‘ಆಪರೇಷನ್ ಸಿಂಧೂರ’ದ ಚರ್ಚೆಯ ನಡುವೆ ಕಳೆದ 20 ದಿನಗಳ ಹಿಂದೆ ಪಾಕಿಸ್ತಾನ ಸೇನೆ ಸೆರೆಹಿಡಿದಿದೆ ಎನ್ನಲಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರ ಕುಟುಂಬ ತಮ್ಮ ಮನೆ ಮಗನನ್ನು ಮರಳಿ ಕರೆ ತರುವಂತೆ ಕಣ್ಣೀರು ಹಾಕುತ್ತಿದೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾದ ಬಳಿಕ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದೆಗೆಟ್ಟಿದೆ. ಆದರೂ, ಯೋಧ ಮರಳಿ ಬರುವ ಭರವಸೆಯನ್ನು ಪಶ್ಚಿಮ ಬಂಗಾಳದ ರಿಶ್ರಾದಲ್ಲಿರುವ ಅವರ ಕುಟುಂಬ ವ್ಯಕ್ತಪಡಿಸಿದೆ.
ಫಿರೋಝ್‌ಪುರದ ಬಿಎಸ್‌ಎಫ್‌ನ 24 ನೇ ಬೆಟಾಲಿಯನ್‌ನ ಯೋಧ ಪೂರ್ಣಂ ಸಾಹು ಅವರನ್ನು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಒಂದು ದಿನದ ನಂತರ, ಅಂದರೆ ಏಪ್ರಿಲ್ 23ರಂದು ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಗಡಿಯಲ್ಲಿ ಸ್ಥಳೀಯ ರೈತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಸಹಾಯ ಮಾಡುವಾಗ ಸಾಹು ಅವರು ತಪ್ಪಿ ಗಡಿ ದಾಟಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಪಾಕಿಸ್ತಾನಿ ಪಡೆಗಳು ಸಾಹು ಅವರನ್ನು ಬಂಧಿಸಿ, ಅವರ ಕಣ್ಣಿಗೆ ಕಪ್ಪು ಪಟ್ಟಿ ಕರೆದೊಯ್ಯುವ ಫೋಟೋ ಬಿಡುಗಡೆ ಮಾಡಿದೆ.
ಯೋಧ ಸಾಹು ಬಂಧನವಾಗಿ 20 ದಿನ ಕಳದರೂ, ಅವರನ್ನು ವಾಪಸ್ ಕರೆ ತರುವ ಕುರಿತು ಯಾವುದೇ ದೊಡ್ಡ ಬೆಳವಣಿಗೆಗಳು ನಡೆಯುತ್ತಿಲ್ಲ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾ ವಾರ್ಡ್ ಸಂಖ್ಯೆ 13ರಲ್ಲಿರುವ ಸಾಹು ಅವರ ಕುಟುಂಬ ತೀವ್ರ ದುಖಃ ಮತ್ತು ಆತಂಕದಲ್ಲಿ ದಿನ ದೂಡುತ್ತಿದೆ. ಸಾಹು ಅವರ ಪತ್ನಿ ರಜನಿ ಸಾಹು ಏಳು ತಿಂಗಳ ಗರ್ಭಿಣಿಯಾಗಿದ್ದು, ತನ್ನ ಗಂಡನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
“ನನ್ನ ಗಂಡನನ್ನು ಪಾಕಿಸ್ತಾನಿ ಸೇನೆ ಅಪಹರಿಸಿದೆ. ಅವರು ಸೇನೆಯ ವಶದಲ್ಲಿದ್ದಾರೆ. ಅವರ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ಯುವ ಫೋಟೋ ಬಿಡುಗಡೆ ಮಾಡಿದ್ದಾರೆ” ಎಂದು ರಜಿನಿ ಸಾಹು ಅಳುತ್ತಾ ಹೇಳಿದ್ದಾರೆ.
