“ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೂ ನಮಗೂ ಸಂಬಂಧವಿಲ್ಲ” ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಹೇಳಿದ್ದಾರೆ. ಆದರೂ ಅವರು, “ನಾನು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಶಮನ ಮಾಡಲು ಪ್ರಯತ್ನಿಸುತ್ತಿರುವುದಾಗಿ” ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಫಾಕ್ಸ್ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ವ್ಯಾನ್ಸ್, ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಅಮೆರಿಕ ದೂರ ಉಳಿಯಲಿದೆ ಎಂದು ಪ್ರತಿಪಾದಿಸಿದ್ದಾರೆ. ಭಾರತ-ಪಾಕಿಸ್ತಾನ ವಿಷಯದಲ್ಲಿ ನಾವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಯತ್ನಿಸುತ್ತೇವೆ. ಆದರೆ, ಅವರ ಸಂಘರ್ಷದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಏಕೆಂದರೆ, ಮೂಲಭೂತವಾಗಿ ಅದಕ್ಕೂ ನಮಗೂ ಸಂಬಂಧವಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ತ್ಯಜಿಸುವಂತೆ ನಾವು ಹೇಳಲು ಸಾಧ್ಯವಿಲ್ಲ. ಹಾಗಾಗಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಈ ವಿಷಯದಲ್ಲಿ ಮುಂದುವರಿಯುತ್ತೇವೆ ಎಂದು ವ್ಯಾನ್ಸ್ ಹೇಳಿದ್ದಾಗಿ ವರದಿಗಳು ವಿವರಿಸಿವೆ.
India Pakistan tensions
Breaking: US Vice President JD Vance says
"We’re not going to get involved in the middle of war that’s fundamentally none of our business.."
Vdo Ctsy: Fox News pic.twitter.com/bjeVXWDZHD
— Sidhant Sibal (@sidhant) May 8, 2025
“ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ದೊಡ್ಡ ಯುದ್ದವಾಗಿ ಮಾರ್ಪಾಡು ಆಗಬಾರದು. ಪರಮಾಣು ಸಂಘರ್ಷವಾಗಿ ಬದಲಾಗಬಾರದು ಎಂಬುವುದೇ ನಮ್ಮ ಆಶಯ ಮತ್ತು ನಿರೀಕ್ಷೆ. ಸದ್ಯಕ್ಕೆ ಅದು ಸಂಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ವ್ಯಾನ್ಸ್ ಹೇಳಿದ್ದಾರೆ.
ಜಮ್ಮು, ಪಠಾಣ್‌ಕೋಟ್ ಸೇರಿದಂತೆ ಭಾರತದ ಹಲವು ನಗರಗಳ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಯತ್ನಿಸಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನ ಹಾರಿಸಿದ ಕನಿಷ್ಠ ಎಂಟು ಕ್ಷಿಪಣಿಗಳನ್ನು ತಡೆದು ತಟಸ್ಥಗೊಳಿಸಿದೆ ಎಂದು ವರದಿಯಾದ ಬೆನ್ನಲ್ಲೇ ವ್ಯಾನ್ಸ್ ಮೇಲಿನ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಮುಯಿಗೆ ಮುಯಿ ಎಂಬ ಕ್ರಮಗಳನ್ನು ನಿಲ್ಲಿಸಬೇಕು. ಈ ವಿಷಯದಲ್ಲಿ ಅವರಿಗೆ ಏನಾದರು ಸಹಾಯ ಮಾಡಲು ಸಾಧ್ಯವಾದರೆ ಮಾಡುತ್ತೇವೆ” ಎಂದಿದ್ದರು.
ಈ ಹಿಂದೆ ಮಾತನಾಡಿದ್ದ ಟ್ರಂಪ್, “ಭಾರತ-ಪಾಕಿಸ್ತಾನ ಎರಡೂ ನಮಗೆ ಆಪ್ತ ರಾಷ್ಟ್ರಗಳು. ಅವರ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಿರುತ್ತವೆ. ಅದು ಇಂದು ನಿನ್ನೆಯದ್ದಲ್ಲ. ಈ ಹಿಂದೆಯೂ ಅವರ ನಡುವೆ ಸಂಘರ್ಷಗಳು ನಡೆದಿವೆ. ಅದನ್ನು ಅವರು ಪರಸ್ಪರ ಬಗೆಹರಿಸಿಕೊಂಡಿದ್ದಾರೆ. ಈಗ ಉಂಟಾಗಿರುವ ಉದ್ವಿಗ್ನತೆಯನ್ನೂ ಶೀಘ್ರದಲ್ಲಿ ಬಗೆಹರಿಸಿಕೊಳ್ಳಲಿ ಎಂಬುವುದು ನಮ್ಮ ಆಶಯ” ಎಂದಿದ್ದರು.
ಭಾರತ – ಪಾಕ್ ಸಂಘರ್ಷ ಹಿನ್ನಲೆ | ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿರುವ ಸುಳ್ಳುಗಳು


