ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಘನತೆಗೆ ಹಾನಿ ಪ್ರಕರಣ ರದ್ದತಿ ಕೋರಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ (ಮೇ.3) ವಜಾಗೊಳಿಸಿದೆ ಎಂದು ವರದಿಯಾಗಿದೆ.
ಸದನದಲ್ಲಿ ಸಿಟಿ ರವಿ ಬಳಕೆ ಮಾಡಿರುವ ಪದಕ್ಕೆ ಕ್ರಿಮಿನಲ್ ಪ್ರಾಸಿಕ್ಯೂಷನ್‌ನಿಂದ ಶಾಸಕರಿಗೆ ಇರುವ ವಿನಾಯಿತಿ ರಕ್ಷಣೆ ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶಿಸಿದೆ ಎಂದು barandbench.com ವರದಿ ಮಾಡಿದೆ.
ಶಾಸನಸಭೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಿದ ಪದಗಳಿಗೆ ಶಾಸಕರಿಗೆ ಇರುವ ರಕ್ಷಣೆ ವಿನಾಯಿತಿ ಅನ್ವಯಿಸುತ್ತದೆ. ರವಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪದ ಮತ್ತು ಅವರ ನಡತೆಯು ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ನೀಡುವುದಕ್ಕೆ ಅನ್ವಯಿಸುವುದಿಲ್ಲ ಎಂಬುವುದಾಗಿ ನ್ಯಾಯಾಲಯ ಹೇಳಿದೆ ಎಂದು ವರದಿ ತಿಳಿಸಿದೆ.
ಸಿಟಿ ರವಿ ಮಹಿಳೆಯ ಘನತೆಗೆ ಹಾನಿ ಮಾಡಿರುವ ಆರೋಪವಿದೆ. ಇದು ಯಾವುದೇ ರೀತಿಯಲ್ಲೂ ಸದನದ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಲ್ಲ. ಹಾಗಾಗಿ, ಅದಕ್ಕೆ ವಿನಾಯಿತಿ ಇರುವುದಿಲ್ಲ ಎಂದಿರುವ ನ್ಯಾಯಾಧೀಶರು ಅರ್ಜಿ ವಜಾ ಮಾಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ದೂರಿನ ಅನ್ವಯ ಸಿಟಿ ರವಿ ವಿರುದ್ಧ ಬಾಗೇವಾಡಿ ಪೊಲೀಸರು 19 ಡಿಸೆಂಬರ್ 2024ರಂದು ಬಿಎನ್‌ಎಸ್ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆಯ ಘನತೆಗೆ ಹಾನಿ) ಅಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ನಂತರ ಹೈಕೋರ್ಟ್ ಸಿಟಿ ರವಿಯ ಬಿಡುಗಡೆಗೆ ಆದೇಶಿಸಿತ್ತು.
ಬಂಟ್ವಾಳ | ಮುಸ್ಲಿಮರು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ಮುಗಿಬಿದ್ದ ಸಂಘಪರಿವಾರದ ಕಾರ್ಯಕರ್ತರು!: ವೀಡಿಯೊ