ಅಪಹರಣಕ್ಕೆ ಒಳಗಾಗುವ ಕೆಲ ಗಂಟೆಗಳ ಮೊದಲು ಕುಟುಂಬಕ್ಕೆ ಕರೆ ಮಾಡಿದ್ದರು
“ಬಿಎಸ್‌ಎಫ್ ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡಿ ನನ್ನ ಗಂಡನನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ಯುದ್ಧದಂತಿದೆ. ಮುಂದೆ ಏನು ಸುದ್ದಿ ಬರುತ್ತದೆಯೋ ಗೊತ್ತಿಲ್ಲ” ಎಂದು ರಜನಿ ಕಳವಳ ವ್ಯಕ್ತಪಡಿಸಿದ್ದಾರೆ.
“ಒಂದು ತಿಂಗಳ ರಜೆ ಮುಗಿಸಿ ಹಿಂತಿರುಗಿದ ಪೂರ್ಣಂ, ಏಪ್ರಿಲ್ 1 ರಂದು ಕರ್ತವ್ಯಕ್ಕೆ ಮರಳಿದ್ದರು. ಏಪ್ರಿಲ್ 22ರ ರಾತ್ರಿ, ಅಪಹರಣಕ್ಕೆ ಒಳಗಾಗುವ ಕೆಲ ಗಂಟೆಗಳ ಮೊದಲು, ನನ್ನ ಆರೋಗ್ಯ ವಿಚಾರಿಸಲು ಕೊನೆಯ ಬಾರಿಗೆ ಕರೆ ಮಾಡಿದ್ದರು. ಆ ಬಳಿಕ ಇಷ್ಟು ದಿನ ಕಳೆದರೂ, ಅವರು ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ” ಎಂದು ರಜನಿ ತಿಳಿಸಿದ್ದಾರೆ.
ದಂಪತಿಯ ಎಂಟು ವರ್ಷದ ಮಗನನ್ನು ಈಗ ನೆರೆಹೊರೆಯವರು ನೋಡಿಕೊಳ್ಳುತ್ತಿದ್ದಾರೆ. ಆತನಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಿಲ್ಲ. ಪೂರ್ಣಂ ಅವರ ತಂದೆ, ನಿವೃತ್ತ ಭದ್ರತಾ ಸಿಬ್ಬಂದಿ ಭೋಲಾ ಸಾಹು ಅವರು, ಆರಂಭಿಕ ಭರವಸೆಗಳ ನಂತರದ ಸೇನೆಯ ಮೌನದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.
“ನಾವು ನಮ್ಮ ಸೊಸೆಯೊಂದಿಗೆ ಫಿರೋಝ್‌ಪುರಕ್ಕೆ ಹೋಗಿದ್ದೆವು. ಸೇನಾ ಅಧಿಕಾರಿಗಳು ಮಗನನ್ನು ಕರೆತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಯಾವುದೇ ಮಾಹಿತಿ ಇಲ್ಲ. ಪ್ರಧಾನ ಮಂತ್ರಿಯನ್ನು ಸಂಪರ್ಕಿಸಲು ನಮಗೆ ಸಾಧ್ಯವಾದರೆ, ಮಗನನ್ನು ವಾಪಸ್ ಕರೆತರಲು ಬೇಡಿಕೊಳ್ಳುತ್ತೇವೆ.” ಎಂದು ಹೇಳಿದ್ದಾರೆ.
