ನಾಗ್ಪುರ ನೈಋತ್ಯ ವಿಧಾನಸಭಾ ಕ್ಷೇತ್ರದಿಂದ 2024ರಲ್ಲಿ ಗೆದ್ದಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ (ಏ.17) ಸಮನ್ಸ್ ಜಾರಿ ಮಾಡಿದೆ.
ಚುನಾವಣೆಯಲ್ಲಿ ಫಡ್ನವೀಸ್ ವಿರುದ್ಧ 39,710 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಫುಲ್ಲ ವಿನೋದರಾವ್ ಗುಡಾಧೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಕಾರ್ಯವಿಧಾನಗಳಲ್ಲಿ ಲೋಪಗಳು ಸಂಭವಿಸಿವೆ ಎಂದು ಆರೋಪಿಸಿರುವ ಗುಡಾಧೆ ಅವರು, ಫಡ್ನವಿಸ್ ಗೆಲುವನ್ನು ಅನೂರ್ಜಿತ ಎಂದು ಘೋಷಿಸಲು ನ್ಯಾಯಾಲಯವನ್ನು ಕೋರಿದ್ದಾರೆ.
“ನ್ಯಾಯಮೂರ್ತಿ ಪ್ರವೀಣ್ ಪಾಟೀಲ್ ಅವರ ಪೀಠವು ಮೇ 8ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಎಂ ಫಡ್ನವೀಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ” ಎಂದು ಗುಡಾಧೆ ಪರ ವಕೀಲ ಪವನ್ ದಹತ್ ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಗುಡಾಧೆಯವರ ಕಾನೂನು ತಂಡದ ಪ್ರಕಾರ, ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಹಲವಾರು ಕಡ್ಡಾಯ ನಿಯಮಗಳನ್ನು ಪಾಲಿಸಲಾಗಿಲ್ಲ.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳಲ್ಲಿ 230 ಅನ್ನು ಗೆದ್ದು, ದೇವೇಂದ್ರ ಫಡ್ನವಿಸ್ ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.
ಚುನಾವಣಾ ತಕರಾರು ಅರ್ಜಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಾದ ಮೋಹನ್ ಮೇಟ್ (ನಾಗ್ಪುರ ಪಶ್ಚಿಮ) ಮತ್ತು ಕೀರ್ತಿಕುಮಾರ್ ಭಂಗ್ಡಿಯಾ (ಚಿಮೂರ್, ಚಂದ್ರಾಪುರ ಜಿಲ್ಲೆ) ಅವರಿಗೂ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರುವಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಮನವಿ


