ಆಹಾರ ಕಂಪನಿ ಹಮ್ದರ್ದ್‌ನ ಪಾನೀಯ ‘ರೂಹ್ ಅಫ್ಜಾ’ವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದಿಲ್ಲ ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪ್ರಕಟಿಸುವುದಿಲ್ಲ ಎಂದು ಪತಂಜಲಿ ಆಯುರ್ವೇದ ಸಹ-ಸಂಸ್ಥಾಪಕ ರಾಮದೇವ್ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ. ಹಮ್ದರ್ದ್ ರೂಹ್ ಅಫ್ಜಾ
ರಾಮದೇವ್ ತಮ್ಮ ಭರವಸೆಯನ್ನು ದಾಖಲಿಸಲು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಗುರುವಾರ, ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಪೀಠಕ್ಕೆ ಹಮ್ದರ್ದ್ ಬಗ್ಗೆ ಕೋಮುವಾದಿ ಹೇಳಿಕೆ ನೀಡಿ ಮತ್ತೊಂದು ವೀಡಿಯೊವನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಲಾಗಿತ್ತು.
ಹಮ್ದರ್ದ್ ಕಂಪನಿಯನ್ನು ಗುರಿಯಾಗಿಸಿಕೊಂಡು ಹೊಸ ವೀಡಿಯೊವನ್ನು ಪ್ರಕಟಿಸಿದ್ದಕ್ಕಾಗಿ ನ್ಯಾಯಾಲಯವು ರಾಮದೇವ್‌ಗೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ದಿನದ ಹಿಂದೆಯಷ್ಟೆ ಎಚ್ಚರಿಕೆ ನೀಡಿತ್ತು. ಅದಾಗಿ ಒಂದು ದಿನದ ನಂತರ ಕೋರ್ಟ್‌ನಲ್ಲಿ ರಾಮ್‌ದೇವ್ ಮೇಲಿನ ಹೇಳಿಕೆ ನೀಡಿದ್ದಾರೆ.
ಹಮ್ದರ್ದ್‌ನ ಪಾನೀಯ ‘ರೂಹ್ ಅಫ್ಜಾ’ವನ್ನು “ಶರಬತ್ ಜಿಹಾದ್” ಅನ್ನು ಸಂಘಟಿಸಲು ಬಳಸಲಾಗುತ್ತಿದೆ ಎಂದು ರಾಮದೇವ್ ಹೇಳಿಕೊಂಡ ಜಾಹೀರಾತುಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ಏಪ್ರಿಲ್ 22 ರಂದು ಆದೇಶಿಸಿತ್ತು.
ಗುರುವಾರದಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಪೀಠಕ್ಕೆ ಹಮ್ದರ್ದ್ ಬಗ್ಗೆ ಕೋಮುವಾದಿ ಹೇಳಿಕೆ ನೀಡಿ ಮತ್ತೊಂದು ವೀಡಿಯೊವನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಲಾಯಿತು. ಈ ವೇಳೆ ನ್ಯಾಯಾಲಯವು ರಾಮದೇವ್‌ಗೆ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡಿ ಅವರನ್ನು ಸಮನ್ಸ್ ಮಾಡುವುದಾಗಿ ಪೀಠ ಹೇಳಿದೆ.
“ರಾಮ್ ದೇವ್ ತನ್ನದೇ ಆದ ಜಗತ್ತಿನಲ್ಲಿ ಇದ್ದು, ಅವರು ಯಾರ ಮಾತನ್ನೂ ಕೇಳುತ್ತಿಲ್ಲ” ಎಂದು ನ್ಯಾಯಮೂರ್ತಿ ಬನ್ಸಾಲ್ ಕಿಡಿಕಾರಿದ್ದಾರೆ ಎಂದು ಲೈವ್ ಲಾ ಉಲ್ಲೇಖಿಸಿದೆ. ಹೊಸ ವೀಡಿಯೊದ ಆಕ್ಷೇಪಾರ್ಹ ಭಾಗಗಳನ್ನು 24 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲು ರಾಮದೇವ್ ಅವರ ವಕೀಲರು ಒಪ್ಪಿಕೊಂಡಿದ್ದರು.
ಏಪ್ರಿಲ್ 22 ರಂದು, ಹಮ್ದರ್ದ್ ಬಗ್ಗೆ ರಾಮದೇವ್ ಅವರ ಹೇಳಿಕೆ “ಸಮರ್ಥನೀಯವಲ್ಲ” ಎಂದು ಹೈಕೋರ್ಟ್ ಹೇಳಿತ್ತು.
ಏಪ್ರಿಲ್ 3 ರಂದು ಪತಂಜಲಿ ಉತ್ಪನ್ನದ ಜಾಹೀರಾತು ನೀಡುತ್ತಿದ್ದಾಗ, ರಾಮದೇವ್, ಹಮ್ದರ್ದ್ ಅವರ ಹೆಸರನ್ನು ಉಲ್ಲೇಖಿಸದೆ, ಕಂಪನಿಯು ಪಾನೀಯ ಮಾರಾಟದಿಂದ ಬಂದ ಹಣವನ್ನು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ಹೇಳಿಕೊಂಡಿದ್ದರು. ಅವರು ಇದನ್ನು “ಶರ್ಬತ್ ಜಿಹಾದ್” ಎಂದು ಬಣ್ಣಿಸಿದ್ದರು.
ಹಮ್ದರ್ದ್ ವೀಡಿಯೊವನ್ನು ತೆಗೆದುಹಾಕುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಸಮಯದಲ್ಲಿ ರಾಮದೇವ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾನು ಯಾವುದೇ ಕಂಪನಿಯ ಹೆಸರನ್ನು ಹೆಸರಿಸಿಲ್ಲ ಎಂದು ಹೇಳಿದ್ದರು. ನ್ಯಾಯಾಲಯವು ಮೇ 9 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ. ಹಮ್ದರ್ದ್ ರೂಹ್ ಅಫ್ಜಾ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ದೆಹಲಿ ನ್ಯಾಯಾಲಯ ನೋಟಿಸ್
ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ದೆಹಲಿ ನ್ಯಾಯಾಲಯ ನೋಟಿಸ್

