‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ’ಯನ್ನು ಮೇ 15ರಂದು (ಇಂದು) ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಡಳಿತ ವಹಿಸಿಕೊಳ್ಳುವವರೆಗೆ ಬಿಬಿಎಂಪಿ ಮುಂದುವರಿಯಲಿದೆ.
ನಗರದ ಆಡಳಿತವನ್ನು ಸುಗಮಗೊಳಿಸುವುದು, ಮೂಲಸೌಕರ್ಯ, ಸಂಚಾರ ಮತ್ತು ನಗರ ವಿಸ್ತರಣೆ ಸೇರಿದಂತೆ ನಗರದ ಬೆಳೆಯುತ್ತಿರುವ ಸವಾಲುಗಳನ್ನು ಪರಿಹರಿಸುವ ಉದ್ದೇಶ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಹೊಂದಿದೆ ಎಂದು ಸರ್ಕಾರ ಹೇಳಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾದ ಮೇಲೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) 120 ದಿನಗಳಲ್ಲಿ ರಚನೆಯಾಗಲಿದೆ. ಅದಕ್ಕೆ ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಗಡಿಗುರುತು ನಡೆಯಲಿದೆ. ಆನಂತರ ನಿಧಾನವಾಗಿ ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳಲಿದೆ.
“ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಶೀಘ್ರದಲ್ಲೇ ಆಗಲಿದೆ. ಹೊಸ ಪ್ರಾಧಿಕಾರವು ಬಿಬಿಎಂಪಿಯನ್ನು ಬಹು ಪಾಲಿಕೆಗಳಾಗಿ ವಿಭಜಿಸುವ ಮೂಲಕ ಬೆಂಗಳೂರಿನ ನಾಗರಿಕ ಆಡಳಿತವನ್ನು ಪುನರ್‌ರಚಿಸಲಿದೆ. ಇದು ದಕ್ಷತೆಯನ್ನು ಹೆಚ್ಚಿಸಲು ಮತ್ತು ಆಡಳಿತವನ್ನು ಸ್ಥಳೀಕರಿಸಲು ವಿನ್ಯಾಸಗೊಳಿಸಲಾದ ಕ್ರಮವಾಗಿದೆ” ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಳೆದ ವಾರ ಹೇಳಿದ್ದಾರೆ.
ಫೆಬ್ರವರಿ 2024ರಲ್ಲಿ ವಿಧಾನಮಂಡಲದ ಉಭಯ ಸದನಗಳು ಅನುಮೋದಿಸಿದ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ’ ಜನಸಂಖ್ಯೆಯ ಮಿತಿ ಮೀರಿದ ಬೆಳವಣಿಗೆ, ಮೂಲಸೌಕರ್ಯಗಳ ಕೊರತೆ, ಪರಿಸರ ಸಂರಕ್ಷಣೆಯ ಸವಾಲು ಸೇರಿದಂತೆ ಬೆಂಗಳೂರು ಮಹಾನಗರದ ಸಂಪೂರ್ಣ ಆಡಳಿತದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಎಂಬುವುದು ಸರ್ಕಾರದ ವಾದ.
ಪ್ರಸ್ತುತ ಇರುವ 709 ಚದರ ಕಿ.ಮೀ ಬಿಬಿಎಂಪಿ ವ್ಯಾಪ್ತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಾ ರಚನೆಯಾದ ಬಳಿಕ 1000 ಚದರ ಕಿ.ಮೀಗೆ ವಿಸ್ತರಣೆಯಾಗಲಿದೆ. ನಗರೀಕರಣಗೊಂಡಿರುವ ಕೆಲವು ಹಳ್ಳಿಗಳು ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ. ಆದರೆ, ಇದು ನಿಧಾನವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಸದ್ಯಕ್ಕೆ ಬಿಬಿಎಂಪಿ ಪ್ರದೇಶವೇ ಪ್ರಾಧಿಕಾರದ ವ್ಯಾಪ್ತಿಯಾಗಿರಲಿದೆ ಎಂದು ವರದಿಗಳು ಹೇಳಿವೆ.
ಬೆಂಗಳೂರು ನಗರದ ಕೈಗಾರಿಕಾ ಪ್ರದೇಶಗಳಲ್ಲದೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಂಡು ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ವಿವರಿಸಿವೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ನೇಮಿಸುತ್ತದೆ. ಮುಖ್ಯಮಂತ್ರಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು–ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಪ್ರಾಧಿಕಾರದ ಸದಸ್ಯರಾಗಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಪ್ರಾಧಿಕಾರದ ಮುಖ್ಯ ಆಯುಕ್ತರ ಅಧಿಕಾರಾವಧಿ ಮೂರು ವರ್ಷಗಳು. ಮಸೂದೆಯ ಆರಂಭದಲ್ಲಿ ಇದ್ದ ದುಷ್ಕೃತ್ಯ, ನಿರ್ಲಕ್ಷ್ಯ ಅಥವಾ ಅಸಮರ್ಥತೆಯ ಆಧಾರದ ಮೇಲೆ ಮೂರನೇ ಎರಡರಷ್ಟು ಬಹುಮತದಿಂದ ಆಯುಕ್ತರನ್ನು ತೆಗೆದು ಹಾಕಬಹುದು ಎಂಬ ನಿಬಂಧನೆಯನ್ನು ಅಂತಿಮ ಮಸೂದೆ ತೆಗೆದು ಹಾಕಿದೆ. ಇದು ಆಯುಕ್ತರ ಅಧಿಕಾರವಧಿಯನ್ನು ಬಲಪಡಿಸಿದೆ.
ವರದಿಗಳ ಪ್ರಕಾರ, ಮುಖ್ಯ ಆಯುಕ್ತರನ್ನು ಸರ್ಕಾರ ನೇರವಾಗಿ ನೇಮ ಮಾಡುವುದಕ್ಕೆ ನಾಗರಿಕ ಗುಂಪುಗಳು ಮತ್ತು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸ್ಥಳೀಯ ಸ್ವ-ಆಡಳಿತಕ್ಕೆ ಒತ್ತು ನೀಡುವ 74ನೇ ಸಾಂವಿಧಾನಿಕ ತಿದ್ದುಪಡಿಯನ್ನು ದುರ್ಬಲಗೊಳಿಸುತ್ತದೆ ಎಂಬುವುದು ಅವರ ವಾದವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದರೂ ತೆರಿಗೆ ಪಾವತಿ, ವ್ಯಾಪ್ತಿ, ಅಧಿಕಾರಿಗಳ ಕರ್ತವ್ಯಗಳಲ್ಲಿ ಚಲಾವಣೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಮೂಕ-ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿ ಅಪಹರಿಸಿ ಕೊಲೆ; ಪೋಷಕರಿಂದ ಅತ್ಯಾಚಾರ ಆರೋಪ


