ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಅಪರಾಧಿ ಪರಸ್ಪರ ಮದುವೆಯಾಗಲು ಒಪ್ಪಿಕೊಂಡ ಹಿನ್ನೆಲೆ, ಗುರುವಾರ (ಮೇ.15) ಅಪರಾಧಿಯ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್, ಆತನಿಗೆ ಮಧ್ಯಂತರ ಜಾಮೀನು ನೀಡಿದೆ ಎಂದು livelaw.in ವರದಿ ಮಾಡಿದೆ.
ಮದುವೆಯಾಗುವುದಾಗಿ ಭರವಸೆ ಕೊಟ್ಟು ಯುವತಿ ಮೇಲೆ ದೀರ್ಘ ಕಾಲ ಅತ್ಯಾಚಾರವೆಸಗಿದ್ದಾರೆ ಎನ್ನಲಾದ ಪ್ರಕರಣದ ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376(2)(n)ಮತ್ತು 417 ರ ಅಡಿಯಲ್ಲಿ ದೋಷಿ ಎಂದು ಘೋಷಿಸಿದ್ದ ಮಧ್ಯಪ್ರದೇಶದ ವಿಚಾರಣಾ ನ್ಯಾಯಾಲಯ, ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಅಪರಾಧಿ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಶೇಷ ಅನುಮತಿ ಕೋರಿ ಅಪರಾಧಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ಸೂಕ್ಷ್ಮ ಸ್ವರೂಪವನ್ನು ಅರಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ. ಶರ್ಮಾ ಅವರು, ತಮ್ಮ ಕೊಠಡಿಯಲ್ಲಿ ಪ್ರಕರಣದ ರಹಸ್ಯ ವಿಚಾರಣೆ ನಡೆಸುವ ತೀರ್ಮಾನ ಮಾಡಿದರು. ಗುರುವಾರ ಮಧ್ಯಾಹ್ನದ ಊಟಕ್ಕೆ ಮುಂಚಿನ ಅವಧಿಯಲ್ಲಿ ಎರಡೂ ಕಡೆಯವರನ್ನು (ಅರ್ಜಿದಾರ ಅಪರಾಧಿ ಮತ್ತು ಪ್ರತಿವಾದಿ ಸಂತ್ರಸ್ತೆ) ಕರೆದು ಕಾನೂನು ಸಲಹೆಗಾರರೊಂದಿಗೆ ಗೌಪ್ಯ ಚರ್ಚೆ ನಡೆಸಿದರು.
ಅರ್ಜಿದಾರ ಮತ್ತು ಸಂತ್ರಸ್ತೆ ಕಡೆಯವರಿಗೂ ಪರಸ್ಪರ ಚರ್ಚೆ ನಡೆಸಲು ನ್ಯಾಯಮೂರ್ತಿಗಳು ಅವಕಾಶ ನೀಡಿದ್ದರು. ಬಳಿಕ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಗೊಂಡಾಗ ಅರ್ಜಿದಾರ ಮತ್ತು ಸಂತ್ರಸ್ತೆ ಪರಸ್ಪರ ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಮದುವೆಯ ಕುರಿತು ಸಾಧ್ಯವಾದಷ್ಟು ಬೇಗ ನಿರ್ಧರಿಸುವಂತೆ ಎರಡೂ ಕಡೆಯವರ ಪೋಷಕರಿಗೆ ಸೂಚಿಸಿತು.
