಾಡಿ ಸ್ವತಃ ಆರೋಪಿಯ ಮನೆಗೆ ಹೋಗುವ ಮೂಲಕ ತಾನೇ ಅಪಾಯವನ್ನು ತಂದೊಡ್ಡಿಕೊಂಡಿದ್ದಾರೆ ಎಂದು ಹೇಳಿದ್ದ ಅಲಹಾಬಾದ್ ಹೈಕೋರ್ಟ್, ಏಪ್ರಿಲ್ 11ರಂದು ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡಿತ್ತು.
ಅಮಿಟಿ ವಿಶ್ವವಿದ್ಯಾಲಯದ ನೋಯ್ಡಾ ಕ್ಯಾಂಪಸ್‌ನಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿಯನ್ನು ಡಿಸೆಂಬರ್ 2024ರಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಆತ ಜೈಲಿನಲ್ಲಿದ್ದರು.
ಮಾರ್ಚ್ 17ರಂದು ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರು “ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಅಪರಾಧ” ಎಂದು ಹೇಳಿದ್ದರು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಪವನ್ ಮತ್ತು ಆಕಾಶ್ 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದಿದ್ದಾರೆ. ನಂತರ, ಅವರಲ್ಲಿ ಒಬ್ಬ ಆಕೆಯ ಪೈಜಾಮದ ದಾರವನ್ನು ಎಳೆದು ಕಲ್ವರ್ಟ್ ಕೆಳಗೆ ಎಳೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 18 (ಅಪರಾಧ ಎಸಗಲು ಯತ್ನಿಸಿದ್ದಕ್ಕಾಗಿ ಶಿಕ್ಷೆ) ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ಮೂಲತಃ ಸಮನ್ಸ್ ನೀಡಲಾಗಿದ್ದ ಇಬ್ಬರು ಆರೋಪಿಗಳ ವಿರುದ್ಧದ ಆರೋಪಗಳನ್ನು ಹೈಕೋರ್ಟ್ ಬದಲಾಯಿಸಿತ್ತು.
ಬದಲಾಗಿ ಹೈಕೋರ್ಟ್ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9/10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆ ನಡೆಸಬೇಕೆಂದು ನಿರ್ದೇಶಿಸಿತ್ತು.
ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಇಡಿ


