ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಕಾಶ್ಮೀರಿಗಳು ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪಿಸಿದ್ದಾರೆ ಎಂದು ರಾಜ್ಯದ ಬಿಜೆಪಿ ವಿಪಕ್ಷ ನಾಯಕ ಸುವೆಂಧು ಅಧಿಕಾರಿ ಸುಳ್ಳು ಹೇಳುವ ಮೂಲಕ ರಾಜ್ಯದಲ್ಲಿ ಹಿಂಸಾಚಾರಕ್ಕೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಅದಾಗ್ಯೂ, ಪೊಲೀಸರು ಅವರ ಹೇಳಿಕೆಯ ಬಗ್ಗೆಗಿನ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಬಂಗಾಳದಲ್ಲಿ ಕಾಶ್ಮೀರಿಗಳು
ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ಬರುಯಿಪುರದಲ್ಲಿ ವಾಸಿಸುವ ಇಬ್ಬರು ಕಾಶ್ಮೀರಿ ವ್ಯಕ್ತಿಗಳು ತಮ್ಮ ಮನೆಯ ಛಾವಣಿಯ ಮೇಲೆ “ನ್ಯಾನೋಬೀಮ್ 2AC ಕಾಂಪ್ಯಾಕ್ಟ್ ಮತ್ತು ಹೈ-ಪರ್ಫಾರ್ಮೆನ್ಸ್ ವೈರ್‌ಲೆಸ್ ನೆಟ್‌ವರ್ಕ್ ಬ್ರಿಡ್ಜ್” ಅನ್ನು ಸ್ಥಾಪಿಸಿದ್ದಾರೆ ಎಂದು ಬಿಜೆಪಿ ಶಾಸಕ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಗುರುವಾರ ಆರೋಪಿಸಿದ್ದಾರೆ.
ಅದಾಗ್ಯೂ, ಬರುಯಿಪುರದ ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಆರೋಪಿತ ಇಬ್ಬರು ವ್ಯಕ್ತಿಗಳು ಮಧ್ಯಪ್ರದೇಶದ ಎಂಜಿನಿಯರ್‌ಗಳಾಗಿದ್ದು, ಅವರ ಛಾವಣಿಯ ಮೇಲೆ ಇರುವ ಸಾಧನವು ಇಂಟರ್ನೆಟ್ ಸಂಪರ್ಕಕ್ಕಾಗಿ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸುವೆಂಧು ಅಧಿಕಾರಿ, “ಇಬ್ಬರು ಕಾಶ್ಮೀರಿ ವ್ಯಕ್ತಿಗಳು… ಮೇಲ್ಛಾವಣಿಯಲ್ಲಿ ನ್ಯಾನೋಬೀಮ್ 2AC ಕಾಂಪ್ಯಾಕ್ಟ್ ಮತ್ತು ಹೈ-ಪರ್ಫಾರ್ಮೆನ್ಸ್ ವೈರ್‌ಲೆಸ್ ನೆಟ್‌ವರ್ಕ್ ಬ್ರಿಡ್ಜ್ ಅನ್ನು ಸ್ಥಾಪಿಸಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅದನ್ನು ಹೆಚ್ಚಿನ ವೇಗದ, ದೂರದ ವೈರ್‌ಲೆಸ್ ಸಂಪರ್ಕಕ್ಕಾಗಿ ವಿನ್ಯಾಸಗೊಳಿಸಲಾಗಿದೆ.” ಎಂದು ಅವರು ಹೇಳಿದ್ದಾರೆ.
ಇಂತಹ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಪರಿಶೀಲಿಸುವಂತೆ ಅವರು ರಾಜ್ಯದ ಪೊಲೀಸ್ ಉಪ ಜನರಲ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ.
ಸುವೆಂಧು ಅಧಿಕಾರಿಯ ಹೇಳಿಕೆಯನ್ನು ರಾಜ್ಯದ ಸ್ಪೀಕರ್ ಬಿಮನ್ ಬ್ಯಾನರ್ಜಿ ಟೀಕಿಸಿದ್ದು, ಅವರು “ಹಿಂಸಾಚಾರವನ್ನು ಪ್ರಚೋದಿಸಲು” ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಕಾಶ್ಮೀರದಲ್ಲಿ ನಡೆದ ಘಟನೆಯ ನಂತರ ನಾವು ತುಂಬಾ ದುಃಖಿತರಾಗಿದ್ದೇವೆ. ಈ ಸಮಯದಲ್ಲಿ, ನಾವು ನಮ್ಮ ಶಾಂತತೆ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು.” ಎಂದು ಅವರು ಹೇಳಿದ್ದಾರೆ.
“ಸುವೆಂಧು ಅಧಿಕಾರಿ ಪಾಕಿಸ್ತಾನ ಧ್ವಜವನ್ನು ಸುಟ್ಟು ಹಿಂದೂ ಧರ್ಮದ ಬಗ್ಗೆ ಘೋಷಣೆಗಳನ್ನು ಕೂಗಿದ್ದಾರೆ. ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕೂಡಾ ಹಿಂದೂಗಳು ವಾಸಿಸುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ. ಅವರ ಮೇಲೆ ದಾಳಿ ಮಾಡಬಹುದೆ, ಇದು ತುಂಬಾ ದುರದೃಷ್ಟಕರ.” ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮಧ್ಯಪ್ರದೇಶದ ಇಂಜಿನಿಯರ್‌ಗಳು ಸ್ಥಾಪಿಸಿದ ಸಾಧನವನ್ನು ಪರಿಶೀಲಿಸಲಾಗಿದೆ ಎಂದು ಬರುಯಿಪುರ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಎಂಜಿನಿಯರ್‌ಗಳು ಪಶ್ಚಿಮ ಬಂಗಾಳದಲ್ಲಿ ಮೀನು ಕೃಷಿಯ ವ್ಯಾಪಾರದಲ್ಲಿ ಅವಕಾಶಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಅವರ ಫ್ಲಾಟ್‌ನಲ್ಲಿ ಹಲವಾರು ನಾಗರಿಕರು ಬಳಸುತ್ತಿರುವ ಸರಳ ಜಿಯೋಫೈಬರ್ ನೆಟ್‌ವರ್ಕ್ ಇದೆ, ಅದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ಕೆಲವು ಜನರು ರಾಜ್ಯ ಅಥವಾ ಕೇಂದ್ರದ ತನಿಖಾ ಸಂಸ್ಥೆಗೆ ತಿಳಿಸುವ ಬದಲು ಸಾಮಾಜಿಕ ಮಾಧ್ಯಮದ ಮೂಲಕ ಇಂತಹ ತಪ್ಪಾದ ಮತ್ತು ಸಂಭಾವ್ಯವಾಗಿ ಪ್ರಚೋದನಕಾರಿ ಮಾಹಿತಿಯನ್ನು ಪ್ರಸಾರ ಮಾಡುತ್ತಿರುವುದು ದುರದೃಷ್ಟಕರ.” ಎಂದು ಪೊಲೀಸರು ಹೇಳಿದ್ದಾರೆ. ಬಂಗಾಳದಲ್ಲಿ ಕಾಶ್ಮೀರಿಗಳು


