ಪಹಲ್ಗಾಮ್ ದುರಂತದ ನಂತರ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿರುವುದರಿಂದ ದೇಶದ ಏಕತೆಗೆ ಹಾನಿಯಾಗಬಹುದು ಎಂಬ ದೂರಿನ ಮೇರೆಗೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
“ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವೇಳೆ ಬಹುತೇಕ ಪ್ರವಾಸಿಗರೇ ಆಗಿದ್ದ ಸಂತ್ರಸ್ತರ ಧರ್ಮವನ್ನು ಕೇಳಿ, ಅವರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರ ಕೃತ್ಯದಿಂದ ಇಡೀ ದೇಶ ಶೋಕತಪ್ತವಾಗಿದ್ದು, ಈ ದುಷ್ಕರ್ಮಿಗಳ ರಕ್ತಕ್ಕಾಗಿ ಕಾತರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯಕಿ ಹಾಗೂ ಕವಿಯತ್ರಿ ನೇಹಾ ಸಿಂಗ್ ರಾಥೋಡ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಕೆಲವು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಲ್ಲದೆ, ಧರ್ಮವನ್ನಾಧರಿಸಿ, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ಪ್ರಯತ್ನವನ್ನು ಪದೇ ಪದೇ ಮಾಡಿದ್ದಾರೆ” ಎಂದು ದೂರುದಾರ ಅಭಯ್ ಪ್ರತಾಪ್ ಸಿಂಗ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ, ಪೊಲೀಸರು ಜಾನಪದ ಗಾಯಕಿ ನೇಹಾ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.ಇದರಲ್ಲಿ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಪ್ರಯತ್ನಿಸುವುದು, ಸಾರ್ವಜನಿಕ ಶಾಂತಿಯನ್ನು ಕದಡುವುದು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವುದು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124Aನಲ್ಲಿ ನಿರ್ದಿಷ್ಟಪಡಿಸಿದಂತೆ ಬಿಎನ್‌ಎಸ್ ದೇಶದ್ರೋಹವನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಹೊಸ ಕ್ರಿಮಿನಲ್ ಕೋಡ್ ಸೆಕ್ಷನ್ 152ರ ಅಡಿಯಲ್ಲಿ ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಆರೋಪಗಳನ್ನು ದಾಖಲಿಸಲಾಗುತ್ತದೆ.


