ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಕ್ಕೆ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ನೀಡಿದ್ದ ಕ್ರಿಮಿನಲ್ ದೂರನ್ನು ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲಾ ನ್ಯಾಯಾಲಯ ಮಂಗಳವಾರ (ಮೇ.6) ವಜಾಗೊಳಿಸಿದೆ ಎಂದು livelaw.in ವರದಿ ಮಾಡಿದೆ.
ಅಯೋಧ್ಯೆಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ (ಸೀನಿಯರ್ ವಿಭಾಗ) ಏಕ್ತಾ ಸಿಂಗ್ ಅವರು ದೂರು ವಿಚಾರಣೆಗೆ ಅರ್ಹವಲ್ಲ ಮತ್ತು ದೂರುದಾರರಿಗೆ ದೂರು ನೀಡಲು ನಿರ್ದಿಷ್ಟ ಸ್ಥಳವಿಲ್ಲ ಎಂದು ಹೇಳಿದ್ದಾರೆ.
ಶಿವೇಂದ್ರ ಸಿಂಗ್ ಎಂಬವರು ಬಿಎನ್‌ಎಸ್‌ಎಸ್ ಸೆಕ್ಷನ್ 210ರ (ನ್ಯಾಯಾಧೀಶರಿಂದ ಅಪರಾಧಗಳ ಸಂಜ್ಞೆ) ಅಡಿಯಲ್ಲಿ ನೇಹಾ ಸಿಂಗ್ ವಿರುದ್ದ ಅಯೋಧ್ಯೆ ಜಿಲ್ಲಾ ನ್ಯಾಯಾಲಯಕ್ಕೆ ದೂರ ನೀಡಿದ್ದರು. ವಕೀಲ ಮಾರ್ತಾಂಡ ಪ್ರತಾಪ್ ಸಿಂಗ್ ಶಿವೇಂದ್ರ ಸಿಂಗ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
“ಸಾರ್ವಜನಿಕ ಶಾಂತಿಯನ್ನು ಕದಡಲು ಮತ್ತು ಚುನಾವಣಾ ಲಾಭ ಪಡೆಯಲು ನೇಹಾ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ‘ಸುಳ್ಳು’ ಸಂಬಂಧ ಕಲ್ಪಿಸಿದ್ದಾರೆ” ಎಂದು ಶಿವೇಂದ್ರ ಸಿಂಗ್ ತನ್ನ ದೂರಿನಲ್ಲಿ ಆರೋಪಿಸಿದ್ದರು.
“ನೇಹಾ ಸಿಂಗ್ ಅವರ ಸುಳ್ಳು ಮತ್ತು ಕಾನೂನುಬಾಹಿರ ಹೇಳಿಕೆಗಳು ರಾಷ್ಟ್ರವ್ಯಾಪಿ ಅಶಾಂತಿಯನ್ನು ಸೃಷ್ಟಿಸಿವೆ. ಇದು ದೇಶವನ್ನು ಅಂತರ್ಯುದ್ಧದತ್ತ ತಳ್ಳಿದೆ. ಅವರ ಕೃತ್ಯಗಳು ದೇಶದ್ರೋಹಕ್ಕೆ ಸಮಾನಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ” ಎಂದು ಹೇಳಿದ್ದರು.
“ನೇಹಾ ಅವರ ‘ಅಸಭ್ಯ’ ಮತ್ತು ‘ಅವಹೇಳನಕಾರಿ’ ಹೇಳಿಕೆಗಳು ಆಡಳಿತಾರೂಢ ಬಿಜೆಪಿ ನಾಯಕರ ವರ್ಚಸ್ಸಿಗೆ ಕಳಂಕ ತಂದಿವೆ. ದೇಶದಲ್ಲಿ ನಡೆಯುವ ಹೆಚ್ಚಿನ ಭಯೋತ್ಪಾದಕ ದಾಳಿಗಳಿಗೆ ಬಿಜೆಪಿಯೇ ಕಾರಣ ಎಂದು ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದಿದ್ದರು.
ವಿಚಾರಣೆಯ ಆರಂಭದಲ್ಲಿಯೇ ನ್ಯಾಯಾಲಯವು, ನೇಹಾ ಸಿಂಗ್ ವಿರುದ್ಧದ ಪ್ರಾಥಮಿಕ ಆರೋಪವೆಂದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಭಾರತೀಯ ಜನತಾ ಪಕ್ಷದ ಎಲ್ಲಾ ನಾಯಕರ ವಿರುದ್ಧ ಅಸಭ್ಯ ಮತ್ತು ಅನುಚಿತ ಹೇಳಿಕೆಗಳನ್ನು ನೀಡುವ ಮೂಲಕ ಅವರ ಮಾನಹಾನಿ ಮಾಡಿದ್ದಾರೆ ಮತ್ತು ಅವರ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂಬುವುದನ್ನು ಗಮನಿಸಿದೆ.
