ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ 17 ವರ್ಷದ ಬಾಲಕಿಯೊಬ್ಬಳು ಎರಡು ದಿನಗಳಲ್ಲಿ ನಾಲ್ವರು ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಉಪ ಜೈಲರ್ ಅಪಹರಿಸಿ ಹೋಟೆಲ್ ಕೋಣೆಯಲ್ಲಿ ಬಂಧಿಸಿಟ್ಟಿದ್ದರು ಎಂದು ಆರೋಪಿಸಿದ್ದಾಳೆ. ಈ ಸಂಬಂಧ ಹಲವರ ಬಂಧನವಾಗಿದ್ದು, ತನಿಖೆ ಮುಂದುವರಿದಿದೆ.
ಏಪ್ರಿಲ್ 2ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ, ನಂತರ ಶಹದೋಲ್ ಜಿಲ್ಲೆಯ ಪ್ರಮುಖ ಹೋಟೆಲ್‌ನ ಕೋಣೆಯೊಂದರಲ್ಲಿ ಬಂಧಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದು, ಉಪ ಜೈಲರ್ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ಆರೋಪ ಹೊರಿಸಲಾಗಿದೆ.
ಪೊಲೀಸರ ಪ್ರಕಾರ, ಏಪ್ರಿಲ್ 29ರಂದು ಮಗಳು ಕಾಣೆಯಾದ ನಂತರ ಬಾಲಕಿಯ ತಾಯಿ ನಾಪತ್ತೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ, ಪೊಲೀಸರು ಏಪ್ರಿಲ್ 30ರಂದು ಬಿಎನ್‌ಎಸ್ ಸೆಕ್ಷನ್ 137(2) ಅಡಿಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು.
ಬಾಲಕಿಯನ್ನು ರಕ್ಷಿಸಿದ ನಂತರ ವಿಚಾರಣೆ ನಡೆಸಿದಾಗ, ಏಪ್ರಿಲ್ 29ರಂದು ಸಮೀರ್ ಖಾನ್ ಎಂಬಾತನಿಂದ ತನಗೆ ಫೋನ್ ಕರೆ ಬಂದಿದ್ದು, ಆತ ತನ್ನನ್ನು ಬೈಕ್‌ನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ. ನಂತರ ಸಮೀರ್‌ನ ಆಪ್ತ ಚೋಟು ಮುಸಲ್ಮಾನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಏಪ್ರಿಲ್ 30ರಂದು ಶಹದೋಲ್ ರೈಲು ನಿಲ್ದಾಣದಲ್ಲಿ ತನ್ನನ್ನು ಬಿಟ್ಟು ಹೋಗಲಾಗಿತ್ತು, ಅಲ್ಲಿಂದ ಅನ್ಮೋಲ್ ಎಂದು ಗುರುತಿಸಲಾದ ಮತ್ತೊಬ್ಬ ಯುವಕ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ನಂತರ ಅದೇ ದಿನ, ಮುದ್ನಾ ನದಿಯ ಬಳಿ ಅನ್ಮೋಲ್‌ನ ಆಪ್ತ ಶಕೀಬ್ ಖಾನ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಹೇಳಿಕೆಯ ಪ್ರಕಾರ, ಏಪ್ರಿಲ್ 30ರಂದು ತಡರಾತ್ರಿ ಹಾಸ್ಟೆಲ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು. ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬುರ್ಹಾರ್ ಸಬ್ ಜೈಲಿನ ಉಪ ಜೈಲರ್ ವಿಕಾಸ್ ಸಿಂಗ್ ಆಕೆಯನ್ನು ಗಮನಿಸಿ, ತನ್ನ ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ದು ಬಲವಂತವಾಗಿ ಬಂಧಿಸಿಟ್ಟಿದ್ದ. ನಂತರ ಪೊಲೀಸರು ಆಕೆ ಇದ್ದ ಸ್ಥಳವನ್ನು ಪತ್ತೆಹಚ್ಚಿ ಹೋಟೆಲ್ ಕೊಠಡಿಯಿಂದ ರಕ್ಷಿಸಿದ್ದಾರೆ.
2024ರಲ್ಲಿ, ತಾಯಿಯೊಂದಿಗೆ ಜಗಳವಾಡಿ ಮನೆಬಿಟ್ಟ ವೇಳೆ ಐವರು ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಗಿ ವರದಿಗಳು ಹೇಳಿವೆ.
“ಅಪಹರಣಕ್ಕೆ ಸಂಬಂಧಿಸಿದ ಸೆಕ್ಷನ್ 137(2) ಬಿಎನ್‌ಎಸ್ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. 2024ಮತ್ತು ಏಪ್ರಿಲ್ 29 ಮತ್ತು 30, 2025ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ. ಶುಕ್ರವಾರ ಆಕೆಯ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಲಾಗುವುದು, ಅದರ ಆಧಾರದ ಮೇಲೆ ಈ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಶಹದೋಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಮ್‌ಜಿ ಶ್ರೀವಾಸ್ತವ ಗುರುವಾರ ಹೇಳಿದ್ದಾರೆ.
“ಬುರ್ಹಾರ್ ಸಬ್ ಜೈಲು ಉಪ ಜೈಲರ್ ವಿಕಾಸ್ ಸಿಂಗ್ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ಆರೋಪ ಹೊರಿಸಲಾಗಿದೆ. ಆದರೆ, ಆತನನ್ನು ಇನ್ನೂ ಬಂಧಿಸಲಾಗಿಲ್ಲ” ಎಂದು ಎಸ್ಪಿ ತಿಳಿಸಿದ್ದಾರೆ.
ತನಿಖೆಯ ಬಗ್ಗೆ ತಿಳಿದಿರುವ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಾಲಕಿಯ ಆರಂಭಿಕ ಹೇಳಿಕೆಗಳಲ್ಲಿ ಹಲವಾರು ಗೊಂದಲಗಳಿವೆ. ಆಕೆಯ ಔಪಚಾರಿಕ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶುಕ್ರವಾರ ಆಕೆಯ ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಲು ನಿರ್ಧರಿಸಲಾಗಿದೆ ಎಂದು newindianexpress.com ವರದಿ ಮಾಡಿದೆ.
ಹಮ್ದರ್ದ್ ರೂಹ್ ಅಫ್ಜಾ ಗುರಿಯಾಗಿಸಿ ಹೇಳಿಕೆ ನೀಡಲ್ಲ: ದೆಹಲಿ ಹೈಕೋರ್ಟ್‌ಗೆ ರಾಮದೇವ್ ಭರವಸೆ


