ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ ನೀಡಿದ್ದ ಅಶೋಕ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರಿಗೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಸಮನ್ಸ್ ಜಾರಿ ಮಾಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪ್ರೊಫೆಸರ್ ಅಲಿ ಅವರ ಹೇಳಿಕೆಯು, ಭಾರತೀಯ ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳ ಅವಹೇಳನವಾಗಿದ್ದು ಮತ್ತು ಕೋಮು ಸೌಹಾರ್ದತೆಯನ್ನು ಹಾಳುಗೆಡವುವ ಉದ್ದೇಶ ಹೊಂದಿದೆ ಎಂದು ಆಯೋಗ ಆರೋಪಿಸಿದೆ.
ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಅಲಿ ಅವರನ್ನು ಬುಧವಾರ ಆಯೋಗದ ಮುಂದೆ ಹಾಜರಾಗಲು ನಿರ್ದೇಶಿಸಲಾಗಿದೆ. ಪ್ರೊಫೆಸರ್ ಅಲಿ ಅವರು ಮೇ 8 ರಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಕರ್ನಲ್ ಸೋಫಿಯಾ ಖುರೇಷಿಯನ್ನು ಹೊಗಳುತ್ತಿರುವ ಹಿಂದುತ್ವವಾದಿಗಳ ದ್ವಿಮುಖ ನೀತಿಯನ್ನು ಎತ್ತಿ ತೋರಿಸಿದ್ದರು.
“ಬಹುಶಃ ಅವರು ಗುಂಪು ಹತ್ಯೆಗಳು, ಅನಿಯಂತ್ರಿತ ಬುಲ್ಡೋಜಿಂಗ್ ಮತ್ತು ಬಿಜೆಪಿಯ ದ್ವೇಷ ಪ್ರಚಾರಕ್ಕೆ ಬಲಿಯಾದ ಇತರರ ಬಗ್ಗೆ ಕೂಡಾ ಭಾರತೀಯ ನಾಗರಿಕರಾಗಿ ಅವರನ್ನು ರಕ್ಷಿಸಬೇಕೆಂದು ಅಷ್ಟೇ ಜೋರಾಗಿ ಒತ್ತಾಯಿಸಬಹುದಿತ್ತು” ಎಂದು ಅವರು ಹೇಳಿದ್ದರು.
ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಪತ್ರಿಕಾಗೋಷ್ಠಿಗಳ ಮೂಲಕ ಹೇಳಲು ಹೊರಟಿದ್ದನ್ನು ವಾಸ್ತವವಾಗಿ ಕೂಡಾ ಮಾಡಬೇಕು. ಇಲ್ಲವೆಂದರೆ ಅದು ಕೇವಲ ಬೂಟಾಟಿಕೆ ಎಂದು ಪ್ರೊಫೆಸರ್ ಹೇಳಿದ್ದರು.
“ವಾಸ್ತವದಲ್ಲಿ ಮುಸ್ಲಿಮರು ಎದುರಿಸುತ್ತಿರುವುದು ಸರ್ಕಾರವು ತೋರಿಸಲು ಪ್ರಯತ್ನಿಸಿದಕ್ಕಿಂತ ಭಿನ್ನವಾಗಿದೆ. ಆದರೆ ಪತ್ರಿಕಾಗೋಷ್ಠಿಗಳು ಭಾರತವು ತನ್ನ ವೈವಿಧ್ಯತೆಯನ್ನು ಒಗ್ಗಟ್ಟಾಗಿದೆ ಎಂಬ ಒಂದು ಕಲ್ಪನೆಯಾಗಿ ಸಂಪೂರ್ಣವಾಗಿ ಸತ್ತಿಲ್ಲ ಎಂದು ತೋರಿಸಿದವು” ಎಂದು ಅವರು ಹೇಳಿದ್ದರು.
ಭಾನುವಾರ ಪ್ರತ್ಯೇಕ ಪೋಸ್ಟ್‌ನಲ್ಲಿ ಅವರು, “ನಾಗರಿಕರು ಯಾವಾಗಲೂ ಯುದ್ಧದ ದುಷ್ಪರಿಣಾಮಗಳಿಗೆ ಒಳಗಾಗುತ್ತಲೆ ಇದ್ದಾರೆ… ಹಾಗಾದರೆ ನೀವು ಯುದ್ಧಕ್ಕಾಗಿ ಕೂಗಾಡಿದಾಗ ಅಥವಾ ಒಂದು ದೇಶವನ್ನು ನಾಶಮಾಡಬೇಕೆಂದು ಕರೆ ನೀಡಿದಾಗ, ನಿಖರವಾಗಿ ನೀವು ಏನು ಕೇಳುತ್ತಿದ್ದೀರಿ? ಇಡೀ ಜನರ ನರಮೇಧಕ್ಕಾಗಿಯೆ?” ಎಂದು ಶ್ನಿಸಿದ್ದರು.