ನಂತರ ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 222 (2) [ಮಾನನಷ್ಟ ಮೊಕದ್ದಮೆ] ಯನ್ನು ಉಲ್ಲೇಖಿಸಿದೆ. ಇದು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಸಚಿವರು ಅಥವಾ ಯಾವುದೇ ಸಾರ್ವಜನಿಕ ಸೇವಕರ ವಿರುದ್ಧ ಅವರ ಅಧಿಕೃತ ನಡವಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಸಂಬಂಧಿಸಿದೆ. ಸೆಷನ್ಸ್ ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ನೇರವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು.
ಇದಲ್ಲದೆ, ನ್ಯಾಯಾಲಯವು ಬಿಎನ್‌ಎಸ್‌ಎಸ್ ಸೆಕ್ಷನ್ 222 ರ ಸಬ್ ಸೆಕ್ಷನ್ (4)ರ ಆದೇಶವನ್ನು ಸಹ ಗಣನೆಗೆ ತೆಗೆದುಕೊಂಡಿದೆ. ಇದು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದೆ, ಸಬ್ ಸೆಕ್ಷನ್ (2) ರ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಯಾವುದೇ ದೂರು ನೀಡಬಾರದು ಎಂದು ಹೇಳುತ್ತದೆ.
ನೇಹಾ ಸಿಂಗ್ ಅವರು ಪ್ರಧಾನ ಮಂತ್ರಿ, ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಕೇಂದ್ರ ಅಥವಾ ರಾಜ್ಯ ಸಚಿವರಾಗಿರುವ ಇತರ ಬಿಜೆಪಿ ನಾಯಕರ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ಅವರ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿಯೊಂದಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಬೇಕು. ಆದರೆ, ಈಗ ನೀಡಿದ ದೂರು ಅದಲ್ಲ.
ಹೀಗಾಗಿ, ಸೂಕ್ತ ಅನುಮತಿ ಪಡೆಯದೆ ದೂರುದಾರರು ತಕ್ಷಣದ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಇನ್ನೊಂದು, ಬಿಎನ್‌ಎಸ್‌ನ ಅಧ್ಯಾಯ VII ಅಡಿಯಲ್ಲಿ ಬರುವ ಅಪರಾಧಗಳನ್ನು ನೇಹಾ ಸಿಂಗ್ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, ಸೆಕ್ಷನ್ 217 ಬಿಎನ್‌ಎಸ್‌ಎಸ್ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ಬಿಎನ್‌ಎಸ್‌ನ ಅಧ್ಯಾಯ VII [ರಾಜ್ಯ ವಿರುದ್ಧದ ಅಪರಾಧಗಳು] ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಯಾವುದೇ ನ್ಯಾಯಾಲಯವು ಅರಿಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಹೀಗಾಗಿ, ದೂರು ಸಲ್ಲಿಸುವ ಮೊದಲು ಅಂತಹ ಪೂರ್ವಾನುಮತಿ ಪಡೆಯಲಾಗಿದೆ ಎಂದು ತೋರಿಸುವ ಯಾವುದೇ ದಾಖಲೆಯನ್ನು ದೂರುದಾರರು ಸಲ್ಲಿಸದ ಕಾರಣ, ಅವರು ಸದರಿ ಅಪರಾಧದ ಕುರಿತು ದೂರು ದಾಖಲಿಸುವ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ನೇಹಾ ಸಿಂಗ್ ವಿರುದ್ಧದ ದೇಶದ್ರೋಹದ ಅಪರಾಧಕ್ಕೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ದೇಶದ್ರೋಹದ ಅಪರಾಧವನ್ನು ವ್ಯಾಖ್ಯಾನಿಸಲಾಗಿಲ್ಲ. ಅದಕ್ಕೆ ಹತ್ತಿರದ ಸೆಕ್ಷನ್ 152 ದಾಖಲಾಗಿದೆ. ಇದು ಅಧ್ಯಾಯ VII ರ ಅಡಿಯಲ್ಲಿ ಬರುತ್ತದೆ. ಆದ್ದರಿಂದ, ಇದಕ್ಕೆ ಪೂರ್ವಾನುಮತಿಯ ಅಗತ್ಯವಿರುತ್ತದೆ. ಅದನ್ನು ತೆಗೆದುಕೊಳ್ಳಲಾಗಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಈ ಹಿನ್ನೆಲೆಯಲ್ಲಿ, ದೂರು ದಾಖಲಿಸಲು ಈ ದೂರಿಗೆ ಯಾವುದೇ ನಿರ್ದಿಷ್ಟ ಸ್ಥಳವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದ್ದರಿಂದ, ದೂರನ್ನು ವಜಾಗೊಳಿಸಿದೆ ಎಂದು livelaw.in ವರದಿ ಮಾಡಿದೆ.
Courtesy : livelaw.in
ಆಪರೇಷನ್ ಸಿಂಧೂರ | ಭಯೋತ್ಪಾದಕ ಗುಂಪುಗಳ ನಿರ್ಮೂಲನೆಗೆ ಭಾರತದ ಎಡಪಕ್ಷಗಳ ಒತ್ತಾಯ