“ನನ್ನ ಮಗ 18 ವರ್ಷಗಳಿಂದ ದೇಶ ಸೇವೆ ಮಾಡಿದ್ದಾನೆ. ಇಂದು ನಾವು ಪರಿತ್ಯಕ್ತರಾಗಿದ್ದೇವೆಂದು ಅನಿಸುತ್ತಿದೆ” ಎಂದು ಪೂರ್ಣ ಸಾಹು ಅವರ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ರಿಶ್ರಾದ ಸ್ಥಳೀಯ ಬಂಗಾಳಿ ಅಲ್ಲದ ವಲಸೆ ಸಮುದಾಯವನ್ನು, ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಸೆಣಬಿನ ಗಿರಣಿ ಕಾರ್ಮಿಕ ಸಮುದಾಯವನ್ನು ಒಂದುಗೂಡಿಸಿದೆ. ಸ್ಥಳೀಯರು ವಾರ್ಡ್ ಸಂಖ್ಯೆ 13 ಯೋಧ ಪೂರ್ಣಂ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಟಿವಿ ಪರದೆಯಲ್ಲಿ 24/7 ಸುದ್ದಿಗಳನ್ನು ಪ್ರಸಾರ ಆಗುತ್ತಿದೆ ಎಂದು ವರದಿಗಳು ಹೇಳಿವೆ.
“ಒಂದೆಡೆ ಸಂಘರ್ಷ, ಮತ್ತೊಂದೆಡೆ ಶಾಂತಿ. ಇದರಿಂದ ನಾವು ಗೊಂದಲಕ್ಕೀಡಾಗಿದ್ದೇವೆ. ಪೂರ್ಣ> ಸುರಕ್ಷಿತವಾಗಿ ಮನೆಗೆ ಬರಲೆಂದು ಬೇಡಿಕೊಳ್ಳುತ್ತೇವೆ. ಅವರು ಮನೆಗೆ ಬಂದರೆ ನಾವು ‘ಸಿಂಧೂರ’ ಆಚರಣೆ ಮಾಡುತ್ತೇವೆ” ಎಂದು ಯೋಧ ಪೂರ್ಣಂ ಅವರ ಸಹೋದರ ಶ್ಯಾಮ್‌ಸುಂದರ್ ಶಾವ್ ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ ಸೋಮವಾರ ಗೃಹ ಸಚಿವಾಲಯದಿಂದ ತ್ವರಿತ ಪರಿಹಾರದ ಭರವಸೆ ವ್ಯಕ್ತಪಡಿಸಿದ್ದಾರೆ. ಹೂಗ್ಲಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಬಿಎಸ್‌ಎಫ್ ಕಮಾಂಡರ್‌ಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ದೃಢಪಡಿಸಿದ್ದಾರೆ.
“ನಾನು ಬಿಎಸ್‌ಎಫ್ ಕಮಾಂಡರ್‌ಗಳೊಂದಿಗೆ ಮಾತನಾಡಿದ್ದೇನೆ. ಅವರು ಪೂರ್ಣಂ ಅವರ ಬಿಡುಗಡೆಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾನು ಪೂರ್ಣಂ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದೇನೆ. ಆದರೆ, ಅವರ ಪರಿಸ್ಥಿತಿ ಹದಗೆಟ್ಟಿದೆ” ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಬಗ್ಗೆ ಕೇಳಿದ ಕೂಡಲೇ ಒಮ್ಮೆಲೆ ಆಘಾತ ವ್ಯಕ್ತಪಡಿಸಿ, ಮುಖದ ಮೇಲೆ ಮುಸುಕನ್ನು ಎಳೆದುಕೊಂಡ ಯೋಧ ಪೂರ್ಣಂ ಪತ್ನಿ ರಜನಿ “ನನ್ನ ಸಿಂಧೂರವನ್ನು ನನಗೆ ಮರಳಿ ಕೊಡಿ” ಎಂದು ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ ಎಂದು ವರದಿ ಹೇಳಿದೆ.
ಸೌಜನ್ಯ : thewire.in
ನಾಲ್ಕು ದಿನಗಳ ಭಾರತ-ಪಾಕ್ ಸಂಘರ್ಷ: ಜಮ್ಮು ಕಾಶ್ಮೀರದಲ್ಲಿ 21 ನಾಗರಿಕರು, ಐವರು ಸಶಸ್ತ್ರ ಪಡೆ ಸಿಬ್ಬಂದಿ ಸಾವು