ಮೇ 8 ರಂದು, ಆಪರೇಷನ್ ಸಿಂಧೂರ ಭಯೋತ್ಪಾದನೆಯನ್ನು ಎದುರಿಸುವ ಭಾರತದ ವಿಧಾನದಲ್ಲಿ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳುತ್ತಾ ಯುದ್ಧಪ್ರೇಮಿಗಳ ವಿರುದ್ಧ ಎಚ್ಚರಿಕೆ ನೀಡಿದ್ದರು. ಈ ಯುದ್ಧದಿಂದಾಗಿ “ಬಡವರು ಅಸಮಾನವಾಗಿ ಬಳಲುತ್ತಿದ್ದಾರೆ ಮತ್ತು ಪ್ರಯೋಜನ ಪಡೆಯುವ ಏಕೈಕ ಜನರೆಂದರೆ ರಾಜಕಾರಣಿಗಳು ಮತ್ತು ರಕ್ಷಣಾ ಕಂಪನಿಗಳು” ಎಂದು ಅವರು ಹೇಳಿದ್ದರು.
ಪ್ರೊಫೆಸರ್ ಅಲಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ರಾಜ್ಯ ಮಹಿಳಾ ಆಯೋಗವು ಕಳವಳಗಳ ವ್ಯಕ್ತಪಡಿಸಿದೆ. ಪ್ರೊಫೆಸರ್ ಅವರು ಮಹಿಳಾ ಅಧಿಕಾರಿಗಳ ಬಗ್ಗೆ ಅಗೌರವ, ಭಯೋತ್ಪಾದನೆಯ ಮೇಲಿನ ಮಿಲಿಟರಿ ಕ್ರಮದ ದೂಷಣೆ, ಸತ್ಯಗಳ ತಪ್ಪು ನಿರೂಪಣೆ, ಕೋಮು ಅಶಾಂತಿಯ ಪ್ರಚೋದನೆ, ಮಹಿಳೆಯರ ಘನತೆಯ ಉಲ್ಲಂಘನೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗವು ನಿಗದಿಪಡಿಸಿದ ನೈತಿಕ ಮಾನದಂಡಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಮಹಿಳಾ ಆಯೋಗ ಆರೋಪಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅವರ ಹೇಳಿಕೆಗಳು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರವನ್ನು ದುರ್ಬಲಗೊಳಿಸುತ್ತವೆ ಮತ್ತು ಮಿಲಿಟರಿ ಕ್ರಮಗಳ ಹಿಂದೆ ಕೋಮು ಉದ್ದೇಶಗಳಿವೆ ಎಂದು ಪ್ರತಿಪಾದಿಸುತ್ತಿವೆ ಎಂದು ಆಯೋಗ ಆರೋಪಿಸಿದೆ. ಪ್ರೊಫೆಸರ್ ಅವರು ಲಿಖಿತ ವಿವರಣೆ ನೀಡಿ, ಅವರ ಪ್ರತಿಪಾದನೆಗೆ ಸಂಬಂಧಿತ ದಾಖಲೆಗಳು, ವಿಶ್ವವಿದ್ಯಾಲಯದ ನೀತಿ ಸಂಹಿತೆಯ ಪ್ರತಿ ಮತ್ತು ಅವರ ಅಧ್ಯಾಪಕರ ಒಪ್ಪಂದವನ್ನು ಸಲ್ಲಿಸಬೇಕು ಎಂದು ಆಯೋಗ ಕೇಳಿದೆ.
“ನಿರ್ದೇಶಿತ ಅವಧಿಯೊಳಗೆ ಸಾಕಷ್ಟು ಕಾರಣವಿಲ್ಲದೆ ಹಾಜರಾಗಲು ವಿಫಲವಾದರೆ, ಆಯೋಗದ ಸಂಬಂಧಿತ ಕಾನೂನುಗಳು ಮತ್ತು ಅಧಿಕಾರಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಮಹಿಳಾ ಆಯೋಗ ಎಚ್ಚರಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭಾರತದ ಪ್ರಮುಖ ಸ್ಥಳಗಳ ಮೇಲೆ 15 ಲಕ್ಷ ಸೈಬರ್ ದಾಳಿ ನಡೆಸಿದ ಪಾಕಿಸ್ತಾನಿ ಹ್ಯಾಕರ್‌ಗಳು!
ಭಾರತದ ಪ್ರಮುಖ ಸ್ಥಳಗಳ ಮೇಲೆ 15 ಲಕ್ಷ ಸೈಬರ್ ದಾಳಿ ನಡೆಸಿದ ಪಾಕಿಸ್ತಾನಿ ಹ್ಯಾಕರ್‌ಗಳು!