“ಅರ್ಜಿದಾರರು ಮತ್ತು ಪ್ರತಿವಾದಿ ಸಂಖ್ಯೆ 2 ಪರಸ್ಪರ ಮದುವೆಯಾಗಲು ಸಿದ್ಧರಿದ್ದೇವೆ ಎಂದು ನಮ್ಮ ಮುಂದೆ ನಿಸ್ಸಂದಿಗ್ಧವಾಗಿ ಹೇಳಿದ್ದಾರೆ. ಅವರ ವಿವಾಹದ ಬಗ್ಗೆ ಅವರ ಪೋಷಕರು ನಿರ್ಧರಿಸುತ್ತಾರೆ. ಮದುವೆ ಸಾಧ್ಯವಾದಷ್ಟು ಬೇಗ ನಡೆಯಲಿ ಎಂದು ನಾವು ಆಶಿಸುತ್ತೇವೆ. ಹಾಗಾಗಿ, ನಾವು ಅರ್ಜಿದಾರರ ಶಿಕ್ಷೆಯನ್ನು ನಾವು ಅಮಾನತುಗೊಳಿಸುತ್ತಿದ್ದೇವೆ ಮತ್ತು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದ್ದಾಗಿ livelaw.in ವರದಿ ಮಾಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 25, 2025ಕ್ಕೆ ನಿಗದಿ ಮಾಡಲಾಗಿದೆ. ಗುರುವಾರ ನಡೆದಿರುವುದು ಭಾಗಶಃ ವಿಚಾರಣೆ ಎಂದು ಹೇಳಲಾಗಿದೆ. ಅರ್ಜಿದಾರ ಮತ್ತು ಪ್ರತಿವಾದಿಯ ಮದುವೆಯ ಕುರಿತು ನ್ಯಾಯಾಲಯ ಮೇಲ್ವಿಚಾರಣೆ ಮಾಡಲಿದೆ.
ಮಧ್ಯಪ್ರದೇಶದ ಸಾಗರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮದುವೆಯಾಗುವುದಾಗಿ ಭರವಸೆ ಕೊಟ್ಟು ತನ್ನ ಮೇಲೆ 2016 ರಿಂದ ಲೈಂಗಿಕ ಸಂಬಂಧ ಬೆಳೆಸಿದ ಯುವಕ, 2018ರಲ್ಲಿ ಮದುವೆಯಾಗಲು ನಿರಾಕರಿಸಿದರು ಎಂದು ಆರೋಪಿಸಿದ ಯುವತಿ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರರ ಪರ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ವಾದ ಮಂಡಿಸಿದ ಅವರ ವಕೀಲರು, “ಇಬ್ಬರದ್ದು ಒಪ್ಪಿತ ಸಂಬಂಧವಾಗಿತ್ತು, ಅತ್ಯಾಚಾರವಲ್ಲ. ವಿಚಾರಣೆ ವೇಳೆ ಪ್ರತಿವಾದಿ ಪೋಷಕರ ಒತ್ತಡಕ್ಕೆ ಮಣಿದು ದೂರು ನೀಡಿರುವುದು ಗೊತ್ತಾಗಿದೆ. ಅರ್ಜಿದಾರರು ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಉಜ್ವಲ ಭವಿಷ್ಯದ ನಿರೀಕ್ಷೆಗಳನ್ನು ಹೊಂದಿದ್ದಾರೆ. ದೀರ್ಘಕಾಲದ ಸೆರೆವಾಸವು ಅವರ ವೃತ್ತಿ ಮತ್ತು ಮುಂದಿನ ಜೀವನವನ್ನು ನಾಶಪಡಿಸಲಿದೆ” ಎಂದು ಹೇಳಿದ್ದಾರೆ.
ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಅರ್ಹತೆಗಳ ಆಧಾರದ ಮೇಲೆ ನಿರ್ಧರಿಸುವ ಬದಲು, ಪರಸ್ಪರ ವಯಸ್ಕ ಒಪ್ಪಿಗೆಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು livelaw.in ಹೇಳಿದೆ.
ಸ್ವಾತಂತ್ರ್ಯದ 80 ವರ್ಷಗಳ ಬಳಿಕವೂ ದಲಿತರ ಮೇಲಿನ ತಾರತಮ್ಯ ನೋವಿನ ಸಂಗತಿ: ಮದ್ರಾಸ್ ಹೈಕೋರ್ಟ್


